Sunday, April 28, 2024

ಸತ್ಯ | ನ್ಯಾಯ |ಧರ್ಮ

ಚಿತ್ತಾಪುರ: 40 ಅಪರಾಧ ಪ್ರಕರಣ ಹಿನ್ನೆಲೆಯ ಮಣಿಕಂಠ ರಾಥೋಡ್ ಪರ ಪ್ರಧಾನಿ ಮೋದಿ ಪ್ರಚಾರ!

ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಅಪರಾಧ ಹಿನ್ನೆಲೆ ಇದ್ದ ಹಾಗೂ ಒಂದು ವರ್ಷದ ಹಿಂದೆ ಕಲಬುರಗಿಯಿಂದ ಗಡಿಪಾರಾಗಿದ್ದ ವಿವಾದಾತ್ಮಕ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಹೆಸರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಚಿತ್ತಾಪುರದ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆಶ್ಚರ್ಯವೆಂದರೆ, ಮಣಿಕಂಠ ಪರ ಪ್ರಧಾನಿ ಮೋದಿ ಮತಯಾಚಿಸಲಿದ್ದಾರೆ.

`ಪ್ರಧಾನಿ ಮೋದಿ ಅವರು ಮೇ 2ರಂದು ಕಲಬುರಗಿ ನಗರದಲ್ಲಿ ರೋಡ್ ಶೋ ನಡೆಸಿ ವಾಪಸ್ ತೆರಳುವರು. ಮೇ 6ರಂದು ಚಿತ್ತಾಪುರ ಕ್ಷೇತ್ರದ ರಾವೂರಗ್ರಾಮ ಸಮೀಪದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ-150ರ ಬದಿಯ ಖಾಸಗಿ ಜಮೀನಿನಲ್ಲಿ ಸಮಾವೇಶ ನಡೆಸಲಾಗುವುದು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 5 ಲಕ್ಷ ಜನ ಸೇರುವ ನಿರೀಕ್ಷೆಯಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರದ ಮೂಲಕ ಮುಜುಗರ ಉಂಟು ಮಾಡುತ್ತಾ ಬಂದಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಈ ಸಲ ಸೋಲಿಸಬೇಕೆಂಬ ನಿಟ್ಟಿನಲ್ಲಿ ಕ್ರಿಮಿನಲ್ ಮೊಕದ್ದಮೆ ಇರುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಈತನ ವಿರುದ್ದ ಯಾದಗಿರಿ, ವಿಜಯಪುರ, ಕಲಬುರಗಿ ಅಲ್ಲದೇ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲೂ ಸಹ ಒಟ್ಟು 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

30 ಕೋಟಿ ಒಡೆಯನ ವಿರುದ್ಧ 40 ಕ್ರಿಮಿನಲ್‌ ಪ್ರಕರಣ!

ಹೌದು, ಅಕ್ರಮ‌ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ ಹಾಕಿರೋದು ಸೇರಿದಂತೆ ಮೂರು ಜಿಲ್ಲೆಯ ಹಲವಡೆ ವಿವಿಧ ಪ್ರಕರಣಗಳನ್ನು ಮಣಿಕಂಠ ರಾಥೋಡ ಎದುರಿಸುತ್ತಿದ್ದಾನೆ. ಕೆಲವು ಪ್ರಕರಣಗಳು ಹೈಕೋರ್ಟ್‌ ತಡೆ ಇದ್ದರೆ. ಇನ್ನು ಕೆಲವು ವಿಚಾರಣೆಯ ಅಂತದಲ್ಲಿ ಇದೆ. ವಿಶೇಷ ಏನೆಂದರೆ, ಈತನ ವಯಸ್ಸು 26 ಆದರೆ ಇವರ ವಯಸ್ಸಿಗಿಂತ ಹೆಚ್ಚು ಪ್ರಕರಣಗಳು ಇವರ ವಿರುದ್ಧ ದಾಖಲಾಗಿರುವುದು ಅಚ್ಚರಿ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಇದರಲ್ಲಿ ತಮ್ಮ ಮೇಲೆ 40 ಪ್ರಕರಣಗಳು ಇರುವುದನ್ನ ಮಣಿಕಂಠ ರಾಥೋಡ್ ಉಲ್ಲೇಖಿಸಿದ್ದಾರೆ.

