Sunday, June 23, 2024

ಸತ್ಯ | ನ್ಯಾಯ |ಧರ್ಮ

ಯುವಜನರು, ಫ್ಯಾಸಿಸಂ ಮತ್ತು ನಿರುದ್ಯೋಗ

ಫ್ಯಾಸಿಸಂನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು ಎನ್ನುವ ಮಾತುಗಳು ಲೇಖಕ, ಪತ್ರಕರ್ತ ಹರ್ಷಕುಮಾರ್‌ ಕುಗ್ವೆಯವರದು. ಸ್ಲಮ್ ಜನಾಂದೋಲನ ಸಂಸ್ಥೆಯ ಕಾರ್ಯಕ್ರಮದಲ್ಲಿ ಅವರು ಮಂಡಿಸಿದ ಉಪನ್ಯಾಸದ ಪೂರ್ಣಪಾಠ ಪೀಪಲ್‌ ಮೀಡಿಯಾದಿಂದ ನಿಮಗಾಗಿ.

ಹೊಸ ನಾಡನ್ನು ಕಟ್ಟುವ ಸವಾಲು ಇವತ್ತಿನದಲ್ಲ. ಜನರಿಗೆ ಕಷ್ಟ ಕೋಟಲೆಗಳು ಇರಬಾರದು, ನಿರುದ್ಯೋಗ ಇರಬಾರದು, ಬೆಲೆ ಏರಿಕೆ ಇರಬಾರದು, ಗಂಡು ಹೆಣ್ಣೆಂಬ ಶೋಷಣೆಗಳು ಇರಬಾರದು, ಭ್ರಷ್ಟಾಚಾರ ಇರಬಾರದು- ಈ ರೀತಿಯೆಲ್ಲಾ ಸಮಸ್ಯೆಗಳು ಇಲ್ಲದ ಹಾಗೆ, ಮನುಷ್ಯ – ಮನುಷ್ಯನಂತೆ ಕಾಣುವ ಹಾಗೆ ನೋಡುವುದೇ ಹೊಸ ನಾಡನ್ನು ಕಟ್ಟುವ ಕ್ರಿಯೆ. ಇಂತಹ ಒಂದು ಹೊಸ ನಾಡನ್ನು ಕಟ್ಟುವುದಕ್ಕೆ ಬಹಳಷ್ಟು ಜನರು ಹೋರಾಟಗಳನ್ನು ಮಾಡಿದ್ದಾರೆ, ಚಳುವಳಿಗಳನ್ನು ಕಟ್ಟಿದ್ದಾರೆ, ಅಧ್ಯಯನ ಮಾಡಿದ್ದಾರೆ, ಸಾಹಿತ್ಯ ರಚಿಸಿದ್ದಾರೆ, ಸಂಶೋಧನೆ ಮಾಡಿದ್ದಾರೆ. ಇಂಥಾ ಹಲವು ಪ್ರಯತ್ನಗಳು ಚರಿತ್ರೆಯಲ್ಲಿ ನಡೆದಿವೆ. 

ಇನ್ನೂರು ಮುನ್ನೂರು ವರ್ಷಗಳ ಹಿಂದಿನದ್ದನ್ನು ಅವಲೋಕಿಸಿದರೆ ಆಗಿನ ಪರಿಸ್ಥಿತಿ ಬಹಳ ಗಂಭೀರವಾಗಿತ್ತು, ಕ್ರೂರವಾಗಿತ್ತು. ಇವತ್ತು ಇದರ ಪಳೆಯುಳಿಕೆಯನ್ನು ಬೇರೆ ಬೇರೆ ರೂಪದಲ್ಲಿ, ಬೇರೆ ಬೇರೆ ಊರುಗಳಲ್ಲಿ ನೋಡುತ್ತಿದ್ದೇವೆ. ಚಿಕ್ಕಮಗಳೂರಿನಲ್ಲಿ ದಲಿತ ಕುಟುಂಬಗಳ ಹೆಣ್ಣುಮಕ್ಕಳನ್ನು ಎಸ್ಟೇಟ್ ಮಾಲೀಕನೊಬ್ಬ ಕೂಡಿ ಹಾಕಿ ದೌರ್ಜನ್ಯ ಮಾಡಿದ್ದನ್ನು ನೀವು ಪತ್ರಿಕೆಗಳಲ್ಲಿ ನೋಡಿದ್ದೀರಿ. ಇಂಥದ್ದನ್ನೆಲ್ಲ ನೀವು ತಮಿಳು ಸಿನಿಮಾಗಳಲ್ಲಿ ನೋಡಿರುತ್ತೀರಿ. ಸುಮಾರು ವರ್ಷಗಳ ಹಿಂದೆ ಹಂಗರಹಳ್ಳಿ ಜೀತ ಪ್ರಕರಣ ಬೆಳಕಿಗೆ ಬಂತು. 70 ವರ್ಷಗಳ ಹಿಂದೆ ಈ ಪರಿಸ್ಥಿತಿ ಇನ್ನೂ ಭೀಕರವಾಗಿತ್ತು. ಆದರೆ ಇವತ್ತು ಸ್ವಲ್ಪ ಸುಧಾರಿಸಿದೆ. ಇದು ಸಾಧ್ಯವಾಗಿದ್ದು ಹೋರಾಟಗಳಿಂದ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಬರೆದಿದ್ದೆ ಈ ಕಾರಣಕ್ಕಾಗಿ. ಈ ದೇಶದ ಪರಿಸ್ಥಿತಿ ಬದಲಾಗಬೇಕು ಎಂದು ಅವರು ಸಂಕಲ್ಪ ಮಾಡಿದ್ದರು. ಅದರ ಪರಿಣಾಮವಾಗಿ ಭಾರತದ ಸಂವಿಧಾನದಲ್ಲಿ ಇಂತಹ ಅನ್ಯಾಯಕ್ಕೆ ಅವಕಾಶ ಇಲ್ಲ ಎನ್ನುವುದನ್ನು ಹೇಳುವಷ್ಟು ಧೈರ್ಯ ಇದೆ ನಮಗೆ. 

