Wednesday, June 19, 2024

ಸತ್ಯ | ನ್ಯಾಯ |ಧರ್ಮ

11 ಕೊಲೆ, 69 ಖುಲಾಸೆ…!

ಅಹ್ಮದಾಬಾದ್ ನ ನರೋಡಾ ಗಾಮ್ ಪ್ರದೇಶದ ಕುಂಬಾರ್ ವಾಸ್ ನ ಮುಸ್ಲಿಂ ಮೊಹಲ್ಲಾ ಎಂದು ಹೆಸರಾದ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿತ್ತು. ಇದರಲ್ಲಿ ಬಿಜೆಪಿಯ ಮಾಜಿ ಸಚಿವೆ, ನರೋಡಾ ಪಾಟಿಯಾ ನರಮೇಧದ ಅಪರಾಧಿ ಮಾಯಾ ಕೊಡ್ನಾನಿ, ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ, ವಿಶ್ವ ಹಿಂದೂ ಪರಿಷತ್ ನಾಯಕ ಜಯದೀಪ್ ಪಟೇಲ್ ಮೊದಲಾದ ಪ್ರಮುಖರು ಸೇರಿದ್ದಾರೆ. ಪ್ರಕರಣದಲ್ಲಿ 11 ಮಂದಿ ಬರ್ಬರವಾಗಿ ಅಸು ನೀಗಿದ್ದರು. ಈ ಪ್ರಕರಣದ ಎಲ್ಲ 69 ಮಂದಿ ಆರೋಪಿಗಳನ್ನು ದೋಷ ಮುಕ್ತ ಗೊಳಿಸಿದ ಆಘಾತಕಾರಿ ತೀರ್ಪು ಇದೀಗ ಹೊರಬಿದ್ದಿದೆ. ನ್ಯಾಯಾಲಯದ ಪ್ರಕಾರ ಆ ಎಲ್ಲ ಆರೋಪಿಗಳು ನಿರಪರಾಧಿಗಳಾದರೆ ನಿಜವಾಗಿ ಅಪರಾಧ ಎಸಗಿದವರು ಯಾರು? _ ಶ್ರೀನಿವಾಸ ಕಾರ್ಕಳ

ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ ಪ್ರಕರಣ ದೇಶದಲ್ಲಿ ತೀವ್ರ ಸಂಚಲನ ಮತ್ತು ಆಘಾತ ಮೂಡಿಸಿ, ಇನ್ನೇನು ವರ್ಷ ಕಳೆಯುವ ಮೊದಲೇ, 11 ಮಂದಿಯನ್ನು ಬರ್ಬರವಾಗಿ ಸುಟ್ಟು ಹಾಕಿದ ಹೊರತಾಗಿಯೂ ನ್ಯಾಯಾಲಯವು ಆ ಪ್ರಕರಣದ ಎಲ್ಲ 69 ಮಂದಿ ಆರೋಪಿಗಳನ್ನು ದೋಷ ಮುಕ್ತ ಗೊಳಿಸಿದ ಇನ್ನೊಂದು ಆಘಾತಕಾರಿ ತೀರ್ಪು  ಹೊರಬಿದ್ದಿದೆ. ಇದರಿಂದ ಒಟ್ಟಾರೆಯಾಗಿ ದೇಶದ ನ್ಯಾಯದಾನ ಪ್ರಕ್ರಿಯೆಯ ಬಗ್ಗೆಯೇ ಜನ ಭರವಸೆ ಕಳೆದುಕೊಳ್ಳುವಂತಾಗಿದೆ. ವಿಶೇಷವೆಂದರೆ, ಈ ಎರಡೂ ಪ್ರಕರಣಗಳು ಗುಜರಾತ್ ಗೆ ಸಂಬಂಧಿಸಿದವು!!

ಗುಜರಾತಿನ ಅಹಮದಾಬಾದ್ ವಿಶೇಷ ನ್ಯಾಯಾಲಯವು ಇದೇ 20, ಎಪ್ರಿಲ್, 2023 ರಂದು ನರೋಡಾ ಗಾಮ್ ನರಮೇಧದ ಎಲ್ಲ ಆರೋಪಿಗಳನ್ನು ದೋಷಮುಕ್ತ ಗೊಳಿಸಿದೆ. ಇದರಲ್ಲಿ ಬಿಜೆಪಿಯ ಮಾಜಿ ಸಚಿವೆ, ನರೋಡಾ ಪಾಟಿಯಾ ನರಮೇಧದ ಅಪರಾಧಿ ಮಾಯಾ ಕೊಡ್ನಾನಿ, ಬಜರಂಗದಳದ ಮಾಜಿ ನಾಯಕ ಬಾಬು ಬಜರಂಗಿ, ವಿಶ್ವ ಹಿಂದೂ ಪರಿಷತ್ ನಾಯಕ ಜಯದೀಪ್ ಪಟೇಲ್ ಮೊದಲಾದ ಪ್ರಮುಖರು ಸೇರಿದ್ದಾರೆ.

ಏನಿದು ನರೋಡಾ ಗಾಮ್ ನರಮೇಧ ಪ್ರಕರಣ?

ಅದು ಗುಜರಾತ್ ರಾಜ್ಯವು ಕೋಮು ಗಲಭೆಯ ದಳ್ಳುರಿಯಲ್ಲಿ ತತ್ತರಿಸಿದ ದಿನಗಳು. ಗೋದ್ರಾದಲ್ಲಿ ಫೆಬ್ರವರಿ 27, 2002 ರಂದು ಸಬರಮತಿ ರೈಲು ದಹನ ಪ್ರಕರಣ ನಡೆದು 59 ಮಂದಿ ಜೀವ ಕಳೆದುಕೊಂಡ ಬೆನ್ನಿಗೇ ಗುಜರಾತ್ ನಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ಈ ಹಿಂಸೆಯನ್ನು ತಡೆಯಲು ಸರಕಾರ ಏನು ಕ್ರಮ ತೆಗೆದುಕೊಳ್ಳಬೇಕಿತ್ತೋ ಅದನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಮಾತು ಒತ್ತಟ್ಟಿಗಿರಲಿ, ಹಿಂಸಾಚಾರಕ್ಕೆ ಸರಕಾರವೇ ಪರೋಕ್ಷ ಬೆಂಬಲ ನೀಡಿತ್ತು ಎಂದು ಕೂಡಾ ಆರೋಪಿಸಲಾಗಿದೆ. ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿದ ಬಿಬಿಸಿ ಸಾಕ್ಷ್ಯಚಿತ್ರದಲ್ಲಿಯೂ ಈ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಅದರಲ್ಲಿಯಂತೂ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಇದಕ್ಕೆ ನೇರ ಹೊಣೆ ಮಾಡಲಾಗಿದೆ.

ಪರಿಣಾಮವಾಗಿ, ಗುಜರಾತ್ ರಾಜ್ಯವು ಒಂಭತ್ತು ಬೃಹತ್ ಕೋಮುಗಲಭೆಗಳಿಗೆ ಸಾಕ್ಷಿಯಾಯಿತು (ಸರಕಾರಿ ದಾಖಲೆಗಳ ಪ್ರಕಾರ 1044 ಮಂದಿ ಸತ್ತರು, 223 ಮಂದಿ ನಾಪತ್ತೆಯಾದರು, 2500 ಮಂದಿ ಗಾಯಗೊಂಡರು. ಅನಧಿಕೃತ ವರದಿಗಳ ಪ್ರಕಾರ ಸತ್ತವರ ಸಂಖ್ಯಯೇ 2000 ಕ್ಕಿಂತ ಅಧಿಕ!). ಅದರಲ್ಲಿ ಒಂದು ಇದೇ ನರೋಡಾ ಗಾಮ್ ಪ್ರಕರಣ.

ಅದು ನಡೆದುದು ಫೆಬ್ರವರಿ 28, 2002 ರಂದು. ಅಂದು ಅಹ್ಮದಾಬಾದ್ ನ ನರೋಡಾ ಗಾಮ್ ಪ್ರದೇಶದ ಕುಂಬಾರ್ ವಾಸ್ ನ ಮುಸ್ಲಿಂ ಮೊಹಲ್ಲಾ ಎಂದು ಹೆಸರಾದ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿತ್ತು. ಪರಿಣಾಮವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ 11 ಮಂದಿ ಜೀವಂತ ಸುಟ್ಟುಹೋದರು. ಈ ಸಂಬಂಧ ನರೋಡಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಕೂಡಾ ದಾಖಲಾಗಿತ್ತು.

