ಹಾಸನದಲ್ಲಿ ಜೊಮ್ಯಾಟೋ ರೈಡರ್‌ಗಳ ಪ್ರತಿಭಟನೆ – ಕೆಲಸ ಸ್ಥಗಿತ

ಹಾಸನ: ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೊಮ್ಯಾಟೊ(Zomato) ಕಂಪನಿಯ ರೈಡರ್‌ಗಳು ಹಾಸನದಲ್ಲಿ ಆರಂಭಿಸಿರುವ ಕೆಲಸ ಸ್ಥಗಿತಗೊಳಿಸುವ ಮುಷ್ಕರ ಎಂಟನೇ ದಿನವೂ ಮುಂದುವರಿದಿದೆ.

ಕಳೆದ ಸೋಮವಾರದಿಂದ ಡೆಲಿವರಿ ಸೇವೆಗಳನ್ನು ಬಹುತೇಕ ಸ್ಥಗಿತಗೊಳಿಸಿರುವ ರೈಡರ್‌ಗಳು, ಕಂಪನಿ ಆಡಳಿತವು ತಮ್ಮ ಬೇಡಿಕೆಗಳಿಗೆ ಯಾವುದೇ ಮನ್ನಣೆ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಪ್ರತಿ ಕಿಲೋಮೀಟರ್‌ಗೆ ರೂ.15 ಆರ್ಡರ್ ಪೇ ನಿಗದಿ ಮಾಡಬೇಕು ಅಥವಾ ಫುಲ್ ಟೈಮ್ ರೈಡರ್‌ಗಳಿಗೆ ದಿನಕ್ಕೆ ರೂ.250 ಶಾಶ್ವತ ಪ್ರೋತ್ಸಾಹಧನ (ಇನ್ಸೆಂಟಿವ್) ಹಾಗೂ ಪಾರ್ಟ್ ಟೈಮ್ ರೈಡರ್‌ಗಳಿಗೆ ರೂ.100 ಶಾಶ್ವತ ಇನ್ಸೆಂಟಿವ್ ನೀಡಬೇಕು.

ಇದಲ್ಲದೆ, ಪ್ರತಿ ವರ್ಷ ಜನವರಿ. 1ರಿಂದ ಆರ್ಡರ್ ಪೇಯಲ್ಲಿ ಕನಿಷ್ಠ 10 ಶೇಕಡಾ ಹೆಚ್ಚಳ ಹಾಗೂ ಶಾಶ್ವತ ಇನ್ಸೆಂಟಿವ್‌ನಲ್ಲಿ ರೂ.30 ಹೆಚ್ಚಳ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. “ಪ್ರತಿ ವರ್ಷ ಮುಷ್ಕರ ನಡೆಸುವ ಪರಿಸ್ಥಿತಿ ಉಂಟಾಗಬಾರದು. ಸ್ಪಷ್ಟವಾದ ನೀತಿ ರೂಪಿಸಿದರೆ ಕಂಪನಿಗೂ ರೈಡರ್‌ಗಳಿಗೂ ಲಾಭಕರವಾಗುತ್ತದೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆರ್ಡರ್ ಪಿಕಪ್ ಸ್ಥಳದ ದೂರ ಹಾಗೂ ಡೆಲಿವರಿ ನಂತರ ವರ್ಕ್ ಜೋನ್‌ಗೆ ಮರಳುವ ದೂರ ಸೇರಿ ಒಟ್ಟು ಪ್ರಯಾಣಿಸಿದ ಕಿಲೋಮೀಟರ್‌ಗೆ ಪಾವತಿ ನೀಡಬೇಕು ಎಂಬುದೂ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಮಳೆಯ ಸರ್ಜ್, ಹಬ್ಬದ ಸರ್ಜ್ ಸೇರಿದಂತೆ ಇತರೆ ಸರ್ಜ್‌ಗಳನ್ನು ಪ್ರತಿ ಆರ್ಡರ್‌ಗೆ ಕನಿಷ್ಠ ರೂ.20 ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈಡರ್‌ಗಳ ಮುಷ್ಕರದಿಂದ ನಗರದಲ್ಲಿನ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ವ್ಯಾಪಾರದಲ್ಲಿ ಕುಸಿತ ಅನುಭವಿಸುತ್ತಿದ್ದು, ಗ್ರಾಹಕರು ಸಮಯಕ್ಕೆ ತಮಗೆ ಇಷ್ಟವಾದ ಆಹಾರ ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಕಂಪನಿ ವಲಯದಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ. ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆಯಲ್ಲಿರುವ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರು, ಮಾತುಕತೆಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು