ಲಕ್ನೋ: ಉತ್ತರ ಪ್ರದೇಶದ ಅಲಿಘರ್ ಬಳಿ, ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಗೋರಕ್ಷಕರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಹರ್ದುವಗಂಜ್ ಪೊಲೀಸ್ ಠಾಣೆ ಬಳಿಯ ಸಾಧು ಆಶ್ರಮದಲ್ಲಿ ಅರ್ಬಾಜ್, ಅಕೀಲ್, ಕದಿಮ್ ಮತ್ತು ಮುನ್ನಾ ಖಾನ್ ಅವರನ್ನು ಕ್ರೂರವಾಗಿ ಥಳಿಸಲಾಯಿತು.
ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಅಲ್-ಅಮರ್ ಫ್ರೋಜನ್ ಫುಡ್ಸ್ ಮಾಂಸ ಕಾರ್ಖಾನೆಯಿಂದ ಅಥೋಲ್‌ಗೆ ಮಾಂಸದೊಂದಿಗೆ ಯುವಕರು ತೆರಳುತ್ತಿದ್ದಾಗ ವಾಹನವನ್ನು ತಡೆದು ಮನಬಂದಂತೆ ಹಲ್ಲೆ ನಡೆಸಲಾಯಿತು. ಕೋಲು, ಮರದ ತುಂಡು ಮತ್ತು ಮಣ್ಣನ್ನು ಬಳಸಿ ದಾಳಿ ಮಾಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ದುಷ್ಕರ್ಮಿಗಳು ವಾಹನದಿಂದ ಮಾಂಸವನ್ನು ಹೊರಗೆಸೆಯುವುದು, ಪಿಕಪ್ ಟ್ರಕ್ ಅನ್ನು ಧ್ವಂಸಗೊಳಿಸುವುದು ಮತ್ತು ಯುವಕರನ್ನು ಥಳಿಸುತ್ತಿರುವುದು ಕಂಡುಬಂದಿದೆ.
ದಾಳಿಕೋರರು ಸಂತ್ರಸ್ತರ ಹಣ ಮತ್ತು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ. ಪೊಲೀಸರು ಬಂದ ನಂತರ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರು ವಿಎಚ್‌ಪಿ ನಾಯಕ ರಾಜ್‌ಕುಮಾರ್ ಆರ್ಯ ಮತ್ತು ಬಿಜೆಪಿ ನಾಯಕ ಅರ್ಜುನ್ ಸಿಂಗ್ ಸೇರಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗೋರಕ್ಷಕರ ದೂರಿನ ಆಧಾರದ ಮೇಲೆ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕರು ಎಮ್ಮೆ ಮಾಂಸವನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಮಾಂಸವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.