ಗುಜರಾತ್ ಗಲಭೆಯ ವಿಚಾರಣೆ ನಡೆಸಿದ ಜಸ್ಟಿಸ್ ನಾನಾವತಿ ಕಮಿಷನ್ ನ ವರದಿಯಲ್ಲಿ ‘ಈ ಮುಸ್ಲಿಮರಿಗೆ ಸಕಾಲದಲ್ಲಿ ಪೊಲೀಸ್ ನೆರವು ಬರಲಿಲ್ಲ. ದುಷ್ಕರ್ಮಿಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟುಬಿಡಲಾಯಿತು, ಪೊಲೀಸರು ಬಂದುದು ಅನಾಹುತ ನಡೆದು ಸಂಜೆಯಾದ ಮೇಲೆ’ ಎಂದು ಹೇಳಲಾಗಿದೆ. ಆದರೆ ಇತರ ಕಡೆಗಳಲ್ಲಿ ಅದೇ ಹೊತ್ತಿನಲ್ಲಿ ಇದಕ್ಕಿಂತಲೂ ಗಂಭೀರ ಪ್ರಕರಣಗಳು ನಡೆಯುತ್ತಿದ್ದುರಿಂದ ನಾವು ಅತ್ತ ಕಡೆ ಗಮನ ಕೊಡುವುದು ಅನಿವಾರ್ಯವಾಯಿತು, ಹಾಗಾಗಿ ನರೋಡಾ ಗಾಮ್ ಗೆ ಧಾವಿಸಲಾಗಲಿಲ್ಲ ಎನ್ನುವುದು ಪೊಲೀಸರ ವಾದವಾಗಿತ್ತು.

ನಾನಾವತಿ ಆಯೋಗದ ಹೇಳಿಕೆಯ ಪ್ರಕಾರ, ವಿ ಎಚ್ ಪಿ ನಾಯಕರು, ಬಜರಂಗದಳ ನಾಯಕರು ಮತ್ತು ಬಿಜೆಪಿ ನಾಯಕರು ಸಕ್ರಿಯವಾಗಿ ಈ ದೊಂಬಿಯಲ್ಲಿ  ಪಾಲ್ಗೊಂಡಿದ್ದನ್ನು ಅಲ್ಲಿನ ನಿವಾಸಿಗಳು ಮಾತ್ರವಲ್ಲ, ಅಲ್ಲಿದ್ದ ಪೊಲೀಸರೂ ಹೇಳಿದ್ದರು, ಹೇಳಿದ್ದಾರೆ.

ದಾಖಲಾದ ಪ್ರಕರಣಗಳು

ಪ್ರಕರಣದ ಆರೋಪಿ ಮಾಯಾ ಕೊಡ್ನಾನಿ ಆಗಿನ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಮಂತ್ರಿಯಾಗಿದ್ದವರು. ಬಾಬು ಬಜರಂಗಿ ಬಜರಂಗದಳ ನಾಯಕನಾಗಿದ್ದ. ಜಯದೀಪ್ ಪಟೇಲ್ ವಿಎಚ್ ಪಿ ಯ ನಾಯಕನಾಗಿದ್ದ. ವಿ ಎಚ್ ಗೋಹಿಲ್ ಆಗ ನರೋಡಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಆಗಿದ್ದ.

ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ (302), ಕೊಲೆ ಯತ್ನ (307), ಕ್ರಿಮಿನಲ್ ಸಂಚು (120 ಬಿ), ಕಾನೂನು ಬಾಹಿರವಾಗಿ ಗುಂಪುಗೂಡುವಿಕೆ (143), ಗಲಭೆ (147), ದರೋಡೆ, ಕೋಮು ಸಾಮರಸ್ಯಕ್ಕೆ ಧಕ್ಕೆ, ಬೆಂಕಿ ಹಚ್ಚುವಿಕೆ, ಸಾಕ್ಷ್ಯ ನಾಶ, ಗಲಭೆಗೆ ಉತ್ತೇಜನ (153), ಧಾರ್ಮಿಕ ಭಾವನೆಗಳಿಗೆ ಧಕ್ಕೆಯ ಉದ್ದೇಶಪೂರ್ವಕ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಇತರ ಆರೋಪಗಳು ಇದ್ದವು. ಈ ಅಪರಾಧಗಳಿಗೆ ಮರಣದಂಡನೆಯಂತಹ ಗರಿಷ್ಠ ಶಿಕ್ಷೆ ನೀಡಬಹುದಾಗಿದೆ.

