Tuesday, June 18, 2024

ಸತ್ಯ | ನ್ಯಾಯ |ಧರ್ಮ

ಶಾಲೆಯಲ್ಲಿ ಕಲಿಕೆಯ ಹೊಸ ಅಲೆ ಆರಂಭವಾಗಬೇಕಿದೆ

ಕಲ್ಪನೆಯ ಚಂದಮಾಮ ಕಥೆಗಳನ್ನು ಕೇಳಿ ಖುಷಿ ಪಡುವ ಮಕ್ಕಳ ಸಂತೋಷವನ್ನು ನೋಡುವುದೇ ಚಂದ. ಆದರೆ, ಕಲ್ಪಿತ ಕಥೆಗಳನ್ನು ರಿಯಾಲಿಟಿ ಅನ್ನೋ ತರ ಬಿಂಬಿಸಿ ಮಕ್ಕಳ ಬೆಳವಣಿಗೆಗೆ ಏಟು ಕೊಡುವ ಹಿರಿಯರಿಂದ ಬೆಳೆಸಲ್ಪಡುವ  ಮಕ್ಕಳ ಒಳಗಿನ ಕಥೆಗಳೇ ಕೊನೆಯಾಗುತ್ತವೆ .. ಗುರು ಸುಳ್ಯ ಅವರ ಈ ವಾರದ ಅಂಕಣ ಬರೆಹ ಮುಂದೆ ಓದಿ..

ಜಾತಿಯ ಕ್ರೌರ್ಯ ಮೆರೆದಾಡಿದ ಈ ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ‘ಕಲಿಕೆ’ ಒಂದು ಜಾತಿಯ ಸ್ವತ್ತಾಗಿತ್ತು. ಹಲವಾರು ಗುಂಪುಗಳಾಗಿ ವಾಸಿಸುತ್ತಿದ್ದ, ತಮ್ಮದೇ ರೀತಿಯ ಬದುಕು ಕಟ್ಟಿಕೊಳ್ಳುವ, ತಮ್ಮ ಕಲಾ ಪರಂಪರೆಗಳೊಂದಿಗೆ ಬದುಕುತ್ತಿದ್ದ ಜನರನ್ನು ಗುಲಾಮಗಿರಿಗೆ ತಳ್ಳಿದ ಬಿಳಿನೆರಳು ಇನ್ನೂ ಇದೆ‌ ಇಲ್ಲಿ. ಇವೆಲ್ಲಕ್ಕು ಪಾಠ ಕಲಿಸಲು, ಓದಿನ ಮಹತ್ತ್ವ ಅರುಹಲು ಆಧುನಿಕ ಮಹಾಗುರುವಾಗಿ ರೂಪುಗೊಂಡ ಅಂಬೇಡ್ಕರ್ ನ್ನು ಗ್ರಹಿಸಲು ವರ್ತಮಾನದೊಂದಿಗೆ ಮಿಳಿತವಾಗಿರುವ ಇತಿಹಾಸದ ಅರಿವಿರುವುದು ಮುಖ್ಯ. ವೈದಿಕ ಗಂಡಸರ ಕುತಂತ್ರವೇ ವಿದ್ಯೆಯಾಗಿ ಗೋಚರಿಸಿದ್ದ ಕಾಲಘಟ್ಟದ ಕುಂಡೆಗೆ ಒದೆಯಲು ಸಾಧ್ಯವಾಗಿದ್ದೇ ಭಾರತದ ಸಂವಿಧಾನದ ನಿರ್ಮಾತೃವಿನಿಂದ. ಅರಿವು ನಿಂತ ನೀರಲ್ಲ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದ ಬಸವ ತತ್ವ ನೀರಿನಂತೆ ಬಸವಣ್ಣನನ್ನು ಬಿಟ್ಟು ಹರಿಯುತ್ತಲೇ ಇದೆ!

ಕಲಿಕೆಯ ರೀತಿ ಹೇಗಿರಬೇಕು?

