Sunday, July 27, 2025

ಸತ್ಯ | ನ್ಯಾಯ |ಧರ್ಮ

ಬನಾರಸ್ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ಅರ್ಪಿಸಿದ ಝೈದ್ ಖಾನ್!

ಬೆಂಗಳೂರು : ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಚಿತ್ರ ಯಶಸ್ವಿಯಾಗಿ ಮೂರನೇ ವಾರದತ್ತ ದಾಪುಗಾಲಿಟ್ಟಿದೆ. ಈಗಲೂ ಅದೇ ಪ್ರೀತಿಯಿಂದ ಪ್ರೇಕ್ಷಕರು ಬನಾರಸ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದರೊಂದಿಗೆ ಮೊದಲ ಹೆಜ್ಜೆಯಲ್ಲಿಯೇ ನಾಯಕನಾಗಿ ನೆಲೆ ಕಂಡುಕೊಂಡ ಖುಷಿ  ಝೈದ್ ಪಾಲಿಗೆ ದಕ್ಕಿದೆ. ಇದಕ್ಕೆಲ್ಲ ಕಾರಣರಾದ ಸಮಸ್ತ ಕನ್ನಡ ನಾಡಿನ ಜನತೆಗೆ, ಸಹಕಾರ ನೀಡಿದ ಮಾಧ್ಯಮ ಮಿತ್ರರಿಗೆ ಝೈದ್ ಖಾನ್ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಬನಾರಸ್‍ನ ಪ್ರತೀ ಕದಲಿಕೆಗಳನ್ನೂ ಕಾಲ ಕಾಲಕ್ಕೆ ಪ್ರೇಕ್ಷಕರಿಗೆ ತಲುಪಿಸುತ್ತಾ, ತುಂಬು ಸಹಕಾರ ನೀಡಿದ ಮಾಧ್ಯಮದವರಿಗೆ ಧನ್ಯವಾದ ಸಮರ್ಪಿಸಿರುವ ಝೈದ್ ಖಾನ್, ಈ ಸ್ನೇಹಶೀಲತೆ ಮುಂದಿನ ದಿನಗಳಲ್ಲಿಯೂ ಚಾಲ್ತಿಯಲ್ಲಿರಲೆಂದು ಆಶಿಸಿದ್ದಾರೆ. ಇನ್ನುಳಿದಂತೆ ತಮ್ಮನ್ನು ನಾಯಕ ನಟನಾಗಿ ಪ್ರೀತಿಯಿಂದ ಬರಮಾಡಿಕೊಂಡ, ತನ್ನ ಪ್ರಯತ್ನವನ್ನು ಮನಸಾರೆ ಮೆಚ್ಚಿಕೊಂಡ ಎಲ್ಲ ಕನ್ನಡಿಗರಿಗೂ ವಂದನೆ ಸಲ್ಲಿಸಿದ್ದಾರೆ. ಎಲ್ಲ ಸವಾಲುಗಳನ್ನೂ ದಾಟಿಕೊಂಡು, ಇಂಥಾದ್ದೊಂದು ಗೆಲುವು ದಾಖಲಿಸಲು ಸಾಧ್ಯವಾಗಿಸಿದ ಸಮಸ್ತರಿಗೂ ಝೈದ್ ಖಾನ್ ವಂದಿಸಿದ್ದಾರೆ.

ಒಟ್ಟಾರೆಯಾಗಿ ಬನಾರಸ್ ಚಿತ್ರಕ್ಕೆ ಗೆಲುವು ದಕ್ಕಿದೆ. ಪ್ರೇಕ್ಷಕರ ಕಡೆಯಿಂದ ಕೇಳಿಬರುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಗಳೇ ಮೂರನೇ ವಾರಕ್ಕೆ ದಾಟಿಕೊಳ್ಳುವಂತೆ ಮಾಡಿದೆ. ಇದೇ ಖುಷಿಯಲ್ಲಿ ಮತ್ತೊಂದು ಖುಷಿಯ ಸಂಗತಿಯನ್ನೂ ಕೂಡಾ ಝೈದ್ ಖಾನ್ ಹಂಚಿಕೊಂಡಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವಾಗಲೇ ಬನಾರಸ್ ಓಟಿಟಿಗೆ ಒಂದು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಈಗಾಗಲೇ ಹಾಕಿದ ಬಂಡವಾಳವೂ ವಾಪಾಸಾಗಿದೆ. ಇದೇ ಹೊತ್ತಿನಲ್ಲಿ ಮೂರನೇ ವಾರದ ಯಶಸ್ವೀ ಯಾನ ಶುರುವಿಟ್ಟಿರುವ ಬನಾರಸ್‍ಗೆ ಒಂದಷ್ಟು ಹೆಚ್ಚು ಥಿಯೇಟರ್‌ಗಳೂ ಸಿಗುತ್ತಿವೆ. ಈ ಎಲ್ಲ ವಿದ್ಯಮಾನಗಳಿಂದ ಝೈದ್ ಖಾನ್ ಸೇರಿದಂತೆ ಇಡೀ ಚಿತ್ರತಂಡ ಖುಷಿಗೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page