Saturday, November 30, 2024

ಸತ್ಯ | ನ್ಯಾಯ |ಧರ್ಮ

ಇದುವರೆಗೂ 1100 ಪತ್ರಕರ್ತರ ಕೊಲೆ: ದಿ.ವೈರ್‌ ಸಂಪಾದಕಿ ಸೀಮಾ ಚಿಸ್ತಿ ಕಳವಳ

ಬೆಂಗಳೂರು: ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನಾವೆಲ್ಲ ಭಾಷಣ ಮಾಡುತ್ತೇವೆ. ಆದರೇ ಇದುವರೆಗೂ ನಮ್ಮ ದೇಶದಲ್ಲಿ 1100 ಪತ್ರಕರ್ತರ ಕೊಲೆ ನಡೆದಿದೆ ಎಂದು ದಿ.ವೈರ್‌ ಜಾಲತಾಣದ ಸಂಪಾದಕಿ ಸೀಮಾ ಚಿಸ್ತಿ ಕಳವಳವ್ಯಕ್ತಪಡಿಸಿದ್ದಾರೆ.

ನಗರದ ಟೌನ್‌ಹಾಲ್‌ನಲ್ಲಿ ನಡೆದ ಈದಿನ.ಕಾಮ್ ಎರಡನೇ ವರ್ಷದ ಓದುಗರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಈ ದೇಶದಲ್ಲಿ ಲಕ್ಷಗಟ್ಟಲೇ ಮಾಧ್ಯಮಗಳಿವೆ, ಆದರೆ ಎಷ್ಟರಲ್ಲಿ ವಾಸ್ತವ ಸಂಗತಿಗಳು,ವಸ್ತುನಿಷ್ಠ ವರದಿಗಳು ದೊರೆಯುತ್ತಿವೆ ಎಂದು ಪ್ರಶ್ನಿಸಿದರು.

ಮಾಧ್ಯಮಗಳ ಸಂಖ್ಯೆಗಳನ್ನು ಹೇಳುವುದಾದರೆ, 159 ದೇಶಗಳ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿ ಭಾರತ ಇದೆ. ಆದರೆ ಪತ್ರಿಕಾ ಸ್ವಾತಂತ್ರ್ಯದ ವಿಚಾರ ಬಂದಾಗ ದೇಶದಲ್ಲಿ 1100 ಪತ್ರಕರ್ತರು ಈ ದೇಶದಲ್ಲಿ ಕೊಲೆ ಆಗಿದ್ದಾರೆ. ಇದು ಹೆಚ್ಚು ಆತಂಕದ ವಿಚಾರ ಎಂದರು.

“ಈದಿನ.ಕಾಮ್‌ನಂಥ ಡಿಜಿಟಲ್ ಸ್ವತಂತ್ರ ಮಾಧ್ಯಮ ಬೇಕೇ ಬೇಕು. ನಾವು ಆ ಮಾಧ್ಯಮವೇ ಆಗಿ ವಾದಿಸುವುದಾದರೆ, ಇದು ಕೇವಲ ಮಾಧ್ಯಮಗಳ ಕೆಲಸವಲ್ಲ. ನಾಗರೀಕರಾಗಿ ನಮ್ಮೆಲ್ಲರ ಕೆಲಸ. ಏಕೆಂದರೆ ಭಾರತದ ಸ್ವತಂತ್ರ ಅಸ್ತಿತ್ವ ನಮ್ಮ ಜನರು ಮಾಡುವ ಆಯ್ಕೆಗಳ ಮೇಲಿರುತ್ತದೆ ಹಾಗಾಗಿ ಸ್ವತಂತ್ರ ಮಾಧ್ಯಮ ಬಹಳ ಮುಖ್ಯ. ನಾವು ದೊಡ್ಡ ಮಾಧ್ಯಮ ಎಂದು ಕರೆಯುವವರ ವಾಸ್ತವ ಏನು ಎಂಬುವುದು ನಮಗೆ ತಿಳಿದಿದೆ. ಆದ್ದರಿಂದಲೇ ಸ್ವತಂತ್ರ ಮಾಧ್ಯಮ ಬಹಳ ಮುಖ್ಯ. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಬಹುಸಂಖ್ಯಾತರ ಪಟ್ಟ ತಲುಪಿದ್ದಾರೆ. ಈ ಬಾರಿ ಸಣ್ಣ ಪ್ರಮಾಣದಲ್ಲಿ ವಿರೋಧ ಪಕ್ಷವಿದೆ. ಕ್ರೈಮ್, ಕ್ರಿಕೆಟ್ ಮತ್ತು ಸಿನೆಮಾದ ಗೀಳು ಮಾಧ್ಯಮಗಳನ್ನು ತುಂಬಿದ್ದು, ಬಹುತೇಕ ಮಾಧ್ಯಮಗಳಿಗೆ ಗ್ರಾಮೀಣ ವರದಿಗಾರರೇ ಇಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದರು.