ಕಲಿಕೆ ನಿರಂತರ ಅನ್ನುವುದು ದಿಟವೇ ಆದರೂ, ಕಲಿಕೆಯ ರೀತಿ ಹೇಗಿರಬೇಕು ? ಕಲಿಯಬೇಕಾದದ್ದು ಏನನ್ನು ? ಉತ್ತರ ಕಾಲಕ್ಕನುಗುಣವಾಗಿ ಬದಲಾಗುತ್ತಾ ಹೋಗಬಹುದು. ಗುರು-ಶಿಷ್ಯರ ನಡುವೆ ಅದಲು ಬದಲಾಗಬೇಕಾದ ಪ್ರಶ್ನೋತ್ತರಗಳು, ಬಹುತೇಕ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆ ಎಂಬಲ್ಲಿಗೆ ಸೀಮಿತವಾಗಿದೆ. ಹಾಗಿಲ್ಲದಿದ್ದರೆ ಹಳಬರಿಗಿಂತ ಹೆಚ್ಚು ಚಿಂತನಾ ಸಾಮರ್ಥ್ಯವಿರುವ ಯುವ ಜನತೆ ಅದೇ ಹಳೇ ಸಂಪ್ರದಾಯಗಳ ಹೇರುವಿಕೆಗೆ ಬಲಿಯಾಗುತ್ತಿರಲಿಲ್ಲ. ಕೋಮುವಾದ ಮತ್ತು ಬಂಡವಾಳಶಾಹಿಗಳ ನಡುವೆಯಷ್ಟೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯ ಹಳ್ಳದಲ್ಲೇ ಒದ್ದಾಡಬೇಕಾದ ಪರಿಸ್ಥಿತಿಯೂ ಇರುತ್ತಿರಲಿಲ್ಲ. ಎಲ್ಲರನ್ನು ಒಳಗೊಳ್ಳುವುದು, ಶಾಲೆ ಎಂಬುದರ ಮೂಲಭೂತ ಸ್ವಭಾವ ಹೌದು. ಆದರೆ, ಸ್ವಭಾವತಃ ಪ್ರತಿ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಗಿಂತ  ಭಿನ್ನವೆಂಬುದು ಗೊತ್ತಿರುವಾಗ, ಎಲ್ಲರಿಗೂ ಒಂದೇ ರೀತಿಯ ಕಲಿಕಾ ಪದ್ಧತಿಯಿರುವುದು ಹೇಗೆ ಸರಿ? ಒಳ್ಳೆಯ ಶಾಲೆ, ಕಲಿಯುತ್ತಲೇ ಕಲಿಸುವ ಅಧ್ಯಾಪಕರುಗಳೂ ಕೆಲವೆಡೆ ಇದ್ದಾರೆ ಎಂಬುದೇನೋ ಸರಿಯೆ. ಪ್ರಶ್ನೆಯಿರುವುದು ವಿಮರ್ಶಾತ್ಮಕ ಚಿಂತನೆ, ಸಹಿಷ್ಣುತೆ, ಸರ್ವ ಸಮಾನತೆ, ಪ್ರತಿಯೊಂದು ಕಡೆಯು ಇರಬೇಕಾದ ಪ್ರಜಾಪ್ರಭುತ್ವದ ಅರಿವು, ಸೃಜನಶೀಲತೆಯ ವಿಸ್ತರಣೆ – ಇವೆಲ್ಲಾ ಒಂದಿಷ್ಟು ಮಂದಿಗಷ್ಟೇ ದಕ್ಕಬೇಕಾದದ್ದು ಅಲ್ಲವಲ್ಲ! ಶಿಕ್ಷಣ ಮತ್ತು ವೈದ್ಯಕೀಯ ಅದರ ಎಲ್ಲಾ ವೈವಿಧ್ಯಗಳೊಂದಿಗೆ ಎಲ್ಲಾ ಮನುಷ್ಯರಿಗು ಮೂಲಭೂತವಾಗಿ ದೊರೆಯಬೇಕಾದ ಎರಡು ಸೌಕರ್ಯಗಳು. ಆದರೆ, “ಅರಿವು ನಿಮ್ಮನ್ನು ಸ್ವತಂತ್ರವಾಗಿ ಹಾರಲು ಸಹಾಯ ಮಾಡುತ್ತದೆ ಎಂದಾದರೆ, ನಿಮಗೆ ಕಲಿಸುತ್ತಿರುವ ವ್ಯವಸ್ಥೆಯನ್ನೇ ಕಿತ್ತೊಗೆಯಲು ಬೇಕಾಗುವಂತ ವಿದ್ಯಾಭ್ಯಾಸವನ್ನು ಅವರ್ಯಾರು ಕೊಡಲಾರರು; ನಿಮ್ಮ ನಿಜದ ಇತಿಹಾಸವನ್ನು ಅಥವಾ ನಿಮ್ಮ ನಿಜದ ನಾಯಕರ ಬಗ್ಗೆ  ಅವರ್ಯಾರು ಕಲಿಸಲಾರರು” ಇದು ಅಮೇರಿಕಾದ ರಾಜಕೀಯ ಹೋರಾಟಗಾರ್ತಿಯೂ, ‘ಬ್ಲ್ಯಾಕ್ ಲಿಬರೇಶನ್ ಆರ್ಮಿ’ ಯ ಸದಸ್ಯೆಯೂ ಆಗಿದ್ದ ‘ಅಸ್ಸತಾ  ಶಕೂರ್’ ಅವರ ಮಾತುಗಳು. ಈ ಮಾತಿನ ಸತ್ಯಾಸತ್ಯತೆ ಇವತ್ತಿನ ಕಿತ್ತೊಗೆಯಲಾಗದ ಬಂಡವಾಳಶಾಹಿಯ ಗುಲಾಮರಾಗಿರುವ ನಮ್ಮೆಲ್ಲರಿಗು ಗೊತ್ತಿಲ್ಲದ್ದೇನಲ್ಲ. ಅರಿವಿನ ವಿಸ್ತರಣೆ ಮತ್ತು ಉತ್ಸಾಹಿತ ವಿಷಯಗಳ ಬಗೆಗಿನ ಅಧ್ಯಯನಕ್ಕೆ ಹಾದಿಯಾಗಿರಬೇಕಾದ ಕಲಿಕೆಯು ಕೆಲಸ ಹುಡುಕಲು ಬೇಕಾದ ಅನಿವಾರ್ಯತೆಯಾಗಿ ಬದಲಾಗಿರುವ ದುರಿತ ಕಾಲವಿದು. ಈ ಕಾಲದಲ್ಲಿ ಮನುಷ್ಯರ ಹೃದಯವಂತಿಕೆಯ, ಕ್ರೂರತೆಯ ಗುಣಲಕ್ಷಣಗಳನ್ನು ಸೀಮಿತ ಸಂಪ್ರದಾಯವಾದಿ ಕಣ್ಣುಗಳಲ್ಲಿ ನೋಡಲು ಹೇಗ ಸಾಧ್ಯವಿಲ್ಲವೋ, ಹಾಗೆಯೇ ವಿದ್ಯಾಭ್ಯಾಸದ ಆಧಾರದಲ್ಲಿ ಅಳೆಯಲೂ ಸಾಧ್ಯವಿಲ್ಲ.

