Home ಅಪರಾಧ ವೇದ ಪಾಠಶಾಲೆಯಲ್ಲಿ 11 ವರ್ಷದ ಬಾಲಕನ ಸಾವು: ದೇಹದ ಮೇಲೆ 42 ಗಾಯಗಳು, 11 ಕಡೆ...

ವೇದ ಪಾಠಶಾಲೆಯಲ್ಲಿ 11 ವರ್ಷದ ಬಾಲಕನ ಸಾವು: ದೇಹದ ಮೇಲೆ 42 ಗಾಯಗಳು, 11 ಕಡೆ ಸಿಗರೇಟ್ ಸುಟ್ಟ ಗುರುತು!

0

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ವೇದ ಪಾಠಶಾಲೆಯಲ್ಲಿ (ಗುರುಕುಲ) ಕಲಿಯುತ್ತಿದ್ದ 11 ವರ್ಷದ ದಿವ್ಯಾಂಶ್ ಎಂಬ ಬಾಲಕನನ್ನು ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ಅಂಶಗಳು ಕೇಳುಗರ ಎದೆಬಡಿತವನ್ನೇ ಹೆಚ್ಚಿಸುವಂತಿವೆ.

ಕಾನ್ಪುರದ ಮಹಾರಾಜ್‌ಪುರ ಪ್ರದೇಶದ ‘ರಾಮಾನುಜ ಭಾಗವತ್ ವೇದ ವಿದ್ಯಾಪೀಠ’ದಲ್ಲಿ ಈ ದಾರುಣ ಘಟನೆ ನಡೆದಿದೆ. ಏಪ್ರಿಲ್ 15 ರಂದು ದಿವ್ಯಾಂಶ್‌ನನ್ನು ಅವನ ಕುಟುಂಬದವರು ಈ ಗುರುಕುಲಕ್ಕೆ ಸೇರಿಸಿದ್ದರು. ದುರಂತವೆಂದರೆ, ಈ ಪಾಠಶಾಲೆಯನ್ನು ನಡೆಸುತ್ತಿದ್ದವನು ಬಾಲಕನ ಸ್ವಂತ ಸೋದರಮಾವ ಸೌರಭ್ ಮಿಶ್ರಾ ಅಲಿಯಾಸ್ ಕನ್ಹಯ್ಯ. ನಂಬಿ ಕಳುಹಿಸಿದವರೇ ಬಾಲಕನ ಪಾಲಿಗೆ ಯಮನಾಗಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ದೌರ್ಜನ್ಯ: ದಿವ್ಯಾಂಶ್‌ನ ದೇಹದ ಮೇಲೆ ಬರೋಬ್ಬರಿ 42 ಗಂಭೀರ ಗಾಯಗಳಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಬೆನ್ನು, ಕೈ, ಕಾಲು ಮತ್ತು ಎದೆಯ ಮೇಲೆ ಆಳವಾದ ಗಾಯಗಳಿದ್ದು, ದೇಹದ 11 ಕಡೆ ಸಿಗರೇಟಿನಿಂದ ಸುಟ್ಟ ಗುರುತುಗಳು ಕಂಡುಬಂದಿವೆ. ಬಾಲಕನನ್ನು ಭಾರವಾದ ವಸ್ತುವಿನಿಂದ ಮನಬಂದಂತೆ ಹೊಡೆದಿರುವುದರಿಂದ ಆಂತರಿಕವಾಗಿ ತೀವ್ರ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿ ತಿಳಿಸಿದೆ.

ಪೊಲೀಸ್ ವಿಚಾರಣೆಯಲ್ಲಿ ಬಾಲಕನ ಹತ್ಯೆಯ ಕರಾಳ ಸತ್ಯ: ತಾನೇ ನಡೆಸುತ್ತಿದ್ದ ಗುರುಕುಲದಲ್ಲಿ ಸೌರಭ್ ಮಿಶ್ರಾ ಬಾಲಕನ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಪೊಲೀಸರ ಮುಂದೆ ಸ್ಫೋಟಕ ಸತ್ಯಗಳನ್ನು ಒಪ್ಪಿಕೊಂಡಿದ್ದಾನೆ. ದಿವ್ಯಾಂಶ್‌ನನ್ನು ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಲ್ಲಿಸಿ, ರಾತ್ರಿಯಿಡೀ ಕೋಲಿನಿಂದ ಹೊಡೆದು, ಒದೆದು ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಒದ್ದ ಪರಿಣಾಮ ಬಾಲಕ ಗೋಡೆಗೆ ಅಪ್ಪಳಿಸಿ ಪ್ರಜ್ಞೆ ತಪ್ಪಿದ್ದಾನೆ. ಆತನನ್ನು ಹಾಗೆಯೇ ಬಿಟ್ಟು ಹೋದ ಆರೋಪಿ, ಮರುದಿನ ಬೆಳಿಗ್ಗೆ ಬಾಲಕ ಮೃತಪಟ್ಟಿದ್ದನ್ನು ಕಂಡು, ಕುಟುಂಬಸ್ಥರಿಗೆ “ಆರೋಗ್ಯ ಹದಗೆಟ್ಟಿದೆ” ಎಂದು ಸುಳ್ಳು ಮಾಹಿತಿ ನೀಡಿದ್ದನು.

ಸತ್ಯ ಮುಚ್ಚಿಡಲು ಸಂಚು: ಈ ಕೃತ್ಯವನ್ನು ಮುಚ್ಚಿಹಾಕಲು ಸೌರಭ್ ಮಿಶ್ರಾ ಆಪ್ತ ಗೆಳತಿ ಪ್ರಿಯಾಂಕಾಳ ಸಹಾಯದಿಂದ ಗುರುಕುಲದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಿದ್ದನು. ಪೊಲೀಸರು ಪ್ರಿಯಾಂಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕನ ಮೇಲೆ ಅತ್ಯಾಚಾರ ನಡೆದಿದೆ ಎಂಬ ಕುಟುಂಬಸ್ಥರ ಅನುಮಾನದ ಮೇರೆಗೆ, ಪೊಲೀಸರು ವೈದ್ಯಕೀಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಏಕೈಕ ಪುತ್ರನನ್ನು ಕಳೆದುಕೊಂಡ ಬಾಲಕನ ತಂದೆ ನರೇಂದ್ರ ಕುಮಾರ್, “ಸೋದರಮಾವನೇ ಕಂಸನಾಗುತ್ತಾನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ. ಸೌರಭ್ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

You cannot copy content of this page

Exit mobile version