Thursday, June 20, 2024

ಸತ್ಯ | ನ್ಯಾಯ |ಧರ್ಮ

ಉತ್ತರ ಪ್ರದೇಶದ ಖಾಸಗಿ ಮದರಸಾಗಳ ಸಮೀಕ್ಷೆಗೆ ಹೊರಟ ಯೋಗಿ ಸರ್ಕಾರ

ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಖಾಸಗಿ ಮದರಸ ಮತ್ತು ಉರ್ದು ಶಿಕ್ಷಣ ಸಂಸ್ಥೆಗಳ ಸರ್ವೆ ಮಾಡಲು ಅಧಿಕಾರಿಗಳಿಗೆ ಆದೇಶಿಸಿದೆ. ಅದರಂತೆ ಆಗಸ್ಟ್ 31 ರಿಂದ ಅಧಿಕಾರಿಗಳು ಉತ್ತರ ಪ್ರದೇಶದಲ್ಲಿ ಖಾಸಗಿ ಮದರಸ ಮತ್ತು ಶಿಕ್ಷಣ ಸಂಸ್ಥೆಗಳ ಸರ್ವೆಯಲ್ಲಿ ತೊಡಗಿದ್ದಾರೆ.

ಸಧ್ಯ ಈ ಒಂದು ಬೆಳವಣಿಗೆಯಿಂದ ಉತ್ತರ ಪ್ರದೇಶ ಭಾಗದ ಮುಸ್ಲಿಂ ಸಮುದಾಯಕ್ಕೆ ಆತಂಕ ಎದುರಾಗಿದೆ. ಸರ್ಕಾರ ಖಾಸಗಿ ಮದರಸ ಮತ್ತು ಶಿಕ್ಷಣ ಸಂಸ್ಥೆಗಳ ಪರವಾಗಿ ರದ್ದು ಅಥವಾ ಅಕ್ರಮ ಎಂದು ಘೋಷಿಸಿ “ಬುಲ್ಡೋಜರ್” ಕ್ರಮಕ್ಕೆ ಮುಂದಾಗಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮೂಲಗಳ ಪ್ರಕಾರ, ಸೆಪ್ಟಂಬರ್ 6 ರಂದು ಹೊಸದಿಲ್ಲಿಯ ದೇವಬಂದಿ ಸ್ಕೂಲ್ ಆಫ್ ಥಾಟ್‌ಗೆ ಸೇರಿದ ಇಸ್ಲಾಮಿಕ್ ವಿದ್ವಾಂಸರ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲೇಮಾ-ಎ-ಹಿಂದ್‌ನ ಸಭೆಯಲ್ಲಿ ಅವರು ಈ ಭಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಸಚಿವ ಡ್ಯಾನಿಶ್ ಆಜಾದಿ ಅನ್ಸಾರಿ ಹೇಳಿದ್ದಾರೆ.

“ಸರ್ಕಾರ ಖಾಸಗಿ ಮದರಸಗಳ ತನಿಖೆ ನಡೆಸಿದರೆ ಯಾವುದೇ ಅಭ್ಯಂತರವಿಲ್ಲ. ಆದರೆ ಧರ್ಮದ ಆಂತರಿಕ ವಿಚಾರಗಳ ಬಗ್ಗೆ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಸ್ಲಿಂ ಸಂಘಟನೆ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಮಾಧ್ಯಮಗಳಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್ 24 ರಂದು ದಾರುಲ್ ಉಲುಮ್ ದಿಯೋಬಂದ್ ನಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ಮುಸ್ಲಿಂ ಸಂಘಟನೆಗಳೊಂದಿಗೆ ಚರ್ಚೆ ನಡೆಸುವುದಾಗಿಯೂ ಹೇಳಿದ್ದಾರೆ.

ಇನ್ನೊಂದು ಕಡೆ AIMIM ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತ್ತು BSP ನಾಯಕಿ ಮಾಯಾವತಿ ಈ ಬೆಳವಣಿಗೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಓವೈಸಿ ಈ ಬೆಳವಣಿಗೆಯನ್ನು ‘ಮಿನಿ ಎನ್.ಆರ್.ಸಿ’ ಎಂದು ಕರೆದರೆ, ಮಾಯಾವತಿಯವರು “ಮುಸಲ್ಮಾನರ ಆಂತರಿಕ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಿ ಅವರನ್ನು ಭಯೋತ್ಪಾದಕ ಪಟ್ಟ ಕಟ್ಟಲು ತಯಾರಿ ನಡೆಸಿದೆ” ಎಂದು ಟೀಕಿಸಿದ್ದಾರೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಏಕೈಕ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ “ಯಾವುದೇ ಕೇಂದ್ರವನ್ನು ನೆಲಸಮ ಮಾಡುವುದಿಲ್ಲ” ಎಂದು ಭರವಸೆ ನೀಡಿದರು. ಅಲ್ಲದೆ “ಮದರಸಾಗಳನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದರ ಬಗ್ಗೆ ಉತ್ತರ ಪ್ರದೇಶ ಸರ್ಕಾರ “ಮದರಸಾಗಳ ನೈಜ ಸ್ಥಿತಿಯನ್ನು ತಿಳಿದುಕೊಳ್ಳುವುದು ಮತ್ತು ಅವುಗಳ ಗುಣಮಟ್ಟವನ್ನು ಎತ್ತುವಲ್ಲಿ ಸಹಾಯ ಮಾಡುವುದು ಸಮೀಕ್ಷೆಯ ಉದ್ದೇಶವಾಗಿದೆ. ಸಮೀಕ್ಷೆಯ ಸಂದರ್ಭದಲ್ಲಿ ಖಾಸಗಿ ಮದರಸಾಗಳ ಮಾಲೀಕರಿಗೆ ಸರ್ಕಾರದ ಯಾವ ಯೋಜನೆಗಳು ಬೇಕು ಎಂದು ಕೇಳಲಾಗುತ್ತದೆ. ಅಲ್ಪಸಂಖ್ಯಾತರಿಗಾಗಿ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಅವರಿಗೆ ಮಾಹಿತಿ ನೀಡಲಾಗುವುದು.” ಎಂದು ಸ್ಪಷ್ಟಪಡಿಸಿದೆ.

ಸರ್ಕಾರ ಖಾಸಗಿ ಮದರಸಗಳ ಸಮೀಕ್ಷೆ, ಅದರ ಉನ್ನತೀಕರಣ ಅಥವಾ ಸರ್ಕಾರದ ಯೋಜನೆಗಳ ಬಗ್ಗೆ ಸ್ಪಷ್ಟಪಡಿಸುವುದಕ್ಕಿಂತ ಮುನ್ನ ಸರ್ಕಾರದ ಅಧೀನದಲ್ಲಿ ಇರುವ ಮದರಸಾಗಳ ಅಭಿವೃದ್ಧಿ ನಡೆಸಲಿ ಎಂಬುದು ಮುಸ್ಲಿಂ ಮುಖಂಡರ ಅಭಿಪ್ರಾಯವಾಗಿದೆ. ಸಧ್ಯ ಈ ಬೆಳವಣಿಗೆ ಉತ್ತರ ಪ್ರದೇಶದ ಅಲ್ಪಸಂಖ್ಯಾತರಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ ಎಂಬುದಂತೂ ಸ್ಪಷ್ಟ.

Related Articles

ಇತ್ತೀಚಿನ ಸುದ್ದಿಗಳು