ಕಲಿಕೆ ಅನ್ನುವಾಗ..

ಇಲ್ಲಿ ಮುಖ್ಯವಾಗಿ ಹೇಳುತ್ತಿರುವುದು ಪ್ರಾಥಮಿಕ ಶಾಲೆಯ ಆ ಆರೇಳು ವರ್ಷಗಳ ಬಗ್ಗೆ. ಒಳಗೊಳಗೆ ಕುಗ್ಗಲು ಬಿಡದೆ, ಜಗತ್ತಿಗೆ ತೆರೆದುಕೊಳ್ಳುವ ಮಕ್ಕಳ ಕಣ್ಣಾಗ ಬೇಕಾದ ಶಾಲೆಗಳ ಬಗ್ಗೆ; ಪ್ರತಿ ಮನಸ್ಸನ್ನು ಅರಿವಿಗೆ ಒಡ್ಡಲು ಪ್ರೇರೇಪಿಸಿ ಖುಷಿಪಡಿಸಬೇಕಾದ ವಿವಿಧ ಪ್ರಕ್ರಿಯೆಗಳ ರೂವಾರಿಗಳಾಗಬೇಕಾದ ಶಾಲೆಗಳ ಟೀಚರುಗಳ ಬಗ್ಗೆ; ಪ್ರತಿ ಶಾಲೆಗಳ ಅಗತ್ಯ ಮತ್ತು ಶಾಲೆಗಳಲ್ಲಿನ ಅನಗತ್ಯ ರೀತಿ ರಿವಾಜುಗಳ ಬಗ್ಗೆ ಹೆಚ್ಚು ಚರ್ಚೆಗಳಾಗಿ ತಾರ್ಕಿಕ ಪರಿಹಾರಗಳು ಸಿಗಬೇಕಿದೆ ಅನ್ನುವ ಬಗ್ಗೆ. ಆಟದ ಬೆಲ್ ಹೊಡೆಯುವುದನ್ನು ಕಾಯುವಷ್ಟೇ ಸಹಜವಾಗಿ ಗಣಿತದ ಅಥವಾ ಇನ್ಯಾವುದೇ ವಿಷಯದ ಕ್ಲಾಸಿಗೆ ಕಾಯುವಂತೆಯೂ ಮಾಡಬಹುದು. ಕಥೆ ಕೇಳಲು ಬಹಳ ಇಷ್ಟ ಪಡುವ ಮಕ್ಕಳು ಒಂದು ಹಂತದಿಂದಾಚೆ ಕನ್ನಡ ಅಥವಾ ಸಮಾಜದ ಪಾಠಗಳಿಗೆ ಅಷ್ಟೊಂದು ಉತ್ಸಾಹ ತೋರಿಸದೇ ಹೋಗುವುದು ಯಾಕೆಂದು ಆಲೋಚಿಸಿದರೆ ಮಾತ್ರ ಹಾಗೆ ಕಲಿಸುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಬಹುದು. ಸರಿಯಾದ ಬಾಲ್ಯವನ್ನೇ ಕೊಡದೆ, ಶಾಲೆಯನ್ನು ಜೈಲಿನಂತಾಗಿಸಿ ‘ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು’ ಅನ್ನುವುದು ಒಂಥರಾ ಹರಿದ ಶಾಲಾ ಸಮವಸ್ತ್ರಕ್ಕೆ ತೇಪೆ ಹಚ್ಚುವ ಸರಕಾರದ ಮಾತುಗಳಂತೆ ಕಾಣಿಸುತ್ತವೆ. ಯಾವತ್ತಿಗೂ ವಯಸ್ಸಾದವರಿಂದಲೇ ತುಂಬಿರುವ ಸರ್ಕಾರದ ಭಾಗವಾಗುವವರು ಈ ಪ್ರಜೆಗಳೇ ಆಗಿರುತ್ತಾರೆ!

ಇಂಥ ಶಾಲೆಗಳು ಬೇಕು..

“ನನ್ನ ಕೆಲಸ ಮಕ್ಕಳನ್ನು ಪೋಷಕರಿಂದ ರಕ್ಷಿಸುವುದಾಗಿದೆ” ಎಂಬುದು ಡ್ಯಾನಿಷ್ ಸೀರೀಸ್ ‘ರೀಟಾ’ ದ ಮುಖ್ಯ ಪಾತ್ರವಾದ ಟೀಚರ್  ಹೇಳೋ ಮಾತುಗಳು. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತಮ್ಮ ಸಿದ್ಧಾಂತ, ಸಂಪ್ರದಾಯಗಳಿಗೆ ಅನುಗುಣವಾಗಿ ಮಕ್ಕಳನ್ನು ಕಟ್ಟಿಹಾಕುವ ಪೋಷಕರಷ್ಟೇ ತಪ್ಪು ನಮ್ಮ ಶಿಕ್ಷಕರದೂ ಇದೆ. ಶಿಕ್ಷಣ ಅಂದ್ರೆ ಶಿಕ್ಷೆ ಅನ್ನುವ ಮನೋಭಾವ ಮನೆಮಾಡಿರುವುದು ಮಕ್ಕಳಲ್ಲಿ ಮಾತ್ರವಲ್ಲ, ಅದು ನಮ್ಮ ಸಮಾಜದ ಪ್ರತಿಬಿಂಬ. ಮೂರು- ನಾಲ್ಕು ವರ್ಷದ ತಮ್ಮ ಪ್ರೀತಿಯ ಮಗುವಿನ ಬೆನ್ನಿಗೆ ಹೊರೆಹಾಕುವ ಪೋಷಕರ ತಲೆ ಅದೆಷ್ಟರ ಮಟ್ಟಿಗೆ ಭ್ರಷ್ಟವಾಗಿರಬೇಡ ! ಕಲ್ಪನೆಯ ಚಂದಮಾಮ ಕಥೆಗಳನ್ನು ಕೇಳಿ ಖುಷಿ ಪಡುವ ಮಕ್ಕಳ ಸಂತೋಷವನ್ನು ನೋಡುವುದೇ ಚಂದ. ಆದರೆ, ಕಲ್ಪಿತ ಕಥೆಗಳನ್ನು ರಿಯಾಲಿಟಿ ಅನ್ನೋ ತರ ಬಿಂಬಿಸಿ ಮಕ್ಕಳ ಬೆಳವಣಿಗೆಗೆ ಏಟು ಕೊಡುವ ಹಿರಿಯರಿಂದ ಬೆಳೆಸಲ್ಪಡುವ ಮಕ್ಕಳ ಒಳಗಿನ ಕಥೆಗಳೇ ಕೊನೆಯಾಗುತ್ತವೆ!. ಹೀಗಿರುವಾಗ, ಕಲ್ಪನೆ ಮತ್ತು ಅದಕ್ಕಂಟಿಕೊಂಡಿರುವ ಸೃಜನಶೀಲತೆಯು ನಿಜದ ಅನ್ವೇಷಣೆಯ ದಾರಿಯಲ್ಲಿ ನಡೆಯಲು ಅವಕಾಶ ಮಾಡಿಕೊಡುವಂತಹ ಶಾಲೆಗಳು ಬೇಕು.

