ಹೊಸದಿಲ್ಲಿ, ಅಕ್ಟೋಬರ್ 10: ಗೆಲುವು ಖಚಿತವಾಗಿದ್ದ ಹರಿಯಾಣದಲ್ಲಿ ಸೋತಿದ್ದನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಲಿನ ಕಾರಣಗಳ ವಿಶ್ಲೇಷಣೆಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಗುರುವಾರ ಪರಿಶೀಲನಾ ಸಭೆ ನಡೆಯಿತು.
ರಾಹುಲ್ ಗಾಂಧಿ ಅವರೊಂದಿಗೆ ಅಜಯ್ ಮಾಕನ್, ಅಶೋಕ್ ಗೆಹ್ಲೋಟ್, ದೀಪಕ್ ಬಬಾರಿಯಾ, ಕೆಸಿ ವೇಣುಗೋಪಾಲ್ ಮತ್ತು ಹರಿಯಾಣ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಹರಿಯಾಣ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇವಿಎಂಗಳಿಂದ ಸೋತಿದ್ದೇವೆ ಎಂದು ಮುಖಂಡರು ಹೇಳಿದಾಗ, ಎಣಿಕೆ ಮತ್ತು ಇವಿಎಂಗಳಲ್ಲಿ ಎಲ್ಲಿ ತಪ್ಪುಗಳಾಗಿವೆ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ನಾಯಕರಿಗೆ ಸೂಚಿಸಿದರು. ‘ನೀವು ಸ್ವಾರ್ಥಿಗಳು. ನಿಮ್ಮ ಬಗ್ಗೆ ಯೋಚಿಸಿದಿರಿ ಆದರೆ ಪಕ್ಷದ ಬಗ್ಗೆ ಯೋಚಿಸಲಿಲ್ಲ.
ಪರಸ್ಪರ ಕಚ್ಚಾಟ ನಡೆಸಿ ಮಾಡಿ ಪಕ್ಷಕ್ಕೆ ಹಾನಿ ಮಾಡಿದ್ದೀರಿ. ಇಲ್ಲದಿದ್ದರೆ ನಾವೇ ಗೆಲ್ಲುತ್ತಿದ್ದೆವು ಎಂದು ಹರ್ಯಾಣ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿ ರಾಹುಲ್ ಗಾಂಧಿ ಸಭೆಯಿಂದ ನಿರ್ಗಮಿಸಿದರು ಎನ್ನಲಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವಿನ ಕಚ್ಚಾಟದಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು ಎಂದು ಚುನಾವಣೆಯ ನಂತರ ಹಲವು ವಿಶ್ಲೇಷಣೆಗಳು ನುಡಿದಿದ್ದವು.