Thursday, February 19, 2026

ಸತ್ಯ | ನ್ಯಾಯ |ಧರ್ಮ

ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಯುವಕ ಅನುಮಾನಸ್ಪದ ಸಾ*ವು

ಹಾಸನ: ನಗರದ ಹೊರವಲಯ ಹನುಮಂತಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವ ಎಲೆಕ್ಟ್ರಿಷಿಯನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತ ಯುವಕನ ಸಾವಿನ ಬಗ್ಗೆ ಕುಟುಂಬಸ್ಥರು ಗಂಭೀರ ಅನುಮಾನ ವ್ಯಕ್ತಪಡಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಹನುಮಂತಪುರ ನಿವಾಸಿ ಪುನೀತ್ (26) ಮೃತ ಯುವಕ. ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪುನೀತ್ ಬುಧವಾರ ಬೆಳಿಗ್ಗೆ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದಾನೆ. ಆದರೆ ಮಧ್ಯಾಹ್ನದ ವೇಳೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬಸ್ಥರು, ಬಂಧುಗಳು ಸೇರಿದಂತೆ ನೂರಾರು ಮಂದಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕುಟುಂಬಸ್ಥರ ಗಂಭೀರ ಆರೋಪ

“ಪುನೀತ್ ಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋಗಿದ್ದ. ಆದರೆ ಮೃತದೇಹ ಪತ್ತೆಯಾದ ಬಳಿಕ ಸಮವಸ್ತ್ರ ಬದಲಿಸಲಾಗಿದೆ. ಮಧ್ಯಾಹ್ನ 12 ಗಂಟೆಯಲ್ಲೇ ಮೃತಪಟ್ಟಿದ್ದರೂ ನಮಗೆ ತಕ್ಷಣ ಮಾಹಿತಿ ನೀಡದೇ ಸಂಜೆ 7 ಗಂಟೆಗೆ ಮಾತ್ರ ತಿಳಿಸಲಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಇದು ಸಹಜ ಸಾವು ಅಲ್ಲ, ಕೊಲೆ,” ಎಂದು ಕುಟುಂಬಸ್ಥರು ಆರೋಪಿಸಿದರು.

ಮಾಹಿತಿ ನೀಡುವಲ್ಲಿ ತಡವಾದುದು ಮತ್ತು ಮೃತದೇಹದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page