ಚಿತ್ರಕೃಪೆ: ಸಿಎಫ್‌ಎಲ್‌ ಬೆಂಗಳೂರು

ಇಲ್ಲಿ ಪ್ರೈವೇಟ್ ಶಾಲೆಗಳಿಲ್ಲ!

ಫಿನ್ ಲ್ಯಾಂಡ್ ದೇಶದಲ್ಲಿ ‘ಎಲ್ಲ ಮಕ್ಕಳಿಗೂ ಸಮಾನ ಅವಕಾಶ’ ಎಂಬ ಆಶಯದೊಂದಿಗೆ ಎಲ್ಲಾ ಶಾಲೆಗಳನ್ನು ಸರಕಾರವೇ ನಡೆಸುತ್ತದೆ. ಬಡವ ಬಲ್ಲಿದರೆನ್ನದೆ ಎಲ್ಲರಿಗೂ ಉಚಿತ ಮತ್ತು ಸಮಾನ ವಿದ್ಯೆಯನ್ನು ನೀಡುವ ಇಲ್ಲಿ ಪ್ರೈವೇಟ್ ಶಾಲೆಗಳಿಲ್ಲ. ಶಾಲೆಗಳು ಶುಲ್ಕ ಅಥವ ದೇಣಿಗೆ ಕೇಳುವುದನ್ನು ಕಾನೂನು ರೀತ್ಯಾ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಅಲ್ಲಿಗೆ ವಲಸೆ ಬಂದ ಜನಗಳ ಮಕ್ಕಳು ಶಾಲೆಗೆ ಸೇರುತ್ತಿರುವಾಗ, ಅವರುಗಳ ಮಾನಸಿಕ ಅವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಮನಸ್ಸಿಗೆ ಭಾರವಾಗದಂತೆ ಪಾಠಗಳ ಪರಿಷ್ಕರಣೆಯು ನಡೆಯುತ್ತಿದೆ. ವೈವಿಧ್ಯತೆಯ ಒಳಗೊಳ್ಳುವಿಕೆಯನ್ನು ತರಗತಿಗಳು ಅಕ್ಷರಶಃ ಪಾಲಿಸುತ್ತವೆ. ಆ ದೇಶದ ಕೆಲವು ಶಾಲಾ ರೀತಿಗಳು ಈ ಕೆಳಗಿನಂತಿವೆ

  • ಮಕ್ಕಳ ಜೊತೆಗೆ ಕೂತು, ಮಾತನಾಡಿ ಬೇಕಾದ ಪಾಠಗಳನ್ನು ನಿರ್ಧರಿಸುವುದು
  • ಪಠ್ಯೇತರ ಚಟುವಟಿಕೆಗಳ ಜೊತೆಗೇ, ಅದಕ್ಕಿಂತಲೂ ಹೆಚ್ಚಾಗಿ ಅಗತ್ಯವಾದ ವಿಷಯಗಳಿಗೆ ಆದ್ಯತೆ ನೀಡುವುದು
  • ದೈನಂದಿನ ಕೆಲಸಗಳಿಂದ ಮುಕ್ತಗೊಳಿಸಲು ಪುಟಾಣಿ ಮೆದುಳಿಗೆ ನಿಗದಿತ ವಿರಾಮಗಳನ್ನು ನೀಡುವುದು
  • ಮಕ್ಕಳನ್ನು ತರಗತಿಯೊಳಗೆ ಓಡಾಡಲು ಪ್ರೋತ್ಸಾಹಿಸುವುದು
  • ಮನೆ ಕೆಲಸದ ಪ್ರಮಾಣ ಅತ್ಯಂತ ಕಡಿಮೆಯಾಗಿರುವಂತೆ ನೋಡಿಕೊಳ್ಳುವುದು

