Wednesday, August 21, 2024

ಸತ್ಯ | ನ್ಯಾಯ |ಧರ್ಮ

“ಅಪ್ಪ ಮಕ್ಕಳನ್ನು ಮನೆಗೆ ಕಳಿಸದೇ ವಿರಮಿಸಲ್ಲ” ; ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

“ಅಪ್ಪ, ಮಕ್ಕಳಿಂದ ಬಿಜೆಪಿ ಪಕ್ಷ ನಾಶವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ನಡೆ ಬಗ್ಗೆ ನಮಗೆ ತೀವ್ರ ವಿರೋಧವಿದೆ. ಅತೃಪ್ತರೆಲ್ಲಾ ಸೇರಿ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾವು ರಾಜ್ಯಾಧ್ಯಕ್ಷನ ನೇತೃತ್ವದ ಪಾದಯಾತ್ರೆಯ ಭಾಗವಾಗುವುದಿಲ್ಲ” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಮತ್ತೊಮ್ಮೆ ತೊಡೆ ತಟ್ಟಿದ್ದಾರೆ.

ಒಂದು ಕಡೆ ಮೂಡಾ ಹಗರಣದ ವಿರುದ್ಧ ಪಾದಯಾತ್ರೆಗೆ ಬಿಜೆಪಿ ಸಜ್ಜಾಗುತ್ತಿದ್ದಂತೆ ಒಂದರ ಮೇಲೊಂದರಂತೆ ತೊಡಕುಗಳನ್ನು ಎದುರಿಸಲು ಶುರುವಾಗಿದೆ. ಒಂದು ಕಡೆ ಕೇಂದ್ರ ಸಚಿವ ಕುಮಾರಸ್ವಾಮಿ ಉಲ್ಟಾ ಹೊಡೆದು ನಂತರ ಈಗ ಪಾದಯಾತ್ರೆಗೆ ಸಪೋರ್ಟ್ ಮಾಡ್ತೀವಿ ಅನ್ನೋ ರೀತಿಯ ಬ್ಲಾಕ್ ಮೇಲ್ ಗೆ ಇಳಿದರೆ, ಇನ್ನೊಂದು ಕಡೆ ನೇರವಾಗಿ ಸ್ವಪಕ್ಷೀಯರೇ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ತಿರುಗಿ ನಿಂತಿರೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಗುರುವಾರ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸೇರಿದ್ದ ಬಿಜೆಪಿ ರೆಬೆಲ್ ಶಾಸಕರು ಬಿಜೆಪಿ ಪಕ್ಷದ ಒಳಗಿನ ನಡೆಯ ಬಗ್ಗೆ ಮತ್ತು ಪಕ್ಷದೊಳಗಿನ ಯಡಿಯೂರಪ್ಪ ಕುಟುಂಬದ ಸರ್ವಾಧಿಕಾರದ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದಾರೆ. ಈಗಾಗಲೇ ಬಿಜೆಪಿ ಬಹುತೇಕರು ಇವರಿಗೆ ಬೆಂಬಲವಾಗಿ ನಿಂತಿದ್ದು ಹೈಕಮಾಂಡ್ ಗೆ ವಿಷಯ ಮುಟ್ಟಿಸಲು ಇನ್ನೇನು ಎರಡು ದಿನಗಳಲ್ಲಿ ದೆಹಲಿಗೆ ಹೋಗುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳಾದರೂ ಈ ರೆಬೆಲ್ ಶಾಸಕರ ಕಟ್ಟಿ ಹಾಕಲು ರಾಜ್ಯ ಘಟಕ ಯಾಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕೂಡ ಹಲವರಲ್ಲಿ ಮೂಡಿದೆ. ಈಗಾಗಲೇ ವಿಜಯೇಂದ್ರ ‘ನನ್ನ ತಾಳ್ಮೆಗೂ ಮಿತಿ ಇದೆ’ ಎಂದು ಟಿವಿ ಸಂದರ್ಶನಗಳಲ್ಲಿ ಹೇಳಿದ್ದರೂ ಯತ್ನಾಳ್ ಮತ್ತು ಟೀಂ ಅನ್ನು ಯಾವ ಕಾರಣಕ್ಕೂ ಮುಟ್ಟಲು ಸಾಧ್ಯವಿಲ್ಲ ಎಂಬಂತಾಗಿದೆ. ಹೀಗಿರುವಾಗ ಯತ್ನಾಳ್ ಬೆನ್ನಿಗೆ ಯಾರಿರಬಹುದು ಎಂಬ ಬಗ್ಗೆ ನೋಡಿದಾಗ ಮತ್ತೆ ಅಲ್ಲಿ ಬಿಜೆಪಿಯ ಬಣ ರಾಜಕೀಯ ಹೊರ ಬೀಳುತ್ತಿದೆ.

“ಮೊದಲು ನಾವೆಲ್ಲರೂ ದೊಡ್ಡ ಸಭೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಭೆಯಲ್ಲಿ ಬರುವ ತೀರ್ಮಾನದಂತೆ ಹೈಕಮಾಂಡ್​ಗೆ ದೂರು ಕೊಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಜೊತೆ ಸೇರುವವರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಇಷ್ಟು ಅಸಮಾಧಾನ ಇದೆ ಅಂತಾ ನನಗೆ ಅನ್ನಿಸಿರಲಿಲ್ಲ” ಎಂದು ಯತ್ನಾಳ್ ಹೇಳಿದ್ದಾರೆ.

ಈವರೆಗೆ ಬಿಜೆಪಿಯಲ್ಲಿ ಕೇವಲ ಎರಡು ಬಣ ಎಂದುಕೊಂಡಿದ್ದವರಿಗೆ ಯತ್ನಾಳ್ ಅಂಡ್ ಟೀಂ ಕಡೆಯಿಂದ ಸ್ಪಷ್ಟ ಸಂದೇಶ ಹೋಗಿದ್ದು, ತಮ್ಮ ತಂಡ ಕೂಡ ಈ ಪಟ್ಟಿಯಲ್ಲಿದೆ ಎಂದು ಯತ್ನಾಳ್ ಸಂದೇಶ ರವಾನಿಸಿದ್ದಾರೆ. ಈಗ ಎಲ್ಲರಿಗೂ ಯಡಿಯೂರಪ್ಪನವರೇ ಟಾರ್ಗೆಟ್ ಆಗಿರೋದ್ರಿಂದ ವಿಜಯೇಂದ್ರ ಮುಂದಿನ ದಿನಗಳಲ್ಲಿ ಯಾವ ನಿಲುವು ತಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page