Thursday, June 13, 2024

ಸತ್ಯ | ನ್ಯಾಯ |ಧರ್ಮ

ʼಮಹಾಡ್ʼ ಮರೆಯಲಾಗದ ಮೊದಲ ದಲಿತ ಕ್ರಾಂತಿ

  • ಆನಂದ್‌ ತೇಲ್ತುಂಬ್ಡೆ (ಕನ್ನಡಕ್ಕೆ: ಅಬ್ದುಲ್‌ ರೆಹಮಾನ್‌ ಪಾಷ)  

(ಮಹಾಡ್ ಚೌಡರ್ ಕೆರೆ ಚಳವಳಿ ದಲಿತ ಚಳವಳಿಯಲ್ಲಿ ಒಂದು ಮರೆಯಲಾಗದ ಅಧ್ಯಾಯ. ಈ ಕುರಿತು 2016ರಲ್ಲಿ ಇಂಗ್ಲಿಷ್‌ನಲ್ಲಿ ಡಾ. ಆನಂದ್ ತೇಲ್ತುಂಬ್ಡೆ ಅವರು  “Mahad: The Making of the First Dalit Revolt” ಎಂಬ ಮಹತ್ವದ ವಿವರವಾದ ವಿಶ್ಲೇಷಣಾತ್ಮಕ ಪುಸ್ತಕ ಬರೆದು ಪ್ರಕಟಿಸಿದರು. ಈ ಪುಸ್ತಕವನ್ನು ಹಿರಿಯ ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಕ್ರಿಯಾ ಮಾಧ್ಯಮ  ಪ್ರಕಟಿಸಿದೆ. )

‘‘ಮಹಾಡ್ ದಲಿತರಿಗೆ ಮುಂದಿನ ಹಾದಿಯನ್ನು ತೋರಿಸುವ ದೀಪಸ್ತಂಭವಾಗಿದೆ. ಮಹಾಡ್ ಚಳವಳಿಗೆ ಎರಡು ದಶಕಕ್ಕೂ ಮುನ್ನ ಕೇರಳದಲ್ಲಿ ನಡೆದ ಅಯ್ಯಂಕಾಳಿ ಚಳವಳಿಯ ಗೌರವಾರ್ಹ ಉದಾಹರಣೆ ಬಿಟ್ಟರೆ, ದಲಿತರು ಮೊಟ್ಟ ಮೊದಲ ಬಾರಿಗೆ ಜಾತಿ ಗುಲಾಮಗಿರಿಯ ನೊಗವನ್ನು ಕಿತ್ತೊಗೆದು ತಮ್ಮ ಮಾನವ ಹಕ್ಕುಗಳನ್ನು ನಿಶ್ಚಿತವಾಗಿ ಪ್ರತಿಪಾದಿಸುವ ತಮ್ಮ ನಿರ್ಧಾರವನ್ನು ತೋರಿದ್ದು ಮಹಾಡ್‌ನಲ್ಲಿಯೇ. ಜಾತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ವಿರೋಧಿಸಿದ್ದು ಮತ್ತು ದೇವಸ್ಥಾನದಲ್ಲಿ ಪ್ರವೇಶದ ಹಕ್ಕು, ಸಾರ್ವಜನಿಕ ನೀರಿನ ಮೂಲಗಳಿಂದ ನೀರನ್ನು ಬಳಸುವ ಹಕ್ಕು ಇಂಥ ನಾಗರಿಕ ಹಕ್ಕುಗಳಿಗಾಗಿ ಇತರ ಆಂದೋಲನಗಳೂ ಮಹಾಡ್‌ಗಿಂತ ಮುಂಚೆ ನಡೆದಿದ್ದವು. ನಿಜವೆಂದರೆ, ಮಹಾಡ್ ಆಂದೋಲನದ ಒಂದು ಭಾಗವಾಗಿ, ಸ್ವಲ್ಪವೇ ಮುಂಚೆ ದಾಸ್‌ಗಾಂವ್‌ನಲ್ಲಿರುವ ಕ್ರಾಫೋರ್ಡ್ ಬಾವಿಯನ್ನು ಬಳಸುವಲ್ಲಿ ಮಾಡಿದ ಆಂದೋಲನವು ಆ ಹೊತ್ತಿಗೆ ಯಶಸ್ವಿಯಾಗಿತ್ತು.