ನಾವು ಸಾಗಬೇಕಾದ ದಾರಿ ಬಹಳ ದೂರವಿದೆ

ಕಡಿಮೆ ಜನಸಂಖ್ಯೆ ಇರುವ, ಹೆಚ್ಚು ತೆರಿಗೆ ಇರುವ ಫಿನ್ಲ್ಯಾಂಡನ್ನು ಭಾರತಕ್ಕೋ, ಕರ್ನಾಟಕಕ್ಕೋ ಹೋಲಿಸುವುದು ಸಾಧ್ಯವಿಲ್ಲ. ಅಲ್ಲಿನ ಅಥವಾ ಎಲ್ಲಿಯದೇ ವ್ಯವಸ್ಥೆಯನ್ನು ಅನುಕರಿಸುವುದು ಕೂಡ ಮೂರ್ಖತನವೇ ಆಗುತ್ತದೆ. ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಕೋಮುವಾದ, ಅವ್ಯವಸ್ಥಿತ ಸರಕಾರಗಳಿಂದ ಬಳಲುತ್ತಿರುವ ನಾವು ಸಾಗಬೇಕಾದ ದಾರಿಯಿನ್ನೂ ಬಹಳ ದೂರವಿದೆ. ಪ್ರೈವೇಟ್ ಶಾಲೆಗಳನ್ನು ಕಡಿತಗೊಳಿಸಿ, ಸಮಾನ ವಿದ್ಯಾಭ್ಯಾಸದ ಶಾಲೆಗಳನ್ನು ಜಾರಿಗೆ ತರಲು ಶ್ರಮಿಸಬಹುದು. ಹೆಣ್ಣು-ಗಂಡು ಎಂದು ಎಳವೆಯಲ್ಲಿಯೇ ಮಕ್ಕಳನ್ನು ಬೇರೆ ಬೇರೆ ಕೂರಿಸುವ, ವೈವಿಧ್ಯಮಯ ಜೆಂಡರ್ ಐಡೆ‌ಂಟಿಟಿಗಳನ್ನು ನಿರಾಕರಿಸುವ, ಸಮವಸ್ತ್ರದ ಬಣ್ಣಗಳ ಹೊರತಾಗಿಯೂ ಹೆಣ್ಣು-ಗಂಡು ಅಂತಷ್ಟೇ ನಿರ್ಧರಿಸಿ ನಿರ್ದಿಷ್ಟ ಶೈಲಿಯ ಬಟ್ಟೆಗಳನ್ನು ಹಾಕಲು ಒತ್ತಾಯಿಸುವ ಅವೈಜ್ಞಾನಿಕ-ಅಸಾಂವಿಧಾನಿಕ ಕ್ರಮಗಳನ್ನು ಖಡಾಖಂಡಿತವಾಗಿ ನಿಲ್ಲಿಸಬೇಕು.