ಮಣಿಕಂಠ ಕೈಯಲ್ಲಿ 6.75 ಲಕ್ಷ ರೂ, ಪತ್ನಿ ಬಳಿ 1.90 ಲಕ್ಷ ರೂ., ವಿವಿಧ ಬ್ಯಾಂಕುಗಳಲ್ಲಿ 33.64 ಲಕ್ಷ ರೂ., ಪತ್ನಿ ಹೆಸರಲ್ಲಿ 64 ಲಕ್ಷ ರೂ., ಎಲ್ಲೈಸಿಯಲ್ಲಿ ಹೂಡಿಕೆ, ವಿವಿಧ ಮಾದರಿಗಳ ಆಧುನಿಕ ಕಾರುಗಳು, ಚಿನ್ನಾಭರಣ ಬೆಳ್ಳಿ ಸೇರಿದಂತೆ ಮಣಿಕಂಠ ಬಳಿಯ ಚರಾಸ್ತಿಯ ಒಟ್ಟು ಮೊತ್ತ 11.34 ಕೋಟಿ ರೂ. ಇರುವುದಾಗಿ ಹೇಳಿದ್ದಾರೆ. ಇವರ ಪತ್ನಿ ಬಳಿ ಇರುವ ಚರಾಸ್ತಿ ಮೌಲ್ಯ 3.22 ಕೋಟಿ ರೂ. ಇಬ್ಬರು ಮಕ್ಕಳ ಹೆಸರಲ್ಲಿ ಕ್ರಮವಾಗಿ 25 ಹಾಗೂ 50 ಲಕ್ಷ ರೂ. ಚರಾಸ್ತಿಗಳಿವೆ.

ಕಲಬುರಗಿ, ಹೈದ್ರಾಬಾದ್, ಯಾದಗಿರಿ ಸೇರಿದಂತೆ ಹಲವೆಡೆ ಮಣಿಕಂಠ ಹೊಂದಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ 17.83 ಕೋಟಿ ರೂಪಾಯಿಯಾದರೆ, ಇವರ ಪತ್ನಿ ಹೆಸರಲ್ಲಿ 13.48 ಕೋಟಿ ರೂ. ಒಟ್ಟು ಮೌಲ್ಯಸ್ಥಿರಾಸ್ತಿ ಇದೆ. ಮಣಿಕಂಠ ರಾಥೋಡ್ ದಂಪತಿ ಮೇಲೆ 15.33 ಕೋಟಿ ರೂ. ಮೊತ್ತದ ಸಾಲದ ಹೊರೆಯೂ ಇದೆ.

ಮಣಿಕಂಠ ರಾಥೋಡ್‌ ಗಡಿಪಾರು!

ಮಣಿಕಂಠ ರಾಥೋಡ್ ಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದ ನಂತರವೂ ಮತ್ತೆ ಹಳೆ‌ ಕಾಯಕ ಮುಂದುವರೆಸಿದ್ದು, ಇವರನ್ನು ಗಡಿಪಾರು ಮಾಡಬೇಕೆಂದು ಹಲವು ಸಂಘಟನೆಗಳು ಆಗಸ್ಟ್ 2022ರಲ್ಲಿ ಆಗ್ರಹಿಸಿದ್ದವು. ಇದರ ಆದಾರದ ಮೇಲೆ ಪರಿಶೀಲನೆ ನಡೆಸಿದ ಪೊಲೀಸರು ಕಲಬುರಗಿಯಿಂದ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಗೆ ಒಂದು ವರ್ಷಗಳ ಕಾಲ ಗಡಿ ಪಾರು‌ ಮಾಡಲಾಗಿದೆ ಎಂದು ಸೆಪ್ಟೆಂಬರ್ 30 ರಂದು ಅಂದಿ‌ನ ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತ ಅಡ್ಡೂರ್‌ ಶ್ರೀನಿವಾಸಲು ಆದೇಶ ಹೊರಡಿಸಿದ್ದರು.

ಚಿತ್ತಾಪುರದಲ್ಲಿ ಭುಗಿಲೆದ್ದ ಆಕ್ರೋಶ!

ಚಿತ್ತಾಪುರ ಕ್ಷೇತ್ರದಲ್ಲಿ ಸಜ್ಜನರನ್ನು ಬಿಟ್ಟು ರೌಡಿ ಶೀಟರ್ ಆಗಿರುವ, ಅನೇಕ ಪ್ರಕರಣಗಳು ಇರೋ ಮಣಿಕಂಠ ರಾಥೋಡ್ಗೆ ಟಿಕೆಟ್ ನೀಡಿದ್ದಕ್ಕೆ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಈಗಾಗಲೇ ಎರಡು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಅವರನ್ನ ಸೋಲಿಸಲೇಬೇಕು ಎಂದು ಬಿಜೆಪಿ ಕ್ರಿಮಿನಲ್‌ ಹಿನ್ನೆಲೆ ಇರುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ.

ಇಂತಹ ಕ್ರಿಮಿನಲ್‌ ಹಿನ್ನೆಲೆ ಮಣಿಕಂಠ ಠಾಥೋಡನನ್ನಿ ರಾಜಕೀಯವಾಗಿ ಬೆಳೆಯಲು ಬಿಜೆಪಿ ಪಕ್ಷ ಆಶಿರ್ವಾದ ಮಾಡಿ ಟಿಕೆಟ್ ಘೋಷಿಸಿರುವುದಲ್ಲದೇ ಖುದ್ದು ಮೋದಿತವರೇ ಪ್ರಚಾರಕ್ಕೆ ಬರುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

Related Articles

ಇತ್ತೀಚಿನ ಸುದ್ದಿಗಳು