ದಲಿತ ಚಳವಳಿಯ ಹೆಗ್ಗುರುತುಗಳಾಗಿ ಮತ್ತು ದಲಿತ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಅವೆಲ್ಲವೂ ಬಹಳ ಮಹತ್ವವನ್ನು ಪಡೆದಿವೆ. ಆದರೆ, ಅವಕ್ಕೂ ಮತ್ತು ಮಹಾಡ್ ಚಳವಳಿಗೂ ಇರುವ ಪ್ರಮುಖ ವ್ಯತ್ಯಾಸವಿರುವುದು ಸಂಘಟನೆ ಮತ್ತು ನಾಯಕತ್ವದ ಸ್ವರೂಪದಲ್ಲಿ. ಸಂಘಟನೆಯ ದೃಷ್ಟಿಯಿಂದ ಮತ್ತು ಡಾ.ಅಂಬೇಡ್ಕರ್ ಅವರಂಥ ವರ್ಚಸ್ವಿ ನಾಯಕತ್ವದ ಕೊರತೆ ಅಲ್ಲಿತ್ತು. ಇದರಿಂದಾಗಿ ಅವು ತಮ್ಮ ಸ್ಥಳೀಯ ಮಿತಿಯನ್ನು ದಾಟಿ ಹೊರಗೆ ಸೈದ್ಧಾಂತಿಕ ಮತ್ತು ಐತಿಹಾಸಿಕ ಪ್ರಭಾವವನ್ನು ಬೀರಲಿಲ್ಲ. ಮಹಾಡ್‌ಗಿಂತ ಮುಂಚೆ, ದೇವಸ್ಥಾನದ ಪ್ರವೇಶದ ನಾಗರಿಕ ಹಕ್ಕಿಗಾಗಿ ನಡೆದ ವೈಕೊಮ್ ಸತ್ಯಾಗ್ರಹವೂ(1924-25) ಕೂಡ, ಮಹಾತ್ಮಾ ಗಾಂಧಿ ಮತ್ತು ಅವರಂಥ ಇನ್ನೂ ಹಲವಾರು ಮುಖ್ಯವಾಹಿನಿ ನಾಯಕರುಗಳ ದಂಡೇ ಅದರಲ್ಲಿ ಭಾಗವಹಿಸಿತ್ತು. ಮಹಾಡ್‌ನ ತೇಜಸ್ಸಾಗಲಿ, ಅದಕ್ಕೆ ಸಿಕ್ಕ ಪ್ರಚಾರದ ವ್ಯಾಪಕತೆಯಾಗಲಿ ವೈಕೊಮ್ ಸತ್ಯಾಗ್ರಹಕ್ಕೆ ಇರಲಿಲ್ಲ. ಅದು ಮುಖ್ಯವಾಹಿನಿಯ ಇತಿಹಾಸದಲ್ಲಿ ಮಹತ್ವವನ್ನು ಪಡೆದರೂ ದಲಿತರಲ್ಲಿ ಮಹಾಡ್‌ನಂಥ ಪ್ರತಿಷ್ಠಿತ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಸೋತಿತು. ವೈಕೊಮ್ ಚಳವಳಿಗೆ ಸ್ಫೂರ್ತಿಯಾಗಲಿ ನಾಯಕತ್ವವಾಗಲಿ ದಲಿತರಿಂದ ಬಂದಿರಲಿಲ್ಲ. ಆದರೆ ಮಹಾಡ್ ಚಳವಳಿ, ತನ್ನ ಸಂಘಟನೆಯ ಪರಿಮಾಣ, ಧ್ಯೇಯದೃಷ್ಟಿಯ ಸಂವಹನ, ಸ್ವಯಂಪ್ರೇರಣೆ ಮತ್ತು ನಾಯಕತ್ವದ ದೃಷ್ಟಿಯಿಂದ ದಲಿತರು ತಮ್ಮ ನಾಗರಿಕ ಹಕ್ಕುಗಳಿಗಾಗಿ ಹೂಡಿದ ಬಂಡಾಯದ ಅಭೂತಪೂರ್ವ ನಿದರ್ಶನವಾಗಿತ್ತು. ದಮನಿತರ ನಾಗರಿಕ ಹಕ್ಕುಗಳ ಹೋರಾಟವಾಗಿ ಅದು ದೇಶದ್ದಷ್ಟೇ ಅಲ್ಲ, ಜಾಗತಿಕ ಇತಿಹಾಸದಲ್ಲಿಯೂ ಪ್ರಮುಖ ಸ್ಥಾನವನ್ನು ಪಡೆಯಬೇಕು.

