ಅಧಿಕಾರಿಗಳಿಗೆ ಕಿರುಕುಳ ನೀಡಿಲ್ಲ, ಕೆಲಸ ನಿರ್ವಹಿಸಿದ್ದೀನಿ –  ರೇವಣ್ಣ ತಿರುಗೇಟು

ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅಧಿಕಾರಿಗಳ ವಿರುದ್ಧ ಹಾಗೂ ಇತ್ತೀಚಿನ ಆರೋಪಗಳ ಕುರಿತು ತೀವ್ರ ಪ್ರತಿಕ್ರಿಯೆ ನೀಡಿದರು.

ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದ ಅವರು, ಹಾಸನಾಂಬ ಜಾತ್ರೆ ಸಂಬಂಧ ಲೋಕಾಯುಕ್ತ ತನಿಖೆ ನಡೆಯುತ್ತಿರುವುದಾಗಿ ತಿಳಿಸಿದರು. “ಅಧಿಕಾರಿಗಳಿಗೆ ಕಿರುಕುಳ ಕೊಟ್ಟು ನನಗೆ ಏನು ಪ್ರಯೋಜನ? ಒಳ್ಳೆಯ ಕೆಲಸ ಮಾಡದೆ ಲೂಟಿ ಮಾಡುತ್ತಿದ್ದರೆ ಪ್ರಶ್ನಿಸುವುದು ನನ್ನ ಕರ್ತವ್ಯ” ಎಂದು ಸ್ಪಷ್ಟಪಡಿಸಿದರು. ಅಸೆಂಬ್ಲಿಯಲ್ಲಿ ವಿಷಯಗಳನ್ನು ಪ್ರಸ್ತಾಪಿಸದೇ ಇದ್ದರೆ ತಮ್ಮ ಪಾತ್ರವೇನು ಎಂಬ ಪ್ರಶ್ನೆ ಕೇಳಿದ ರೇವಣ್ಣ, ಜಿಲ್ಲೆಯಲ್ಲಿ ಅನ್ಯಾಯ ನಡೆಯುತ್ತಿದ್ದರೆ ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. “ನಾನು ಈಗ ಸಚಿವನಲ್ಲ, ನಮ್ಮ ಸರ್ಕಾರವೂ ಇಲ್ಲ. ಹಾಗಿದ್ದರೂ ನಾನು ಕಿರುಕುಳ ನೀಡುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದರು.

ಒಬ್ಬ ಶಾಸಕರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದ ಅವರು, ಜಿಲ್ಲಾಧಿಕಾರಿ ಒಬ್ಬ ಶಾಸಕರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಕೆಲವರು ಗಲಾಟೆ ಉಂಟುಮಾಡಲು ಪ್ರಯತ್ನಿಸಿದ್ದರು ಎಂದೂ ಹೇಳಿದರು. ಹಾಸನಾಂಬ ಜಾತ್ರೆ ಸಂದರ್ಭದಲ್ಲಿ ನಡೆದ ಅಸಮರ್ಪಕ ವ್ಯವಸ್ಥೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ಬಟ್ಟೆ ಅಲಂಕಾರವಿಲ್ಲದೆ ತೇರು ಎಳೆಯುವುದು ಸರಿಯೇ?” ಎಂದು ಪ್ರಶ್ನಿಸಿದರು.

ತಮ್ಮನ್ನು ಸಭೆಗಳಿಗೆ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಕೂಡ ಪ್ರಶ್ನಿಸಿದ ರೇವಣ್ಣ, “ಒಳ್ಳೆಯ ಕೆಲಸ ಮಾಡಿದರೆ ಪ್ರಶಂಸಿಸುತ್ತೇವೆ, ಆದರೆ ಬಡವರಿಗೆ ಟೋಪಿ ಹಾಕಿದರೆ ಮೌನವಾಗಿರುವುದಿಲ್ಲ” ಎಂದು ಎಚ್ಚರಿಸಿದರು. ಈ ಮೂಲಕ ಸಂಸದ ಶ್ರೇಯಸ್ ಪಟೇಲ್ ಮಾಡಿದ್ದ ಆರೋಪಗಳಿಗೆ ರೇವಣ್ಣ ತಿರುಗೇಟು ನೀಡಿದರು.

Related Articles

ಇತ್ತೀಚಿನ ಸುದ್ದಿಗಳು