Home ರಾಜಕೀಯ ಜಾತಿ ಸೂಚಕ “ಜನಿವಾರ” ಎಬ್ಬಿಸಿದ ವಿವಾದ: ಸಿಇಟಿ ಕೇಂದ್ರದ ಮೂವರು ಸಿಬ್ಬಂದಿ ಅಮಾನತು, ಎಫ್‌ಐಆರ್ ದಾಖಲು

ಜಾತಿ ಸೂಚಕ “ಜನಿವಾರ” ಎಬ್ಬಿಸಿದ ವಿವಾದ: ಸಿಇಟಿ ಕೇಂದ್ರದ ಮೂವರು ಸಿಬ್ಬಂದಿ ಅಮಾನತು, ಎಫ್‌ಐಆರ್ ದಾಖಲು

0

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ನಿಯಮದಂತೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಸೂಚಿಸಿದ ನಂತರ ಎದ್ದ ವಿವಾದ ಈಗ ಮೂವರು ಸಿಬ್ಬಂದಿಯ ಅಮಾನತು ಮತ್ತು ಎಫ್ಐಆರ್ ವರೆಗೂ ಬಂದು ನಿಂತಿದೆ. ಇದೊಂದು ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿದ್ದ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಹಾಜರಾಗಲು ಬೆಂಗಳೂರಿನ ಖಾಸಗಿ ಕಾಲೇಜಿನ ಕೇಂದ್ರಕ್ಕೆ ತೆರಳಿದ್ದ ಕೆಲವು ಜನಿವಾರಧಾರಿ ವಿದ್ಯಾರ್ಥಿಗಳಿಗೆ, ಪರೀಕ್ಷಾ ಹಾಲ್‌ಗೆ ಪ್ರವೇಶಿಸಲು ಮುನ್ನ ಜನಿವಾರ ತೆಗೆದುಹಾಕುವಂತೆ ಸಿಬ್ಬಂದಿ ಸೂಚನೆ ನೀಡಿದರೆಂಬ ಆರೋಪ ಕೇಳಿಬಂದಿದೆ. ಪರೀಕ್ಷಾ ನಿಯಮಾವಳಿಯಲ್ಲಿ ಇಂತಹ ಯಾವುದೇ ನಿರ್ಬಂಧವಿಲ್ಲದಿದ್ದರೂ ಈ ರೀತಿಯ ನಡೆ ಅನುಸರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ KEA ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ಕಾಲೇಜು ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಪರೀಕ್ಷಾ ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಯನ್ನು ತಕ್ಷಣದಿಂದ ಅಮಾನತು ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬರ ಪೋಷಕರು ಮಡಿವಾಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿತರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಘಟನೆಯ ಬಗ್ಗೆ ಕೆಲವು ಜಾತಿ ಆಕ್ರೋಶ ವ್ಯಕ್ತವಾಗಿದ್ದು, ಪರೀಕ್ಷಾ ನಿಯಮಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ತರಬಾರದು ಎಂದು ಪೋಷಕರು ಮತ್ತು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಪರೀಕ್ಷಾ ಕೇಂದ್ರಗಳಲ್ಲಿ ನಿಯಮ ಪಾಲನೆಯ ಜೊತೆಗೆ ಸಂವಿಧಾನಿಕ ಹಕ್ಕುಗಳಿಗೆ ಗೌರವ ನೀಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

You cannot copy content of this page

Exit mobile version