2. ಎರಡು ಚಾರಿತ್ರಿಕ ಚಳವಳಿಗಳ ರೋಮಾಂಚಕ ಭಾಗಗಳು

ಪುಸ್ತಕದಲ್ಲಿರುವ ಆರ್.ಬಿ. ಮೋರೆ ಅವರ ಮೂಲ ಕಥನದ ಕೆಲವು ರೋಮಾಂಚಕ ಭಾಗಗಳು ಹೀಗಿವೆ:

ಕೆರೆ ನೀರನ್ನು ನಿರಾಕರಿಸುವ ಅಸ್ಪಶ್ಯತೆಯನ್ನು ಧಿಕ್ಕರಿಸಿದವರ ಮೇಲೆ ದಾಳಿ

ಸಾಂಪ್ರದಾಯಿಕ ಮತ್ತು ಕ್ರೂರ ಪರಂಪರಾಗತ ಧೋರಣೆಯನ್ನು ಪೋಷಿಸಿಕೊಂಡು ಬಂದಿದ್ದವರಿಗೆ ಇದೆಲ್ಲವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜನರನ್ನು ಕಾಲ್ನಡಿಗೆಯಲ್ಲೋ ಸೈಕಲ್ ಹತ್ತಿಕೊಂಡೋ ಹೋಗಿ, ‘ಮಹಾರ್‌ರು ಈಗಾಗಲೇ ಕೆರೆಯನ್ನು ಕಲುಷಿತಗೊಳಿಸಿದ್ದಾರೆ, ಇನ್ನು ಅವರು ವೀರೇಶ್ವರ ದೇವಸ್ಥಾನವನ್ನು ಪ್ರವೇಶಿಸುವವರಿದ್ದಾರೆ’ ಎಂಬ ವದಂತಿಯನ್ನು ರೈತ ಸಮುದಾಯದಲ್ಲಿ ಹಬ್ಬಿಸಿದರು. ಇವರ ಸುಳ್ಳು ವದಂತಿಗೆ ಕಿವಿಗೊಟ್ಟು, ಮೇಲ್ಜಾತಿಯ ಭೂಮಾಲಕರು ಮತ್ತು ಲೇವಾದೇವಿ ಸಾಹುಕಾರರ ಚಿತಾವಣೆಗೆ ಬಲಿಯಾಗಿ ಸ್ಪೃಶ್ಯ ಜಾತಿಗಳ ಸಾವಿರಾರು ಬಡ ಜನ ತಮ್ಮ ದೇವರು ಮತ್ತು ಧರ್ಮವನ್ನು ಕಾಪಾಡಲು ಮಹಾಡ್‌ನತ್ತ ಧಾವಿಸಿದರು. ವೀರೇಶ್ವರ ದೇವಸ್ಥಾನದ ಆವರಣದಲ್ಲಿ ಒಗ್ಗೂಡಿದರು. ಅವರ ಉಪಸ್ಥಿತಿಯಿಂದ ಉತ್ತೇಜಿತರಾದ ಕೆಲವು ಅಶಿಸ್ತಿನ ವ್ಯಕ್ತಿಗಳು ಸಮ್ಮೇಳನದ ನಂತರ ಮಾರ್ಕೆಟ್‌ನಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯ ವ್ಯಕ್ತಿಗಳನ್ನು ಹಿಡಿದು ಹೊಡೆಯತೊಡಗಿದರು.