ಇದನ್ನೂ ಓದಿ-ಅಘೋಷಿತ ತುರ್ತುಪರಿಸ್ಥಿತಿಯ ಅಗಣಿತ ರೂಪಗಳು

ಸುದೀರ್ಘ ವಿಚಾರಣೆ

2012 ರಲ್ಲಿ ಇದೇ ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿಗೆ ನರೋಡಾ ಪಾಟಿಯಾ ಪ್ರಕರಣದಲ್ಲಿ  (ಫೆಬ್ರವರಿ 28, 2002 ರಂದು ನಡೆದ, 97 ಮಂದಿಯನ್ನು ಬಲಿ ತೆಗೆದುಕೊಂಡ ಗುಜರಾತ್ ನ ಅತ್ಯಂತ ಬರ್ಬರ ನರಮೇಧ) 28 ವರ್ಷಗಳ ಶಿಕ್ಷೆ ಘೋಷಿಸಲಾಗಿತ್ತು. ಅದರೆ ಸಂಶಯದ ಲಾಭದ ನೆಲೆಯಲ್ಲಿ 2018 ರಲ್ಲಿ ಆಕೆಯನ್ನು ಗುಜರಾತ್ ಹೈಕೋರ್ಟ್ ದೋಷಮುಕ್ತ ಗೊಳಿಸಿತ್ತು.

ದೇಶವನ್ನೇ ಬೆಚ್ಚಿಬೀಳಿಸಿದ  ನರೋಡಾಗಾಮ್ ಹತ್ಯಾಕಾಂಡದ ಪ್ರಕರಣದಲ್ಲೂ ಇವರೇ ಪ್ರಮುಖ ಆರೋಪಿಗಳು. ಈ ಪ್ರಕರಣದ ವಿಚಾರಣೆ 2010 ರಲ್ಲಿ ಆರಂಭಗೊಂಡು 13 ವರ್ಷಗಳ ಕಾಲ ನಡೆಯಿತು. 6 ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದ್ದರು. ಪ್ರಾಸಿಕ್ಯೂಶನ್ ಮತ್ತು ಆರೋಪಿ ಪರ ವಕೀಲರು ಕ್ರಮವಾಗಿ 187 ಹಾಗೂ 57 ಸಾಕ್ಷಿಗಳನ್ನು ಪ್ರಶ್ನಿಸಿದ್ದರು.

2013 ರ ಸೆಪ್ಟಂಬರ್ 23 ರಂದು ತನಿಖೆ ಆರಂಭಗೊಂಡು ಎರಡು ವರ್ಷಗಳ ಕಾಲ ಪಾಟಿಸವಾಲುಗಳು ನಡೆದವು. ವಿಶೇಷ ನ್ಯಾಯಾಧೀಶ ಪಿ ಬಿ ದೇಸಾಯಿ ಪ್ರಕರಣದ ಅಂತಿಮ ವಾದ ಪ್ರತಿವಾದಗಳ ಆಲಿಕೆ ನಡೆಸಿದರು. ಅವರ ನಿವೃತ್ತಿಯ ತರುವಾಯ ನ್ಯಾಯಾಧೀಶ ಎಂ ಕೆ ದವೆ ಅಂತಿಮ ವಾದಗಳ ಆಲಿಕೆಯನ್ನು ಮುಂದುವರಿಸಿದರು. ಆನಂತರ ವಿಶೇಷ ನ್ಯಾಯಾಧೀಶರಾದ ಶುಭದಾ ಭಕ್ಷಿ ವಾದಗಳ ಆಲಿಕೆಯನ್ನು ಮುಂದುವರಿಸಿದರು. 2023 ರ ಎಪ್ರಿಲ್ 5 ರಂದು ವಾದಗಳ ಆಲಿಕೆ ಮುಕ್ತಾಯಗೊಂಡಿತ್ತು.

