“ಹೊಸ ಬಿಲ್ಡಿಂಗ್ ಕಟ್ಟಿದ್ದೀರಿ, ಒಂದು ಗೇಟ್ ನಿರ್ಮಿಸುವ ಯೋಗ್ಯತೆಯೂ ಇಲ್ಲವೇ – ಸಚಿವ ಕೃಷ್ಣಬೈರೇಗೌಡ

ಹಾಸನ: ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯ ಹೊಸ ಕಟ್ಟಡದ ಅವ್ಯವಸ್ಥೆ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

“ಹೊಸ ಬಿಲ್ಡಿಂಗ್ ಕಟ್ಟಿದ್ದೀರಿ. ಒಂದು ಗೇಟ್ ನಿರ್ಮಿಸುವ ಯೋಗ್ಯತೆಯೂ ಇಲ್ಲವೇ? ದನಗಳ ಆಸ್ಪತ್ರೆ ಎಂದರೆ ದನದ ದೊಡ್ಡಿ ಅಲ್ಲ. ಕೆಲಸ ಮಾಡುವ ಜಾಗ ಸ್ವಚ್ಛ–ಸುರಕ್ಷಿತವಾಗಿರಬೇಕು ಎಂಬ ಸ್ವಾಭಿಮಾನವೂ ಇಲ್ಲವೇ?” ಎಂದು ಸಚಿವರು ಪ್ರಶ್ನಿಸಿದರು. ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ತೋರಿದ ಇಲಾಖೆ, ಕಾಂಪೌಂಡ್ ಗೇಟ್ ನಿರ್ಮಾಣವನ್ನು ಕ್ರಿಯಾ ಯೋಜನೆಯಲ್ಲಿ ನಮೂದಿಸದೇ ಬಿಟ್ಟಿರುವುದೇಕೆ ಎಂದು ಅವರು ಆಕ್ಷೇಪಿಸಿದರು.

ಕ್ಲಿನಿಕ್‌ನಲ್ಲಿ ಸಿಬ್ಬಂದಿ ಗೈರುಹಾಜರಾತಿಯನ್ನೂ ಸಚಿವರು ಗಂಭೀರವಾಗಿ ಎತ್ತಿಹಿಡಿದರು. “ನೀವು ಸೂಚಿಸಿದ ಸಮಯಕ್ಕೆ ನಾನು ಭೇಟಿ ನೀಡಿದಾಗ ಅಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ. ಇದು ಯಾವ ರೀತಿಯ ಆಡಳಿತ?” ಎಂದು ಕಿಡಿಕಾರಿದರು.

ಕಟ್ಟಡವನ್ನು ಯಾವ ಇಲಾಖೆ ನಿರ್ಮಿಸಿದೆ ಎಂಬ ವಿಚಾರದಲ್ಲಿಯೂ ಗೊಂದಲ ತಲೆದೋರಿತು. ಕೆಆರ್‌ಐಡಿಎಲ್ ನಾವು ಕಟ್ಟಿಲ್ಲ ಎನ್ನುತ್ತಿದ್ದರೆ, ಪಿಡಬ್ಲ್ಯೂಡಿ ಇಲಾಖೆಯವರು ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. “ಹಾಗಾದರೆ ಕಟ್ಟಡ ಕಟ್ಟಿದವರು ಯಾರು?” ಎಂದು ಸಚಿವರು ಪ್ರಶ್ನಿಸಿ, ಆಡಳಿತ ವ್ಯವಸ್ಥೆ ಜಡತ್ವದಲ್ಲಿದೆಯೇ ಅಥವಾ ಸಕ್ರಿಯವಾಗಿದೆಯೇ ಎಂದು ವ್ಯಂಗ್ಯವಾಡಿದರು.

Related Articles

ಇತ್ತೀಚಿನ ಸುದ್ದಿಗಳು