ಇನ್ನು ಈ ಜಾಗತೀಕರಣದ ಯುಗದಲ್ಲಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ‘ಹೋಮ್ ಸ್ಕೂಲಿಂಗ್’ ಮತ್ತು ‘ಅನ್ ಸ್ಕೂಲಿಂಗ್’ ಎಷ್ಟರ ಮಟ್ಟಿಗೆ ಮಕ್ಕಳನ್ನು ಇತರರೊಂದಿಗೆ ಬೆರೆಯಬೇಕಾದ ಅಗತ್ಯಗಳನ್ನು ಪೂರೈಸುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಗುಲಾಮರಾಗುವತ್ತಲೇ ಮಕ್ಕಳನ್ನು ಕೊಂಡೊಯ್ಯುವ ಈ ಸಮಾಜದ ಜೊತೆಗೆ ಎಷ್ಟು ಬೇಕೋ ಅಷ್ಟು ಬೆರೆತರೆ ಸಾಕೆಂಬುದು ಈ ವಿಧಾನದ ಉದ್ದೇಶವಾಗಿರಬಹುದಾದರು, ಇದರ ಪರಿಣಾಮಗಳು ಯಾವ ರೀತಿಯದ್ದಾಗಿರಬಹುದೆಂಬುದರ ಊಹೆ ಬಹುಪಾಲು ಪೋಷಕ ಸಮುದಾಯಕ್ಕಿದ್ದಂತಿಲ್ಲ. ಇದರ ಜೊತೆ ಮುಂದಿನ ಕಾಲಘಟ್ಟದಲ್ಲಿ ಮಾನಸಿಕವಾಗಿ ಮಕ್ಕಳನ್ನು ಈ ವಿದ್ಯಾಭ್ಯಾಸ ವಿಧಾನ ಯಾವ ರೀತಿ ಸದೃಢರನ್ನಾಗಿಸುತ್ತದೆ ಎಂಬುದನ್ನು ವಿಜ್ಞಾನವೆ ಹೇಳಬೇಕು.

ಜನಸಂಖ್ಯೆ ಮಿತಿಮೀರಿ ಮನುಷ್ಯರು ಭೂಮಿಯ ವೃಣವಾಗಿರುವ ಈ ಹೊತ್ತು, ಆ ಕೀವಿಗೆ ಹಚ್ಚಬೇಕಾದ ಮದ್ದುಗಳಲ್ಲಿ  ಶಿಕ್ಷಣ ಕೂಡ ಬಹುಮುಖ್ಯವಾದದ್ದು. “ಪ್ರಕೃತಿಯ ಸಮತೋಲನದ ಭಾಗವಾಗಿ ಇರಬೇಕಾಗಿದ್ದ ಮನುಷ್ಯರ ಸಂಖ್ಯೆ, ಭೂಮಿಗೆ ಭಾರವಾಗುವಷ್ಟಾಗಿರುವುದು – ಕಲಿಕೆಯೆಂಬುದು ಅರಿವು ಉಂಟುಮಾಡುವ ಬದಲಾಗಿ, ಕೆಲಸ ಗಿಟ್ಟಿಸುವ ಯಾಂತ್ರಿಕ ಸರಕಾಗಿ ಬದಲಾಗಲು ಕಾರಣವೂ ಹೌದು”. ಇದು ವಿಕಸನಗೊಳ್ಳುತ್ತಲೇ ಇರುವ ಮನುಷ್ಯ ಮೆದುಳಿನ ಪರಿಣಾಮವೆಂದರು ಕೂಡ, ಮನುಷ್ಯರ ನಡುವಿನ ಸಾಮರಸ್ಯಕ್ಕೆ, ಸಮತ್ವಕ್ಕೆ ಇದರಿಂದಾಗಿರುವ ಸಮಸ್ಯೆ ಕಂಗೆಡಿಸುವಂತದ್ದು.

ಮಕ್ಕಳ ಜಗತ್ತೊಂದು ಬೆಳೆಯುತ್ತಿರುತ್ತದೆ…

ಮಹಿಳೆ ಟೀಚರ್ ಆದರೆ ಸೀರೆ ಉಟ್ಟುಕೊಂಡೇ ಬರಬೇಕು ಎನ್ನುವ ಶತಮಾನದಷ್ಟು ಹಳೆಯ ಪದ್ಧತಿಯಲ್ಲಿ ಕೊಳೆಯುತ್ತಿರುವ ನಮ್ಮ ಶಾಲೆಗಳಲ್ಲಿ ಕಲಿತು ಮಹಿಳಾವಾದವನ್ನು, ಅಂಬೇಡ್ಕರನ್ನು, ಜೆಂಡರ್ ಸೆನ್ಸಿಟಿವಿಟಿಯನ್ನು, ಸೈಂಟಿಫಿಕ್ ಟೆಂಪರ್ ಅನ್ನು ಅರಿಯುವಷ್ಟರ ಮಟ್ಟಿಗೆ ವಿಮರ್ಶಾತ್ಮಕ ಚಿಂತನೆಯನ್ನು ಕೆಲವರಾದರು ಬೆಳೆಸಿಕೊಂಡಿದ್ದಾರೆಂಬುದೇ ಸಂತಸದ ವಿಷಯ. ಸಾವಿತ್ರಿಬಾಯಿ ಫುಲೆಯ ಮುಂದುವರಿಕೆಯಾಗಿ – ಎಲ್ಲಾ ನಿರ್ಬಂಧ ಮತ್ತು ಒತ್ತಡಗಳ ನಡುವೆ ಮಕ್ಕಳನ್ನು ಪೋಷಿಸುತ್ತಾ, ಪ್ರೀತಿಸುತ್ತಾ, ಕಲಿಸುತ್ತಾ ಖುದ್ದು ನವೀಕರಣಗೊಳ್ಳುತ್ತಿರುವ ಕೆಲವೇ ಕೆಲವು ಟೀಚರುಗಳ ಪ್ರಯತ್ನಕ್ಕೆ ಸಲಾಮ್. “ಬೆಳೆಯುವ ಮಕ್ಕಳಿಗೆ ಎದುರಾಗಿ ಜಗತ್ತು ತೆರೆಯುತ್ತಿರುವಾಗ, ನಮ್ಮೆದುರು  ಮಕ್ಕಳ ಜಗತ್ತೊಂದು ಬೆಳೆಯುತ್ತಿರುತ್ತದೆ”.

ಚಿತ್ರಕೃಪೆ: ಸಿಎಫ್‌ಎಲ್‌ ಬೆಂಗಳೂರು

ಯು ಜಿ ಕೃಷ್ಣಮೂರ್ತಿಯವರ ಮಾತುಗಳು…

ಇಷ್ಟೆಲ್ಲಾ ಈವಾಗಿನ ಕಲಿಕಾ ವ್ಯವಸ್ಥೆಯನ್ನು ಸುತ್ತುತ್ತಾ ಬರೆದ ಮೇಲೂ, ಪರಿಹಾರವಿಲ್ಲದ ನಿರ್ವಾತವೊಂದು ಆವರಿಸುತ್ತಿದೆ. ಆದ ಕಾರಣ, ನಮ್ಮ ಕಲಿಕಾ ವಿಧಾನಕ್ಕೆ ವೈರುಧ್ಯದಂತಿರುವ ಯು ಜಿ ಕೃಷ್ಣಮೂರ್ತಿಯವರ ಕಲಿಕೆಯ ಕುರಿತಾದ ವೈಯಕ್ತಿಕ ಮಾತುಗಳಿಂದ ಈ ಬರಹವನ್ನು ಮುಗಿಸದೇ ಬೇರೆ ದಾರಿ ಕಾಣಿಸುತ್ತಿಲ್ಲ – “ಮನುಷ್ಯರನ್ನು ಪ್ರಭಾವಿಸಿದ ಎಲ್ಲಾ ಗುರುಗಳು ತಮ್ಮನ್ನು ವಂಚಿಸಿಕೊಳ್ಳುತ್ತಲೇ ಇಡೀ ಮನುಷ್ಯ ಕುಲವನ್ನೂ ವಂಚಿಸಿದರು. ಆದ್ದರಿಂದ ನನ್ನ ಹುಡುಕಾಟವನ್ನು ಖುದ್ದು ನಾನೇ ನಡೆಸಬೇಕಿತ್ತು ಮತ್ತು ಇನ್ನೊಬ್ಬರನ್ನು ಅವಲಂಬಿಸಿಕೊಂಡಿರುವವರೆಗೆ ಅದು ಸಾಧ್ಯವಿರಲಿಲ್ಲ” ಯುಜಿ ಯವರು ಮುಂದುವರೆದು ‘ಅಲೋಚನೆ’ ಎಂಬ ಕ್ರಿಯೆಯನ್ನೇ ನಿರಾಕರಿಸುತ್ತಾರೆ. ಆದರೂ, ಸ್ವಯಂ ಕಲಿಕೆ ಎನ್ನುವುದೊಂದಿದೆ ಎಂಬುದನ್ನೂ ಮರೆತು, ಮೆದುಳನ್ನು ಅಡವಿಟ್ಟುಕೊಂಡು ಬದುಕುತ್ತಿರುವವರಿಗೂ  ಯುಜಿಯವರ ಮಾತುಗಳು ಅನ್ವಯಿಸುತ್ತವೆ.

(ಲೇಖಕರು ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು)

Related Articles

ಇತ್ತೀಚಿನ ಸುದ್ದಿಗಳು