ನರೋದಾ ಗಾಮ್ ಪ್ರಕರಣದಲ್ಲಿ 86 ಮಂದಿ ಆರೋಪಿಗಳಾಗಿದ್ದರು. ವಿಚಾರಣೆಯ ಅವಧಿಯಲ್ಲಿ 18 ಮಂದಿ ಯ ಮೇಲಿನ ಆರೋಪ ಕೈಬಿಡಲಾಯಿತು. ಒಬ್ಬರನ್ನು ಡಿಸ್ಚಾರ್ಜ್ ಮಾಡಲಾಯಿತು. 67 ಮಂದಿ ಉಳಿದುಕೊಂಡರು. ಅವರೆಲ್ಲರೂ ಈಗ ಜಾಮೀನು ಪಡೆದುಕೊಂಡು ಹೊರಗಿದ್ದಾರೆ.  ಪ್ರಕರಣದ ಸಂಬಂಧ ಸುಮಾರು 182 ಮಂದಿ ಪ್ರಾಸಿಕ್ಯೂಶನ್ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಯಿತು.

ಪ್ರಕರಣದ ವಿಚಾರಣೆಯನ್ನು ನಿತ್ಯವೂ ನಡೆಸಿ ಆದಷ್ಟು ಬೇಗನೇ ಮುಗಿಸಬೇಕು ಎಂಬ ಆದೇಶದ ಹೊರತಾಗಿಯೂ ತೀರ್ಪಿಗೆ 13 ವರ್ಷ ಹಿಡಿಯಿತು. ಅಂದರೆ, ಗಲಭೆಯ 21 ವರ್ಷಗಳ  ಬಳಿಕ ತೀರ್ಪು ಹೊರಬಂದಂತಾಯಿತು!

ಅವರಲ್ಲ, ಇವರಲ್ಲ ಹಾಗಾದರೆ ಇನ್ಯಾರು?

ಅಂತೂ ಇಂತೂ ತೀರ್ಪೇನೋ ಹೊರಬಂತು. ಘಟನೆ ನಡೆದ 21 ವರ್ಷಗಳ ಬಳಿಕ ಪ್ರಕರಣ ವಿಲೆ ಆಯಿತು. ಆದರೆ ನ್ಯಾಯ?! ಪ್ರಕರಣದಲ್ಲಿ 11 ಮಂದಿ ಬರ್ಬರವಾಗಿ ಅಸು ನೀಗಿದ್ದು ನಿಜ. ನ್ಯಾಯಾಲಯದ ಪ್ರಕಾರ ಆ ಎಲ್ಲ ಆರೋಪಿಗಳು ನಿರಪರಾಧಿಗಳಾದರೆ ನಿಜವಾಗಿ ಅಪರಾಧ ಎಸಗಿದವರು ಯಾರು? ಈ ಬಗ್ಗೆ ಯೋಚಿಸುವ ಹೊಣೆ ನ್ಯಾಯಾಲಯ ಸಹಿತ ಯಾರಿಗೂ ಇಲ್ಲವೇ? ನರೋಡಾ ಗಾಮ್ ನಂತಹ ಬರ್ಬರ ಪ್ರಕರಣಗಳಲ್ಲಿಯೂ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲವಾದರೆ ನ್ಯಾಯಾಂಗದ ಮೇಲೆ ಭರವಸೆ ಮೂಡುವುದಾದರೂ ಎಂತು? ಈ ವಿಚಾರಣಾ ಪ್ರಕ್ರಿಯೆಗಳಿಗೆಲ್ಲ ಏನರ್ಥ? ಅವು ಕೇವಲ ಪ್ರಹಸನ ಎನಿಸುವುದಿಲ್ಲವೇ? ನರೋಡಾ ಗಾಮ್ ಹತ್ಯಾಕಾಂಡದ ಸಂತ್ರಸ್ತರ ಮನೆಯವರಿಗೆ ಈ ತೀರ್ಪು ನೋಡಿದಾಗ ಏನನಿಸಬಹುದು?

