ಬೆಂಗಳೂರು: ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆಯದೇ ಸಾರ್ವಜನಿಕ ರಸ್ತೆಗಳು ಮತ್ತು ಸರ್ಕಾರಿ ಸ್ಥಳಗಳಲ್ಲಿ ನಮಾಜು (ಪ್ರಾರ್ಥನೆ) ಮಾಡುವುದನ್ನು ತಕ್ಷಣವೇ ನಿರ್ಬಂಧಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಸಾರ್ವಜನಿಕ ಸ್ವತ್ತುಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳು ಪರವಾನಗಿ ಇಲ್ಲದೆ ನಡೆಸುವ ಚಟುವಟಿಕೆಗಳನ್ನು ಅಕ್ರಮ ಪ್ರವೇಶವೆಂದು ಪರಿಗಣಿಸಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪತ್ರ ಬರೆದಿರುವುದು ಮಹತ್ವ ಪಡೆದಿದೆ.
ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿ ಇಲ್ಲದೇ ನಮಾಜು ನಡೆಸುವುದನ್ನು ಗಮನಿಸಲಾಗಿದೆ. ಇದರಿಂದ ಸಂಚಾರಕ್ಕೆ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ತೀವ್ರ ಧಕ್ಕೆಯಾಗುತ್ತದೆ. ಈ ರೀತಿಯ ಪ್ರಾರ್ಥನೆಗಳಿಂದ ಸೃಷ್ಟಿಯಾಗುವ ಸಂಚಾರ ದಟ್ಟಣೆಯು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ.
ಪ್ರಯಾಣಿಕರ ಸುಗಮ ಸಂಚಾರದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಅಲ್ಲದೆ, ಸರ್ಕಾರಿ ಕಚೇರಿ ಆವರಣ ಮತ್ತು ಅನುದಾನಿತ ಸಂಸ್ಥೆಗಳೊಳಗೆ ನಮಾಜ್ ನಡೆಸುವುದಕ್ಕೂ ಕಾನೂನು ಪ್ರಕಾರ ಅವಕಾಶ ಇರುವುದಿಲ್ಲ. ಈ ಎಲ್ಲವನ್ನೂ ನಿಯಂತ್ರಿಸಬೇಕು ಎಂದು ಯತ್ನಾಳ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇಂತಹ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಿ, ಉಳಿದವುಗಳನ್ನು ನಿರ್ಬಂಧಿಸುವುದು ಸರ್ಕಾರದ ತಾರತಮ್ಯದ ನೀತಿಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ತಕ್ಷಣವೇ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಕಾನೂನುಬಾಹಿರವಾಗಿ ನಮಾಜ್ ಮಾಡುವುದನ್ನು ನಿರ್ಬಂಧಿಸುವಂತೆ ಸೂಚನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ರೀತಿಯ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ದಿಷ್ಟ ಮಾರ್ಗದರ್ಶಿ ಸೂತ್ರ (SOP) ಜಾರಿಗೊಳಿಸಬೇಕು. ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಸಶಸ್ತ್ರ ಪಡೆಗಳ ಮೂಲಕ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವುದರಿಂದ, ಸರ್ಕಾರದ ಜಾತ್ಯತೀತ ನಿಲುವು, ಸಮಾನತೆ, ಕಾನೂನು-ಸುವ್ಯವಸ್ಥೆ, ಮತ್ತು ಧಾರ್ಮಿಕ ಒಳಗೊಳ್ಳುವಿಕೆಯನ್ನು ಎತ್ತಿ ಹಿಡಿದಂತಾಗುತ್ತದೆ. ಹೀಗಾಗಿ, ಅನುಮತಿ ಪಡೆಯದೇ ಸಾರ್ವಜನಿಕ ನಮಾಜನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.