ಮೂರು ತಿಂಗಳ ಹಿಂದೆ ಒಬ್ಬ ವಿದ್ಯಾವಂತ ಕೊರಗ ಜಾತಿಯ ಯುವಕನ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ಮೇಲ್ಜಾತಿಯವರ ಮಾತು ಕಟ್ಟಿಕೊಂಡು ಪೊಲೀಸರು ದೌರ್ಜನ್ಯ ನಡೆಸಿದರು. ಈಗಲೂ ಸಹ ದೌರ್ಜನ್ಯಗಳು ಶೋಷಣೆಗಳು ನಡೆಯುತ್ತಲೇ ಇವೆ. ಆದರೆ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ನಾವು ಸಂವಿಧಾನದ ಮೂಲಕ ರಕ್ಷಣೆ ಪಡೆಯುವ ಅವಕಾಶ ಮತ್ತು ಧೈರ್ಯ ಸಾಧ್ಯವಾಗಿದೆ. ಹಾಗಾಗಿ ಹೊಸ ನಾಡನ್ನು ಕಟ್ಟಲು ಹೋರಾಟಗಳು ಪ್ರಯತ್ನಗಳು ಎಲ್ಲವೂ ಬೇಕು. ನಮ್ಮದೇ ಜನರು ಹೋಗಿ ವಿಧಾನಸೌಧದಲ್ಲಿ ಮತ್ತು ಸಂಸತ್ತಿನಲ್ಲಿ ಕೂರಬೇಕು. ಅದೇ ರೀತಿ ಬೀದಿಯಲ್ಲಿ ಹೋರಾಟಗಳನ್ನು ಕಟ್ಟಬೇಕು. ಆಗಲೇ ಹೊಸ ನಾಡನ್ನು ಕಟ್ಟುವುದಕ್ಕೆ ಸಾಧ್ಯ. ಆದರೆ ಇವತ್ತು ಹೊಸ ನಾಡನ್ನು ಕಟ್ಟಲು ಬಹಳಷ್ಟು ಸವಾಲುಗಳಿವೆ; ಹೊಸ ಹೊಸ ಸಮಸ್ಯೆಗಳನ್ನು ಅವರು ನಮ್ಮ ಮುಂದೆ ತಂದಿಡುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿದ್ದು ಫ್ಯಾಸಿಸಂ.

ಫ್ಯಾಸಿಸಂ ಅನ್ನುವ ಪದವನ್ನು ನೀವು ಕೇಳಿರಬಹುದು. ಈ ಪದ ಇಟಲಿಯಲ್ಲಿ 1920ರ ಸಮಯದಲ್ಲಿ ಹುಟ್ಟಿಕೊಂಡಿತು. ಜರ್ಮನಿ, ಫ್ರಾನ್ಸ್ ಗಳಂಥ ಯುರೋಪಿಯನ್‌ ದೇಶಗಳಲ್ಲಿ ಅದು ಚಾಲ್ತಿಯಲ್ಲಿತ್ತು. ಇಟಲಿಯಲ್ಲಿ ಮುಸಲೋನಿ ಎಂಬುವವ ಫ್ಯಾಸಿಸ್ಟ್‌ ಪಾರ್ಟಿಯನ್ನು ಮಾಡಿದ್ದ. ಅವನು ಒಬ್ಬ ಸರ್ವಾಧಿಕಾರಿಯಾಗಿ ಯಾವುದೇ ವಿರೋಧವನ್ನು ಸಹ ಸಹಿಸುತ್ತಿರಲಿಲ್ಲ. ವಿರೋಧಿಸಿದವರನ್ನು ಕೊಲೆ ಮಾಡುತ್ತಿದ್ದ. ಅವನಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದ. ಅದೇ ಸಮಯದಲ್ಲಿದ್ದ ಇನ್ನೊಬ್ಬನು ಹಿಟ್ಲರ್‌. ಆತನ ಪಕ್ಷದ ಹೆಸರು ನಾಜಿ ಪಾರ್ಟಿ ಅಂತ, ಇವನೂ ಕೂಡಾ ಫ್ಯಾಸಿಸ್ಟ್‌. ಯಾರ್ಯಾರು ಸರ್ವಾಧಿಕಾರಿಗಳಿದ್ದಾರೋ ಅವರನ್ನೆಲ್ಲಾ ಫ್ಯಾಸಿಸ್ಟ್‌ ಅಂತ ಕರೆಯುತ್ತೇವೆ. ಯಹೂದಿಗಳು ಇದ್ದರು, ಕಮ್ಯೂನಿಸ್ಟರು ಇದ್ದರು. ಇವರೆಲ್ಲರನ್ನೂ ಕೊಲೆ ಮಾಡುವ ಕೆಲಸವನ್ನು ಹಿಟ್ಲರ್‌ ಮಾಡಿದ. ಯಹೂದಿಗಳದು ಆಗ ಒಂದು ಸಣ್ಣ ಸಮುದಾಯ. ಅಲ್ಲಿ ಆವತ್ತು ನಿರುದ್ಯೋಗ ಇತ್ತು, ಬೆಲೆ ಏರಿಕೆ ಇತ್ತು. ಇದಕ್ಕೆಲ್ಲಾ ಮತ್ತು ನಮ್ಮೆಲ್ಲಾ ಕಷ್ಟಗಳಿಗೂ ಕಾರಣ ಈ ಯಹೂದಿಗಳೇ ಎಂದು ಹಿಟ್ಲರ್‌ ಹೇಳುತ್ತಿದ್ದ. ಅಸಲಿಗೆ ಹಿಟ್ಲರ್‌ ಜೊತೆಗಿದ್ದ ಒಂದಷ್ಟು ಕೈಗಾರಿಕೋದ್ಯಮಿಗಳು ಈ ಕಷ್ಟಕ್ಕೆಲ್ಲಾ ಕಾರಣವಾಗಿದ್ದರು. ನಮ್ಮ ದೇಶದಲ್ಲೂ ನೀವು ನೋಡಬಹುದು, ಜನರೆಲ್ಲಾ ಕಷ್ಟದಲ್ಲಿದ್ದಾಗ ಕೆಲವರಿಗೆ ಲಾಭವಾಗುತ್ತಿರುತ್ತದೆ. ಹೀಗೆಯೇ ಜರ್ಮನಿಯಲ್ಲೂ ಆಗುತ್ತಿತ್ತು. ಯಹೂದಿಗಳು ನಮ್ಮ ಧರ್ಮದವರಲ್ಲ, ನಮ್ಮದು  ಜಗತ್ತಿನಲ್ಲಿ ಶ್ರೇಷ್ಠವಾದ ಆರ್ಯನ್‌ ಜನಾಂಗ, ಈ ಯಹೂದಿಗಳು ನಾಶವಾದರೆ ಜರ್ಮನಿಗೆ ಒಳ್ಳೆಯದಾಗುತ್ತದೆ ಎಂದಾಗ ಅಲ್ಲಿನ ಜನ ಅದನ್ನು ಆಗ ನಂಬಿಕೊಂಡರು. 

ತಾನು ಹೇಳುತ್ತಿದ್ದ ಸುಳ್ಳುಗಳನ್ನು ಜನರಿಗೆ ನಂಬಿಸಲು ಹಿಟ್ಲರ್‌ ಆ ಕಾಲದಲ್ಲೇ ಒಂದು ಪ್ರಚಾರ ತಂತ್ರವನ್ನು ಕಂಡುಕೊಂಡಿದ್ದ. ʼದೊಡ್ಡ ದೊಡ್ಡ ಭಾಷಣಗಳನ್ನು ಮಾಡಬೇಡಿ. ಚಿಕ್ಕದಾದ ಘೋಷಣೆಗಳನ್ನು ಮಾತ್ರ ಜನರಿಗೆ ನೀಡುತ್ತಾ ಹೋಗಿ. ನಮ್ಮ ಕಷ್ಟಕ್ಕೆಲ್ಲಾ ಯಹೂದಿಗಳೇ ಕಾರಣ ಎಂದು ಪದೇ ಪದೇ ಹೇಳಿ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗುತ್ತದೆʼ ಎಂದು ಗೋಬೆಲ್ಸ್‌ ಹೇಳಿದ. ಇದಕ್ಕಾಗಿ ಹಿಟ್ಲರ್‌ ಕುರಿತ ಅತೀ ರಂಜನೀಯ ಸಿನಿಮಾಗಳನ್ನು ಮಾಡಿಸಲಾಯಿತು. ಯಾಕೆ ಹೀಗೆ ಮಾಡಿದರು ಎಂದರೆ, ಈ ಸರ್ವಾಧಿಕಾರ ಮಾಡುವವರು ಬೆರಳೆಣಿಕೆಯ ಜನರಿರುತ್ತಾರೆ. ಅವರಿಗೆ ಲಕ್ಷಾಂತರ- ಕೋಟ್ಯಂತರ ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯವಾದ ಕಾರಣ ಆ ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜನರ ಮನಸ್ಸನ್ನು ಹತೋಟಿಗೆ ತಂದುಕೊಳ್ಳುತ್ತಾರೆ. ಜನರ ಆಲೋಚನೆಗಳನ್ನು ಬದಲಿಸುತ್ತಾರೆ.

ಆಫ್ರಿಕಾದಲ್ಲಿ ಒಬ್ಬ ದೊಡ್ಡ ಹೋರಾಟಗಾರ ಇದ್ದ, ಸ್ಟೀವ್‌ ಬಿಕೋ ಎಂಬ ಕಪ್ಪು ಪ್ರಜ್ಞೆಯ ಲೆಜೆಂಡರಿ ಹೋರಾಟಗಾರ. ಆತ ಏನು ಹೇಳಿದ್ದ ಗೊತ್ತೆ? “ದಬ್ಬಾಳಿಕೆ ನಡೆಸುವವರ ಕೈಯಲ್ಲಿನ ದೊಡ್ಡ ಹತಾರ ಎಂದರೆ ದಬ್ಬಾಳಿಕೆಗೆ ಒಳಗಾಗುವವರ ಮನಸ್ಸು” ಎಂದಿದ್ದ. ನಿಮ್ಮ ಮೆದುಳನ್ನು ಯಾರಾದರೂ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾದರೆ ಅವರು ಪವರ್‌ ಫುಲ್‌ ವ್ಯಕ್ತಿಯಾಗುತ್ತಾರೆ. ಅವರು ನಮ್ಮ ಮನಸ್ಸುಗಳ ಜೊತೆ ಆಟವಾಡುತ್ತಾರೆ, ನಿಜವಾದ ಸಮಸ್ಯೆಗಳನ್ನು ಬಿಟ್ಟು ಬೇರೆ ಸಮಸ್ಯೆಗಳ ಕಡೆ ನಮ್ಮನ್ನು ಡೈವರ್ಟ್‌ ಮಾಡುತ್ತಾರೆ.