ನಿಜ. ಇಲ್ಲಿ ನ್ಯಾಯಾಧೀಶರನ್ನು ಮಾತ್ರ ದೂರಲಾಗುವುದಿಲ್ಲ. ಅವರು ತಮ್ಮ ಮುಂದೆ ಇರಿಸಲಾದ ಸಾಕ್ಷ್ಯಾಧಾರಗಳ ಮೇಲೆ, ಹಾಗೆಯೇ ಮಂಡಿಸಲಾದ ವಾದಗಳ ನೆಲೆಯಲ್ಲಿ ತೀರ್ಪು ನೀಡುತ್ತಾರೆ. ಆದರೆ ಈ ಸಾಕ್ಷ್ಯಾಧಾರಗಳನ್ನು ನೀಡುವವರೇ ಪ್ರಭುತ್ವದ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿ ಲೋಪ ಎಸಗಿದರೆ ಅಥವಾ ಪ್ರಕರಣದ ದಾರಿ ತಪ್ಪಿಸಿದರೆ ಆಗ?! ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ಏನು? ದುರುದ್ದೇಶದಿಂದಲೇ ಹೀಗೆ ಮಾಡುವ ಮೂಲಕ ತಮ್ಮವರಿಗೆ ಶಿಕ್ಷೆಯಾಗದ ಹಾಗೆ ನೋಡಿಕೊಳ್ಳುವುದು ಪ್ರಭುತ್ವಕ್ಕೆ ಸಾಧ‍್ಯ ಅಲ್ಲವೇ?

ಅದು ಬಾಬರಿ ಮಸೀದಿ ಧ್ವಂಸ ಪ್ರಕರಣ ಇರಬಹುದು, ದೇಶದಲ್ಲಿ ನಡೆದ ನಾನಾ ಕೋಮುಗಲಭೆಗಳಿರಬಹುದು, ಗುಜರಾತ್ ನ ನರಮೇಧದ ಪ್ರಕರಣಗಳಿರಬಹುದು, ಇವೆಲ್ಲವುಗಳಲ್ಲಿಯೂ ಒಂದು ಸಾಮಾನ್ಯ ಸಂಗತಿಯನ್ನು ಗಮನಿಸಬಹುದು. ಇವೆಲ್ಲವೂ ದಶಕ ದಶಕಗಳ ಕಾಲ ವಿಚಾರಣೆ ಕಂಡು, ಅಂತಿಮವಾಗಿ ‘ಬೆಟ್ಟ ಕಡಿದು ಇಲಿ ಹಿಡಿದರು’ ಎಂಬಂತೆ ಎಲ್ಲ ಆರೋಪಿಗಳೂ ಅಮಾಯಕರೆಂದು ರುಜುವಾತಾಗಿ ಬಿಡುಗಡೆಗೊಂಡ ಪ್ರಕರಣಗಳು.  ಅಂದರೆ ವ್ಯವಸ್ಥೆಯಲ್ಲಿಯೇ ಏನೋ ಗುರುತರ ದೋಷವಿದೆ ಎಂಬುದು ಸ್ಪಷ್ಟ. ಇದು ಲಘುವಾಗಿ ನೋಡುವ ಸಂಗತಿಯಲ್ಲ. ಇದರ ಬಗ್ಗೆ ಸರಕಾರ ಮತ್ತು ನ್ಯಾಯಾಂಗ ಗಂಭೀರವಾಗಿ ಯೋಜಿಸಿ ತಪ್ಪನ್ನು ಸರಿಪಡಿಸುವ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ದೇಶದ ಒಟ್ಟು ವ್ಯವಸ್ಥೆಗೆ ಇನ್ನಷ್ಟು ಅಪಾಯ ಕಾದಿದೆ. ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೆ ನ್ಯಾಯಾಂಗದ ಮೇಲೆ ಭರವಸೆ ಹೊರಟು ಹೋಗುವುದು ಮಾತ್ರವಲ್ಲ, ದುಷ್ಕರ್ಮಿಗಳಿಗೆ ದುಷ್ಕೃತ್ಯ ಎಸಗಲು ಇನ್ನಷ್ಟು ಕುಮ್ಮಕ್ಕು ಸಿಕ್ಕಂತಾಗುತ್ತದೆ ಎಂಬುದನ್ನು ಮರೆಯಬಾರದು.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ-ಪುಲ್ವಾಮಾ | ಆ ನಲವತ್ತು ಧೀರ ಯೋಧರ ಸಾವಿಗೆ ಯಾರು ಹೊಣೆ?

Related Articles

ಇತ್ತೀಚಿನ ಸುದ್ದಿಗಳು