Friday, November 29, 2024

ಸತ್ಯ | ನ್ಯಾಯ |ಧರ್ಮ

ಭ್ರಷ್ಟಾಚಾರ ಪ್ರಕರಣ : ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ತಟ್ಟಲಿದೆ ಪ್ರಾಸಿಕ್ಯೂಷನ್ ಬಿಸಿ

ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ದ ದಾಖಲಾದ ದೂರಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಭ್ರಷ್ಟಾಚಾರ ದೂರಿನ ಅನ್ವಯ ರಾಜ್ಯಪಾಲರ ಮೇಲೆ ಒತ್ತಡ ತಂತ್ರ ಹೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು 2020ರ ನ.19 ರಂದು ಎಸಿಬಿಗೆ ದೂರು ನೀಡಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಅಡಿ ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದರು. ಆದರೆ, ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಹಾಲಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅನುಮತಿ ಅಗತ್ಯ ಎಂದು ಹೇಳಿತ್ತು.

ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ತಿರಸ್ಕರಿಸಿ ದ್ದರು. ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಗದ ಕಾರಣ ಉಳಿದ ಆರೋಪಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಇದೀಗ ಈ ಪ್ರಕರಣವನ್ನು ಕೆದಕಿರುವ ಸಚಿವ ಸಂಪುಟವು, ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿರುವ ನಿರ್ಣಯ ಹಿಂಪಡೆಯಬೇಕು. ಜತೆಗೆ ಭ್ರಷ್ಟಾಚಾರ ಪ್ರತಿಬಂಧಿಕತ ಸೆಕ್ಷನ್ 17-ಎ ಅಡಿ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧಾರ ಮಾಡಿದೆ. ತನ್ಮೂಲಕ ಯಡಿಯೂರಪ್ಪ ಮಾತ್ರವಲ್ಲದೆ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೂ ಆತಂಕ ಶುರುವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page