ಈಗ ನಮ್ಮ ಕಣ್ಣು ಮುಂದೆ ನಡೆಯುತ್ತಿರುವುದಾದರೂ ಏನು? ಇದೇ ಅಲ್ಲವೇ? ಇಂಡಿಯಾದಲ್ಲಿ ಫ್ಯಾಸಿಸಂ ಇಲ್ಲವಾ? ಖಂಡಿತವಾಗಿಯೂ ಇದೆ. ಇದು ನಮ್ಮನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ನೋಡಬೇಕು. ಇಲ್ಲೂ ಕೂಡಾ ಅದೇ ರೀತಿ ಸುಳ್ಳು ಪ್ರಚಾರಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ನಿಯಂತ್ರಿಸಿಕೊಂಡು ಬಹಳ ವ್ಯವಸ್ಥಿತವಾದ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಜನರ ಮನಸುಗಳ ಜೊತೆ ಆಟವಾಡಲಾಗುತ್ತಿದೆ. ಹಿಟ್ಲರ್‌ನ ನಾಜಿ ಸಿದ್ಧಾಂತದ ಹಾಗೆ ನಮ್ಮ ಇಂಡಿಯಾದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಸಿದ್ಧಾಂತವನ್ನು ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಎಸ್‌ ಅನ್ನು ಸರ್ವಾಧಿಕಾರಿ ಸಂಘಟನೆ ಎಂದು ಯಾರೂ ಗುರುತಿಸುವುದಕ್ಕೆ ಆಗುವುದಿಲ್ಲ. ಜರ್ಮನಿಯುಲ್ಲಿ 20 ವರ್ಷ ನಾಜಿ ಸಿದ್ಧಾಂತದಡಿ ಆಳ್ವಿಕೆ ಮಾಡಿದ್ದ ಹಿಟ್ಲರ್, ಕೊನೆಗೆ ಯುದ್ಧದಲ್ಲಿ ಸೋತು ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ. ಆದರೆ ನಮ್ಮ ಇಂಡಿಯಾದಲ್ಲಿ ಫ್ಯಾಸಿಸ್ಟರ ಪ್ಲಾನ್‌ ಇರುವುದು ಕೇವಲ ಒಂದೆರಡು ದಶಕಗಳ ಆಳ್ವಿಕೆಯಲ್ಲ. ಮುಂದಿನ ಎರಡು ಸಾವಿರ ವರ್ಷಗಳ ಕಾಲ ಸರ್ವಾಧಿಕಾರಿ ಆಡಳಿತ. ಇದು ಹಿಟ್ಲರ್‌ ಥರದ ಒಬ್ಬನ ವ್ಯವಸ್ಥೆ ಅಲ್ಲ, ಇದು ವ್ಯವಸ್ಥಿತವಾದ ಸಂಘಟನೆ. 

ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ನೋಡಿ. ಇದ್ದಕ್ಕಿದ್ದಂತೆ ಹಿಜಾಬ್‌ ವಿಷಯ ಬಂತು. ಮುಸ್ಲಿಂ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಹಿಜಾಬ್‌ ಹಾಕಿಕೊಂಡು ಹೋಗುವಂತಿಲ್ಲ ಎಂಬ ಕೂಗು ಎದ್ದಿತು. ಕೇಸರಿ ಶಾಲುಗಳನ್ನು ಹಾಕಿಸಿ ಹುಡುಗರನ್ನು ಶಾಲೆಗಳಿಗೆ ಕಳುಹಿಸಲಾಯಿತು. ಆದರೆ ಕೇಸರಿ ಶಾಲು ಹಾಕಿಕೊಂಡು ಹೋದ ಹುಡುಗರ ನಿಜವಾದ ಸಮಸ್ಯೆಗಳು ಯಾವುವು? ನಮ್ಮ ಪೀಪಲ್‌ ಮೀಡಿಯಾ ಕಚೇರಿಗೆ ಡಾ.ಕೆ.ಪಿ.ಅಶ್ವಿನಿ ಎಂಬ ದಲಿತ ಸಮುದಾಯದ ಹೆಣ್ಣುಮಗಳು ಬಂದಿದ್ದರು. ಅವರನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಜನಾಂಗೀಯ ದ್ವೇಷದ ಕುರಿತು ಅಧ್ಯಯನ ನಡೆಸುವ ಸಮಿತಿಗೆ ಒಬ್ಬ ಸದಸ್ಯರನ್ನಾಗಿ ಮಾಡಲಾಗಿದೆ. ಈಗ ನೀವೇ ಹೇಳಿ-ಹೆಗಲಿಗೆ ಕೇಸರಿ ಶಾಲು ಹಾಕಿಕೊಂಡು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಹೋಗುವ ದೇಶಭಕ್ತರ ಗುಂಪು ನಮ್ಮ ಮಕ್ಕಳಿಗೆ ಮಾದರಿಯಾಗಬೇಕೇ? ಅಥವಾ ಬಾಬಾಸಾಹೇಬರನ್ನು ಮಾದರಿಯಾಗಿಟ್ಟುಕೊಂಡ ಡಾ.ಕೆ.ಪಿ.ಅಶ್ವಿನಿಯವರು ಆದರ್ಶವಾಗಬೇಕೆ? ವಿಶೇಷವಾಗಿ ತಳ ಸಮುದಾಯಗಳಿಂದ ಬಂದಂಥಹ ಹುಡುಗರಿಗೆ ಈ ರೀತಿಯಾಗಿ ತಲೆಗೆ ಧರ್ಮದ ಅಮಲನ್ನು ತುಂಬಿ ಅವರನ್ನು ಬಲಿಗೊಡಲಾಗುತ್ತಿದೆ.