ಅಸ್ಪೃಶ್ಯರು ಕೆರೆಯಿಂದ ಹಿಂದಿರುಗಿದ ಎರಡು ಮೂರು ಗಂಟೆಗಳ ಕಾಲ ಇದು ನಡೆಯಿತು. ಈ ಹೊತ್ತಿಗೆ ಸಮ್ಮೇಳನಕ್ಕೆ ಬಂದಿದ್ದ ಹೆಚ್ಚಿನ ಜನ ಊಟ ಮಾಡಿ ತಮ್ಮ ತಮ್ಮ ಗ್ರಾಮಗಳಿಗೆ ಹೊರಟಿದ್ದರು, ಕೆಲವರು ಆಗಲೇ ಹೋಗಿಯೇ ಬಿಟ್ಟಿದ್ದರು. ಇನ್ನು ಕೆಲವರು ಇನ್ನೂ ಊಟ ಮಾಡುತ್ತಿದ್ದರು, ತಮ್ಮ ಜನರ ಮೇಲೆ ಆಗುತ್ತಿರುವ ದಾಳಿಯ ಸುದ್ದಿ ಕೇಳಿ ಅವರು ಊಟವನ್ನು ಅರ್ಧದಲ್ಲಿಯೇ ಬಿಟ್ಟು ಎದ್ದರು. ಅವರು ದಾಳಿಕೋರರನ್ನು ಮುಖಾಮುಖಿ ಎದುರಿಸುವ ನಿರ್ಧಾರವನ್ನು ಮಾಡಿದ್ದರು. ಪೆಂಡಾಲುಗಳನ್ನು ಮುರಿದು ಅದರಿಂದ ಕೋಲು, ಬಡಿಗೆಗಳನ್ನು ಎತ್ತಿಕೊಂಡರು. ಕೆಲವು ಡಾಕ್ ಬಂಗಲೆಗೆ ಓಡಿ ಹೋಗಿ ಅಸಹಾಯಕ ಜನರ ಮೇಲೆ ದಾಳಿ ಮಾಡುತ್ತಿರುವ ಹೇಡಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಅನುಮತಿಯನ್ನು ಕೋರಿದರು. ಆದರೆ ಅವರಿಗೆ ಆಕ್ರೋಶಕ್ಕೆ ಒಳಗಾಗದೆ ಶಾಂತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಮರಳಲು ಹೇಳಲಾಯಿತು. ಬಸ್ ಡಿಪೋದ ಪಶ್ಚಿಮ ಭಾಗದಲ್ಲಿ ಸಾವಿರಾರು ಅಸ್ಪೃಶ್ಯರು ಸೇರಿದ್ದರು. ಮೇಲೆ ಹೇಳಿದ ಗೂಂಡಾಗಳು ಮಾರ್ಕೆಟ್ ಪ್ರದೇಶದಲ್ಲಿ, ಓಣಿ ಓಣಿಗಳಲ್ಲಿ ಮುಕ್ತವಾಗಿ ಓಡಾಡಿ ಅಸ್ಪಶ್ಯ ಜಾತಿಯ ಒಬ್ಬೊಬ್ಬರೇ ಸಿಗುವ ವ್ಯಕ್ತಿಗಳನ್ನು ಹಿಡಿದು ಹೊಡೆಯುವುದಕ್ಕಾಗಿ ನೋಡುತ್ತಿದ್ದರು. ಇಂಥವರ ಮಾರಣಾಂತಿಕ ಹಲ್ಲೆಗೆ ಸಿಕ್ಕವರಲ್ಲಿ ಒಬ್ಬರು ಮಹಾರ್ ಸಮಾಜ್ ಸೇವಾ ಸಂಘದ ಅಧ್ಯಕ್ಷರಾದ ಭಿಕಾಜಿ ಸಾಂಭಾಜಿ ಗಾಯಕ್ವಾಡ್ ಮತ್ತು ಬಾಂಬೆಯಿಂದ ಬಂದಿದ್ದ ಇನ್ನು ಕೆಲವರು.

