ಬೆಂಗಳೂರು: ನಟ ಯುವರಾಜ್ ಕುಮಾರ್ ವಿಚ್ಚೇದನ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ. ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ‘ನನ್ನ ಪತಿಗೆ ಸಪ್ತಮಿ ಗೌಡ ಅವರೊಂದಿಗೆ ಅನೈತಿಕ ಸಂಬಂಧ ಇದೆ’ ಎನ್ನುವ ಅರ್ಥದಲ್ಲಿ ಆರೋಪಿಸಿದ್ದರು. ಪ್ರಸ್ತುತ ನಟಿ ಸಪ್ತಮಿ ನ್ಯಾಯಾಲಯದ ಮೆಟ್ಟಿಲೇರಿ ಈ ಕುರಿತು ನಿರ್ಬಂಧಕಾಜ್ಞೆ ತಂದಿದ್ದಾರೆ.
ಬೆಂಗಳೂರು ನಗರದ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡಿರುವ ಸಪ್ತಮಿ ಗೌಡ, ‘ಅವರ ವಿಚ್ಚೇದನ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಲಾಗುತ್ತಿದೆ. ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಸಿಟಿ ಸಿವಿಲ್ ಕೋರ್ಟ್ ಸಪ್ತಮಿ ಅವರ ವಿರುದ್ಧ ಮಾನ ಹಾನಿಕರ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಕಾಜ್ಞೆ ಹೊರಡಿಸಿ ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿ ನೀಡಿದೆ.
ನಟಿ ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ನಡುವೆ ಕಳೆದ ಒಂದು ವರ್ಷದಿಂದ ಸಂಬಂಧವಿದೆ. 2023ರ ಡಿಸೆಂಬರ್ ತಿಂಗಳಿನಲ್ಲಿ ನಾನು ಬೆಂಗಳೂರಿಗೆ ಬಂದ ಸಮಯದಲ್ಲಿ ಹೋಟೆಲ್ ಕೋಣೆಯೊಂದರಲ್ಲಿ ಸಿಕ್ಕಿಬಿದ್ದಿದ್ದರು. ಇದೇ ವಿಷಯಕ್ಕಾಗಿ ನನ್ನ ಮನೆಯಿಂದ ಹೊರಹಾಕಲು ಪ್ರಯತ್ನವನ್ನೂ ಮಾಡಿದ್ದರು ಎಂದು ಶ್ರೀದೇವಿಯವರು ಯುವ ವಿರುದ್ಧ ಆರೋಪ ಹೊರಿಸಿದ್ದರು.
ಸಪ್ತಮಿ ಗೌಡ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಂಡು, ಈಗ ನನ್ನ ಮೇಲೆಯೇ ಮೋಸ ವಂಚನೆಯ ಆರೋಪವನ್ನು ಮಾಡಿ ತನ್ನ ಜವಾಬ್ದಾರಿಯಿಂದ ಹೊರ ನಡೆಯಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಪಶ್ಚಾತ್ತಾಪವಿಲ್ಲದೆ ನನ್ನ ವಿರುದ್ಧ ಈ ಸುಳ್ಳು ಮತ್ತು ನಿಷ್ಪ್ರಯೋಜಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನೋಟಿಸ್ ನಲ್ಲಿ ಶ್ರೀದೇವಿ ಭೈರಪ್ಪ ಹೇಳಿದ್ದರು.