ಎಲ್ಲಿಯವರೆಗೆ ನಾವು ಉನ್ನತ ಶಿಕ್ಷಣ ಪಡೆದು ಉನ್ನತ ಹಂತಕ್ಕೆ, ಆಡಳಿತ ನಡೆಸುವ ಜನಪ್ರತಿನಿಧಿಗಳ ಮಟ್ಟಕ್ಕೆ ಏರುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಯುವಜನರಿಗೆ ಭವಿಷ್ಯವಿಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಆದರೆ ನಮ್ಮಲ್ಲಿ ಒಂದು ಕಡೆ ಶಾಲೆ ಓದುವ ಮಕ್ಕಳನ್ನು ಕೋಮುಗಲಭೆಗಳಿಗೆ ಬಿಡುವ ಕಾರ್ಯ ನಡೆಯುತ್ತಿದೆ. ಇನ್ನೊಂದು ಕಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯದವರು ಬ್ರಾಹ್ಮಣ ಸಮುದಾಯದ 150 ಮಕ್ಕಳನ್ನು ದೆಹಲಿಯಲ್ಲಿರುವ ಸಂಕಲ್ಪ ಅನ್ನುವ ಸಂಸ್ಥೆಗೆ ಸೇರಿಸುತ್ತಾರೆ. ಅವರೆಲ್ಲಾ ಐಎಎಸ್‌ ಆಗುತ್ತಾರೆ. ಇದಕ್ಕೆ ಯಡಿಯೂರಪ್ಪನವರಿಗೆ ಧನ್ಯವಾದಗಳನ್ನು ಹೇಳುವ ವಿಡಿಯೋ ನೋಡಿದೆ ನಾನು. ನಮ್ಮ ಸಮುದಾಯದ ಮಕ್ಕಳಿಗೆ ಇದು ಸಾಧ್ಯವಾ? ಆದರೆ ಕೇವಲ ಒಂದೇ ಜಾತಿಯಲ್ಲಿ ಹುಟ್ಟಿದ್ದಕ್ಕೆ ಅವರಿಗೆ ಇದು ಸಾಧ್ಯವಾಗಿದೆ. ನಮ್ಮ ಧರ್ಮದ ಮೇಲೆ ದಾಳಿಯಾಗುತ್ತಿದೆ ಎಂದು ನಮ್ಮ ಮಕ್ಕಳನ್ನು ಧರ್ಮ ರಕ್ಷಣೆಯ ಕಡೆ ತಿರುಗಿಸುತ್ತಿದ್ದಾರೆ. 

ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಅತೀ ಹೆಚ್ಚು ನಿರುದ್ಯೋಗ ಈಗ ಇದೆ. ಎನ್‌ಎಸ್‌ಎಸ್‌ಓ ಎನ್ನುವ ಕೇಂದ್ರ ಸರ್ಕಾರದ ಸಂಸ್ಥೆ ಇಡೀ ದೇಶದಲ್ಲಿನ ಕೈಗಾರಿಕೆಗಳ ಡೇಟಾ ತರಿಸಿಕೊಂಡು ಎಷ್ಟು ಉದ್ಯೋಗ ಇದೆ, ಎಷ್ಟು ಉದ್ಯೋಗ ಕಳೆದು ಕೊಂಡಿದ್ದಾರೆ ಎಂಬ ವರದಿಯನ್ನು ಮಾಡಿತು. ಕಳೆದ 45 ವರ್ಷಗಳಲ್ಲೇ ಇರದಿದ್ದಷ್ಟು ನಿರುದ್ಯೋಗ ಈಗ ಇದೆ ಎಂಬ ವಿಷಯ ಹೊರಗೆ ಬಂತು. ಆದರೆ ಈ ವರದಿಯನ್ನು ಬಹಿರಂಗಪಡಿಸದಂತೆ ಒತ್ತಡ ಹಾಕಿಲಾಯಿತು. ಇದನ್ನು ವಿರೋಧಿಸಿ ಎನ್‌ ಎಸ್‌ ಎಸ್‌ ಓ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದರ ಅರ್ಥ ವಾಸ್ತವಾಂಶಗಳನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. 2016ರ ನಂತರ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ಅಂಕಿ ಅಂಶಗಳನ್ನೇ ಹತ್ತಿಕ್ಕಲಾಗಿದೆ. ನಿಜವಾಗಿಯೂ ಯಾವುದಕ್ಕೆ ಲೆಕ್ಕ ಕೊಡಬೇಕೊ ಅದನ್ನು ಸರ್ಕಾರ ಕೊಡುವುದರ ಬದಲಾಗಿ ಜನರು ಉದ್ವೇಗಗೊಳ್ಳುವ ವಿಚಾರಗಳ ಲೆಕ್ಕವನ್ನು ಮಾತ್ರ ಕೊಡುತ್ತಿದೆ.

ಪರೇಶ್‌ ಮೇಸ್ತಾ ಎಂಬ ಯುವಕನ ಸಾವನ್ನು ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಲಾಯಿತು. ಧರ್ಮದ ಬಣ್ಣ ಕಟ್ಟಿ ದೊಂಬಿ, ಜಗಳವನ್ನು ಹುಟ್ಟುಹಾಕಲಾಯಿತು. ಈ ಗಲಭೆಯ ಬೆಂಕಿಯನ್ನೇ ಬಳಸಿಕೊಂಡು ಹಲವರು ಚುನಾವಣೆಯಲ್ಲೂ ಗೆದ್ದು ಬಂದರು. ಆದರೆ ಅವನ ಸಾವು ಕೊಲೆಯಲ್ಲ, ಕಾಲು ಜಾರಿಬಿದ್ದು ಆದ ಸಾವು ಎಂದು ಸಿಬಿಐ ವರದಿ ಬಂತು. ಆದರೆ ಈ ಸಾವನ್ನು ಹೇಗೆಲ್ಲ ಬಳಸಿಕೊಳ್ಳಲಾಯಿತು? ಎಷ್ಟೊಂದು ಭಾವನಾತ್ಮಕವಾಗಿ ಜನರ ಜೊತೆ ಆಟವಾಡಲಾಯಿತು? ಇದನ್ನು ನಾವು ನಮ್ಮ ಯುವಜನರಿಗೆ ಅರ್ಥ ಮಾಡಿಸಬೇಕಿದೆ.

ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ ವಿಷಯ ಬರುತ್ತದೆ, ಇದು ಇತ್ತೀಚಿನವರೆಗೂ ಕೂಡಾ ಮೇಲ್ಜಾತಿಗಳಿಂದ ದೂರ ಇದ್ದದ್ದು. ಅಲ್ಲಿರುವ ತಳ ಸಮುದಾಯಗಳ ನಾಯಕರೇ ಭೂತಗಳಾಗಿದ್ದವು. ಇದರಲ್ಲಿ ವೈದಿಕ ಅಂಶಗಳು ಇರಲಿಲ್ಲ. ಭೂತವನ್ನೇ ದೈವ ಎಂದು ನೋಡುತ್ತಾರೆ ಕರಾವಳಿಯಲ್ಲಿ. ವರಾಹ ರೂಪ ಎನ್ನುವುದು ವೈದಿಕ ಪರಂಪರೆಗೆ ಸೇರಿದ್ದು, ಇವತ್ತು ಇದೆಲ್ಲಾ ನಮ್ಮದೆ, ಹಿಂದೂ ಪರಂಪರೆಯದ್ದೇ ಎಂದು ಹೇಳುತ್ತಿದ್ದಾರೆ. ಒಬ್ಬ ಗೊಲ್ಲ ಕೃಷ್ಣನ ಮೂಲಕ ಭಗವದ್ಗೀತೆಯನ್ನು ಹೇಳಿಸುತ್ತಾರೆ. ಅದನ್ನು ನಾವು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ಒಂದು ಬಗೆಯ ಧಾರ್ಮಿಕ ರಾಜಕಾರಣ, ಸಾಂಸ್ಕೃತಿಕ ರಾಜಕಾರಣ.

ಮೊದಲೇ ಹೇಳಿದ ಹಾಗೆ ಈ ಫ್ಯಾಸಿಸಂ ಅನ್ನುವುದು ನಮ್ಮ ಮೆದುಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ತಂತ್ರಗಾರಿಕೆ ಹೊಂದಿರುತ್ತದೆ. ಹಾಗಾಗಿ ನಮ್ಮ ದೊಡ್ಡ ಜವಾಬ್ದಾರಿ ಜನರನ್ನು ಮಾನಸಿಕ ಗುಲಾಮಗಿರಿಯಿಂದ ಹೇಗೆ ಬಿಡಿಸುವುದು ಎಂಬುದೇ ಆಗಿದೆ. ಜ್ಯೋತಿಬಾಪುಲೆ ದಂಪತಿಯವರು ಈ ಗುಲಾಮಗಿರಿಯಿಂದ ಹೊರಗೆ ಬರಬೇಕೆಂದು ಪುಸ್ತಕವನ್ನೇ ಬರೆದು ಶಾಲೆಗಳನ್ನು ತೆರೆದರು. ಶಾಲೆಗೆ ಹೋಗುವುದು ನಿಷಿದ್ಧ ಆಗಿದ್ದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅದನ್ನು ಅರ್ಥ ಮಾಡಿಕೊಂಡು, ಬರೀ ಶೂದ್ರ ಮಾತ್ರವಲ್ಲ ಬ್ರಾಹ್ಮಣ ಹೆಣ್ಣುಮಕ್ಕಳಿಗೂ ಸಹ ಶಾಲೆ ಇರದಂತಹ ಸಮಯದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದರು. ಸತ್ಯಶೋಧಕ ಸಮಾಜದ ಕಾರ್ಯಚಟುವಟಿಕೆಗಳ ಮೂಲಕ ಸಾಕಷ್ಟು ಕೆಲಸ ಮಾಡಿದರು. ಈ ಉನ್ನತ ವರ್ಗದವರು ನಮ್ಮನ್ನು ಹೇಗೆ ಮೋಸ ಮಾಡುತ್ತಿದ್ದಾರೆ ಎಂದು ಪುಲೆ ದಂಪತಿಗಳು ಚಿಂತಿಸಿ ಶಾಲೆಗಳನ್ನು ತೆರೆದರು. 

ಭಾರತ ಸ್ವತಂತ್ರ ದೇಶ, ಸಂವಿಧಾನದ ಆಸರೆ ನಮಗಿದೆ. ಉತ್ತರ ಕನ್ನಡದ ಲೋಕಸಭಾ ಸದಸ್ಯ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಹೇಳಿದ್ದಾನೆ. ಅವರೊಳಗೆ ಇರುವ ಉದ್ದೇಶವೇ ಅದು. ಸಂವಿಧಾನದ ಮೇಲೆ ಅವರಿಗೆ ಯಾಕೆ ಅಷ್ಟು ಅಸಹನೆ ಎಂದರೆ, ಇವರ ಸರ್ವಾಧಿಕಾರದ ಆಸೆಗೆ ಪೆಟ್ಟು ಕೊಟ್ಟಿರುವುದು ನಮ್ಮ ಸಂವಿಧಾನ. ಸಂವಿಧಾನದಲ್ಲಿ ಆರ್ಟಿಕಲ್‌ 14 ಹೇಳುವುದು ಎಲ್ಲರೂ ಸಮಾನರು ಎಂದು. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಅವರೆಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಮನುಸ್ಮೃತಿ ಹೀಗೆ ಹೇಳುತ್ತದೆಯೇ? ದಯವಿಟ್ಟು ಎಲ್ಲರೂ ಮನುಸ್ಮೃತಿಯನ್ನು ಓದಿ, ವಾರಕ್ಕೆ ಒಂದತ್ತು ಪೇಜ್‌ ಓದಿ. ಈ ಮನುಸ್ಮೃತಿ ಆರ್‌ಎಸ್‌ಎಸ್‌ ನವರ ಸಂವಿಧಾನ. 

