ಬೆಂಗಳೂರು: ಕೆಸಿಇಟಿ (KCET) ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಅಮಾನವೀಯ ಘಟನೆಯು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬನ ಧಾರ್ಮಿಕ ನಂಬಿಕೆಯಾದ ‘ಜನಿವಾರ’ವನ್ನು ಸಿಬ್ಬಂದಿಗಳು ತೆಗೆಸಿರುವ ಬಗ್ಗೆ ದೂರುಗಳು ಬಂದಿದ್ದವು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವರು ಪ್ರತಿಕ್ರಿಯಿಸಿದ್ದು, ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್, “ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಕಿವಿ ಓಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು, ಹಾಗೂ ಅವರ ಬಟ್ಟೆಗೆ ಕತ್ತರಿ ಹಾಕುವಂತಹ ಅಮಾನವೀಯ ನಡೆ ಅಕ್ಷಮ್ಯ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ತಾಣಗಳಾಗಬೇಕೇ ಹೊರತು, ಅವರ ಆತ್ಮಗೌರವಕ್ಕೆ ಧಕ್ಕೆ ತರುವ ಸ್ಥಳಗಳಲ್ಲ,” ಎಂದು ಕಿಡಿಕಾರಿದ್ದಾರೆ.
ಈ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. “ಈ ಘಟನೆಯಿಂದ ವಿದ್ಯಾರ್ಥಿಯು ಧೃತಿಗೆಡಬಾರದು. ಪರೀಕ್ಷೆ ಮತ್ತು ಬದುಕಿನ ಗೆಲುವಿನ ದಾರಿಯತ್ತ ಶ್ರದ್ಧೆ ಮತ್ತು ನಿಶ್ಚಿಂತೆಯಿಂದ ಸಾಗಿ. ಇಡೀ ಸರ್ಕಾರ ನಿಮ್ಮ ಬೆನ್ನಿಗಿದೆ, ಧೈರ್ಯವಾಗಿ ಪರೀಕ್ಷೆ ಎದುರಿಸಿ,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.
ಈ ಘಟನೆ ಮರುಕಳಿಸದಂತೆ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ ಎಂದಿರುವ ಸಚಿವರು, ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ಜರುಗಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