ಪಟ್ಟಣದ ರಸ್ತೆಗಳು ತಮ್ಮ ಮೂಲಭೂತ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮುಗ್ಧ ದಲಿತರ ರಕ್ತದಿಂದ ಕಲೆಯಾಗಿದ್ದವು. ಗೂಂಡಾಗಳು ಮಾರ್ಕೆಟ್‌ನಲ್ಲಿ ಬೇಸ್ ಕ್ಯಾಂಪ್‌ಗಳ ಮೇಲೆಯೂ ದಾಳಿ ನಡೆಸಲು ಏಳು ಬಾರಿ ಪ್ರಯತ್ನಿಸಿದ್ದರು; ಆದರೆ, ಬಾಗಿಲಲ್ಲೇ ಕೈಯಲ್ಲಿ ಕುಡಗೋಲು, ಕಬ್ಬಿಣದ ರಾಡುಗಳನ್ನು ಹಿಡಿದು ನಿಂತಿದ್ದ, ವಯಸ್ಸಾದ ಆದರೂ ಕಟ್ಟುಮಸ್ತಾದ ಶರೀರದ ಇಬ್ಬರು ಕಾರ್ಯಕರ್ತರು, ಶಿವರಾಮ್ ಗೋಪಾಲ್ ಜಾಧವ್ ಮತ್ತು ಸಾಂಭಾಜಿ ತುಕಾರಾಮ್ ಗಾಯಕ್ವಾಡ್ ಮತ್ತು ಅವರ ಬೆನ್ನಿಗೆ ನಿಂತಿದ್ದ ಯುವಜನರ ಬಲವಾದ ಗುಂಪನ್ನು ನೋಡಿ ಹಿಮ್ಮೆಟ್ಟಿದ್ದರು. ಅವರ ಕೋಪೋದ್ರಿಕ್ತ ಮುಖ ಮತ್ತು ಕೈಯಲ್ಲಿನ ಆಯುಧಗಳನ್ನು ನೋಡಿ ಅವರ ಮೇಲೆ ಹಲ್ಲೆ ಮಾಡುವ ಧೈರ್ಯ ಆ ಗೂಂಡಾಗಳಿಗೆ ಬರಲಿಲ್ಲ. ಹಾಗೆಯೇ ಗುಂಪುಗುಂಪುಗಳಲ್ಲಿ ಓಡಾಡುತ್ತಿದ್ದ ಅಸ್ಪೃಶ್ಯರನ್ನು ಅವರು ಮುಟ್ಟಲು ಹೋಗಲಿಲ್ಲ. ನಂತರ ಈ ಗೂಂಡಾಗಳು ತಮ್ಮ ಗಮನವನ್ನು ಮೋಚಿಗಳ ಅಂಗಡಿಗಳ ಮೇಲೆ ತಿರುಗಿಸಿದರು. ಕಂಡೇಶ್‌ನಿಂದ ಬಂದಿದ್ದ ಈ ಅಂಗಡಿಕಾರ ಪುರುಷರನ್ನಷ್ಟೇ ಅಲ್ಲ, ಎಳೆಯ, ವೃದ್ಧ ಮಹಿಳೆಯರನ್ನು ಚಚ್ಚಿದರು. ಈ ಕ್ರೌರ್ಯಕ್ಕೆ ಮಕ್ಕಳೂ ಬಲಿಯಾದರು. ಭಾನುದಾಸ್ ಕಾಂಬ್ಳಿ ಮತ್ತು ಪಿ.ಎನ್.ರಾಜ್‌ಭೋಗ್‌ರಂಥ ಹೆಸರಾಂತ ಅಸ್ಪೃಶ್ಯ ನಾಯಕರೂ ಈ ಹಲ್ಲೆಗಳಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.’’

ಮನುಸ್ಮತಿಯ ದಹನ

‘‘ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬರು ಅದರಲ್ಲಿ ಭಾಗವಹಿಸಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಗ್ರಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, ‘‘ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1,000 ಜನ ಸಿದ್ಧವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ.’’ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು. ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು: ‘‘ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ’’. ಧರ್ಮಶಾಲಾದ ಕಚೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು. ಶಿಕ್ಷಿತ ಪ್ರತಿನಿಧಿಗಳಲ್ಲಿ ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3,500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು. ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು.

ಬೆಳಗ್ಗೆ 4:30ರ ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾಗಿತ್ತು. ಬೆಳಗ್ಗೆ 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ನಾನು ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡೀ ಮಾರ್ಕೆಟ್ ನಿರ್ಜನವಾಗಿತ್ತು. ನಾನು ಪತ್ರವನ್ನು ಕಲೆಕ್ಟರ್‌ಅವರ ಕೈಗೊಪ್ಪಿಸಿದೆ, ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿಸುವುದಾಗಿ ನನ್ನ ಮೂಲಕ ಮೌಖಿಕ ಸೂಚನೆ ನೀಡಿ ನನ್ನನ್ನು ಕಳುಹಿಸಿಕೊಟ್ಟರು. ನಾನು ಬಂದು ಅದನ್ನು ಬಾಬಾಸಾಹೇಬರಿಗೆ ತಿಳಿಸಿದೆ.

ಬಾಬಾಸಾಹೇಬರ ಜೊತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ, ತಮಾಷೆಯಾಗಿ ಹೇಳಿದರು, ‘‘ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳುಹಿಸಿದರು?’’ ಅದಕ್ಕೆ ನಾನು ಏನೂ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮತಿಯ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು. ಹೋಮ ಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರಬದ್ಧೆ ಮನುಸ್ಮತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿ ತುಳುಕುತ್ತಿತ್ತು.’’

Related Articles

ಇತ್ತೀಚಿನ ಸುದ್ದಿಗಳು