ಆರ್‌ ಎಸ್‌ ಎಸ್‌ ಸರಸಂಘಚಾಲಕಬನಾಗಿದ್ದ ಗೋಲ್ವಲ್ಕರ್ ಹೇಳುತ್ತಾರೆ ʼಈ ಸಂವಿಧಾನ ನಮಗೆ ಬೇಡ, ಮನುಸ್ಮೃತಿಯ ಯಾವುದೇ ಅಂಶಗಳು ಈ ಸಂವಿಧಾನದಲ್ಲಿ ಇಲ್ಲʼ ಎಂದು. ಆರ್‌ಎಸ್‌ಎಸ್‌ ನವರ ಆರ್ಗನೈಸರ್‌ ಪತ್ರಿಕೆಯಲ್ಲಿ ಈ ಸಂವಿಧಾನ ನಮಗೆ ಬೇಡ ಎಂಬ ಲೇಖನ ಪ್ರಕಟಗೊಂಡಿತ್ತು. ರಾಜಸ್ಥಾನದ ಕೋರ್ಟಿನ ಮುಂದೆ ಮನುವಿನ ಪ್ರತಿಮೆ ಇದೆ. ನಮ್ಮ ನ್ಯಾಯಾಲಯಗಳು ಕೆಲಸ ಮಾಡಬೇಕಿರುವುದು ಸಂವಿಧಾನದ ಆಧಾರದಲ್ಲಿ. ಪುರುಷನ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರಿಯಾ, ತೊಡೆಯಿಂದ ವೈಶ್ಯ ಮತ್ತು ಪಾದದಿಂದ ಶೂದ್ರರು ಹುಟ್ಟಿದರು ಎಂದು ಮನುಸ್ಮೃತಿ ಹೇಳುತ್ತದೆ. ಇದರ ಪ್ರಕಾರ ಒಬ್ಬ ಬ್ರಾಹ್ಮಣ ಒಂದು ಕೊಲೆ ಮಾಡಿದರೆ ಅವನಿಗೆ ಯಾವ ಶಿಕ್ಷೆಯೂ ಇಲ್ಲ. ಆದರೆ ಒಬ್ಬ ಶೂದ್ರ ಕೊಲೆ ಮಾಡಿದರೆ ಮರಣದಂಡನೆ ವಿಧಿಸಬೇಕೆಂದು ಹೇಳಲಾಗಿದೆ. ಬ್ರಾಹ್ಮಣ ವರ್ಗದವರು ಅವರಿಗಾಗಿ ಬರೆದುಕೊಂಡ ಮ್ಯಾನುಯಲ್‌ ಎಂದರೆ, ಅದು ಮನುಸ್ಮೃತಿ. ಮಹಿಳೆಯರ ಬಗ್ಗೆ ಮನು ಏನು ಹೇಳುತ್ತಾನೆ ಎಂದರೆ ದುಷ್ಟತನಕ್ಕೆ ಮೂಲ ಕಾರಣವೇ ಮಹಿಳೆ ಎಂದು. ತಳಸಮುದಾಯಗಳನ್ನು ಅತ್ಯಂತ ತುಚ್ಛವಾಗಿ ಕಾಣುವ ಒಂದು ಗ್ರಂಥವನ್ನು ಸಂವಿಧಾನವಾಗಿ ಅಳವಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. 

ಬಾಬಾ ಸಾಹೇಬರು ಬರೆದ ಸಂವಿಧಾನದ 17ನೇ ಆರ್ಟಿಕಲ್‌ ಪ್ರಕಾರ ಅಸ್ಪೃಶ್ಯತೆಯನ್ನು ಯಾರೂ ಆಚರಿಸಬಾರದು. ಆದರೆ ಮನುಸ್ಮೃತಿ ಅಸ್ಪೃಶ್ಯತೆಯನ್ನು ಆಚರಿಸುತ್ತದೆ. ಶ್ರೇಣೀಕರಣ ವ್ಯವಸ್ಥೆ ಎಂಬುದೊಂದು ಬಹುಮಹಡಿಗಳ ಕಟ್ಟಡ. ಇಲ್ಲಿ ಮೆಟ್ಟಿಲುಗಳು ಇರುವುದಿಲ್ಲ ಎಂದು 1920ರಲ್ಲಿ ಮೂಕನಾಯಕ ಪತ್ರಿಕೆಯಲ್ಲಿ ಅಂಬೇಡ್ಕರ್‌ ಬರೆಯುತ್ತಾರೆ. ಎಲ್ಲಿಯವರೆಗೂ ಈ ವರ್ಣಾಶ್ರಮದ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಸಂವಿಧಾನ ಅನುಷ್ಠಾನ ಕಷ್ಟವಾಗುತ್ತದೆ. ಹಿಂದೂ ಧರ್ಮದ ಮೂಲ ಆಧಾರವೇ ವರ್ಣಾಶ್ರಮ ವ್ಯವಸ್ಥೆ.‌

ಕಬಡ್ಡಿ ಆಟದಲ್ಲಿ ಕ್ಯಾಚರ್‌ ಆದವನು ರೈಡ್‌ ಮಾಡಲು ಬಂದವನ ಕಣ್ಣುಗಳನ್ನೇ ನೋಡುತ್ತಾ ಕಾಲಿಗೆ ಕ್ಯಾಚ್‌ ಹಾಕುತ್ತಾನೆ. ಸಮಾಜದಲ್ಲಿ ಇವತ್ತೂ ಕೂಡಾ ಹಾಗೇ ಆಗುತ್ತಿರುವುದು. ನಮಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಮುಸಲ್ಮಾನರನ್ನು ಮತ್ತು ಕ್ರಿಶ್ಚಿಯನ್ನರನ್ನು. ಆದರೆ ಅವರ ಗುರಿ ಇರುವುದು ಶೂದ್ರರು ಮತ್ತು ದಲಿತರು. ವರ್ಣಾಶ್ರಮ- ಅಸ್ಪೃಶ್ಯತೆ ಆಧರಿಸಿದ ಅವರ ಧರ್ಮವನ್ನು ಉಳಿಸಿಕೊಳ್ಳುವುದೇ ಅವರು ನಿಜವಾದ ಉದ್ದೇಶ. ನಮ್ಮ ದೇಶದ ಫ್ಯಾಸಿಸಂ ಇರುವುದು ಈ ರೀತಿಯಲ್ಲಿ. ಈ ಫ್ಯಾಸಿಸಂ ನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು.

ಈಗ ನಾವು 2022ರಲ್ಲಿದ್ದೀವಿ. ಇತ್ತೀಚೆಗೆ ಬಂದ ಸಂಶೋಧನೆಗಳ ಪ್ರಕಾರ ಇಲ್ಲಿನ ನಾಗರೀಕತೆಯನ್ನು ಕಟ್ಟಿರುವುದು ತಳಸಮುದಾಯಗಳೇ ಹೊರತು ಮೇಲ್ವರ್ಗಗಳಲ್ಲ. ಇವತ್ತು ಯಾವ ಸಮುದಾಯಗಳು ನಿಕೃಷ್ಟವಾಗಿ ಬದುಕುತ್ತಿವೆಯೋ ಇದೇ ಎಸ್‌ಸಿ/ಎಸ್‌ಟಿ, ಓಬಿಸಿ ಸಮುದಾಯಗಳ ಪೂರ್ವಿಕರು ಜಗತ್ತಿನಲ್ಲೇ ಅದ್ಭುತವಾದ ನಾಗರೀಕತೆಯನ್ನು ಕಟ್ಟಿದ್ದಾರೆ. ಈ ನಾಗರೀಕತೆಯನ್ನು ಕಟ್ಟುವ ಸಮಯದಲ್ಲಿ ಯಜ್ಞ ಯಾಗಾದಿ ಮಾಡುವ ಜನರಿಗೆ ನಾಗರೀಕತೆಯ ಕಲ್ಪನೆಯೆ ಇರಲಿಲ್ಲ, ನಗರಗಳನ್ನು ಕಟ್ಟುವ ಬಗ್ಗೆಯೇ ಗೊತ್ತಿರಲಿಲ್ಲ. ನಮ್ಮ ಪೂರ್ವಜರು ಅತ್ಯಂತ ವ್ಯವಸ್ಥಿತವಾಗಿ ಒಳಚರಂಡಿಗಳನ್ನು ಕಟ್ಟಿದ್ದರು, ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದರು. ಪ್ರತಿ ಮನೆಗಳಲ್ಲಿ ಶೌಚಾಲಯಗಳು ಇರುತ್ತಿದ್ದವು, ಅದ್ಭುತವಾದ ನೀರಾವರಿ ವ್ಯವಸ್ಥೆ ಇತ್ತು. ನೀರಿನ ಕೊರತೆಯಲ್ಲೂ ಸುಸ್ಥಿರ ಬೇಸಾಯವನ್ನು ಸಾಧ್ಯವಾಗಿಸಿದ್ದರು. ಹೊರದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳು ಇದ್ದವು, ಹಡಗು ಇತ್ತು, ಇಷ್ಟೆಲ್ಲಾ ಇಂಜಿನಿಯರ್‌, ವಿಜ್ಞಾನ ಇತ್ತು, ಇವೆಲ್ಲವನ್ನೂ ಮಾಡಿದವರು ಇವತ್ತಿನ ತಳಸಮುದಾಯಗಳ ಪೂರ್ವಿಕರು ಎಂಬುದನ್ನು ಮರೆಯಬಾರದು. 

ನಾವು ನಾಗರೀಕತೆ ಕಟ್ಟಿಕೊಂಡಾಗ ಅವರಿಗೆ ನಾಗರೀಕತೆಯೇ ಗೊತ್ತಿರಲಿಲ್ಲ. ಹಾಗಾಗಿ ನಿಜವಾದ ಸಬಲೀಕರಣದ ಕಡೆ ನಮ್ಮ ದೇಶವನ್ನು ಕೊಂಡೊಯ್ಯಬೇಕೆಂದರೆ ಈ ಅರಿವು ನಮ್ಮಲ್ಲಿ ಮೊದಲು ಮೂಡಬೇಕಿದೆ. ಈ ಸರ್ಕಾರಗಳನ್ನು ನಂಬಿಕೊಂಡರೆ ಹೀಗೆಯೇ ಹೋಗಬೇಕಾಗುತ್ತದೆ. ಜನರನ್ನು ಸಬಲೀಕರಣ ಮಾಡಲು ಯಾವುದೇ ಯೋಜನೆಗಳು ಇಲ್ಲದೇ ಇರುವ ರೀತಿಯಲ್ಲಿ ಮಾಡುತ್ತಿದ್ದಾರೆ. ಫ್ಯಾಸಿಸಂಗೂ ನಿರುದ್ಯೋಗಕ್ಕೂ ನೇರ ಸಂಬಂಧ ಇದೆ. ಇದನ್ನು ನಾವು ಮೆಟ್ಟಿ ನಿಲ್ಲಬೇಕಿದೆ, ಹೊಸ ನಾಡನ್ನು ಕಟ್ಟಬೇಕಿದೆ.

(ಸ್ಲಂ ಜನಾಂದೋಲನ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡಿಸಿದ ಉಪನ್ಯಾಸ)

ಹರ್ಷಕುಮಾರ್‌ ಕುಗ್ವೆ

ಚಿಂತಕ, ಲೇಖಕ

Related Articles

ಇತ್ತೀಚಿನ ಸುದ್ದಿಗಳು