“ಉದಾಹರಣೆಗೆ, ಹೊರಗೆ ಮಳೆ ಬರುತ್ತಿದ್ದರೆ ನಾರಾಯಣ್ ಅವರು ಮಳೆ ಬರುತ್ತಿದೆ ಎಂಬು ಅಭಿಪ್ರಾಯಪಟ್ಟರು ಅಥವಾ ಸಿಎಂ ಸಿದ್ಧರಾಮಯ್ಯ ಅವರು ಮಳೆ ಬರುತ್ತಿಲ್ಲ ಎಂದು ಹೇಳಿದರು ಎಂದು ವರದಿ ಮಾಡುವುದು ಮಾಧ್ಯಮದ ಕೆಲಸವಲ್ಲ. ಛತ್ರಿ ಹಿಡಿದು ಹೊರಗೆ ಹೋಗಿ 2 ಸೆಂ ಮೀ ಮಳೆ ಆಗಿದೆ ಎಂದು ಹೇಳುವುದು ನಮ್ಮ ಕೆಲಸ” ಎಂದು ಅವರು ಹೇಳಿದರು.

“ಖಬರ್ ಲೆಹರಿಯಾ, ವೈರ್, ಈದಿನ.ಕಾಮ್ ಸೇರಿ ನಾವೆಲ್ಲ ಇಂದು ಒಂದೇ ದಿಕ್ಕಿಗೆ ಹೊರಟಿದ್ದೇವೆ. ನಾವೆಲ್ಲ ಇದರಲ್ಲಿ ಮಾಡುತ್ತಿರುವ ಪ್ರಯತ್ನ ಜನರಿಗೆ ಆರೋಗ್ಯಕರವಾದ, ಸತ್ಯವಾದ ಮಾಹಿತಿಯನ್ನು ನೀಡುವುದಾಗಿದೆ. ನೀರಿನೊಳಗೆ ಬೇಯುತ್ತಿರುವ ಕಪ್ಪೆಗೆ ಹೇಗೆ ಬಿಸಿ ಗೊತ್ತಾಗುವುದಿಲ್ಲವೋ, ಹಾಗೆ ನಮ್ಮ ಜನರ ಸ್ಥಿತಿಯಿದೆ. 11 ವರ್ಷಗಳಲ್ಲಿ ಪ್ರಧಾನ ಮಂತ್ರಿ ಒಂದೂ ಪತ್ರಿಕಾಗೋಷ್ಠಿ ಮಾಡಿಲ್ಲ, ಟ್ರಂಪ್ ಕೂಡಾ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸುತ್ತಾರೆ. ಆದರೆ ಇವರು ಅದನ್ನು ಮಾಡುತ್ತಿಲ್ಲ. ಕೋವಿಡ್ ಬಂತು, ಗಂಗಾನದಿಯಲ್ಲಿ ಹೆಣಗಳು ಬಂದವು, ಏನೇ ಬರಲಿ ಪ್ರಧಾನ ಮಂತ್ರಿ ಮಾಧ್ಯಮಗಳ ಮುಂದೆ ಬರಲಿಲ್ಲ” ಎಂದು ಸೀಮಾ ಅಸಮಧಾನ ವ್ಯಕ್ತಪಡಿಸಿದರು.

“ಹೊರಗೆ ಹೋಗಿ ರೈತರು ಹೋರಾಟದಲ್ಲಿದ್ದಾರೆ ಎಂಬುವುದನ್ನು ದಾಖಲಿಸುವುದು. ಯಾಕೆ ಕಾರ್ಮಿಕರ ಮುಷ್ಕರ ನಡೆಯುತ್ತಿದೆ ಎಂಬುದನ್ನು ವರದಿ ಮಾಡುವುದು ಇಂದು ಮಾಧ್ಯಮಗಳ ಕೆಲಸವಲ್ಲ ಎಂಬಂತಾಗಿದೆ. ಮೊದಲೆಲ್ಲ ದನಿಯೆತ್ತುತ್ತಿದ್ದ ಮಾಧ್ಯಮ ಸಂಸ್ಥೆಗಳು ಈ ಯಾವ ಸಂದರ್ಭಗಳಲ್ಲೂ ಒಂದೂ ಮಾತಾಡುತ್ತಿಲ್ಲ. ಮಾಧ್ಯಮ ಇರುವುದು ಜನರ ಒಳಿತಿಗಾಗಿ ಎಂಬುವುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಬಿಬಿಸಿ ಸರ್ಕಾರದ ಸಂಸ್ಥೆಯಲ್ಲ ಜನರ ಪ್ರತಿನಿಧಿ. ಹಾಗೆಯೇ ಪರ್ಯಾಯ ಮಾದ್ಯಮಗಳು ಕೂಡಾ. ಸರ್ಕಾರದ ದನಿಯಾಗಲು ದೂರದರ್ಶನ ಇದೆ, ಅದು ಮಾಧ್ಯಮಗಳ ಕೆಲಸವಲ್ಲ” ಎಂದು ಅವರು ಹೇಳಿದರು.

“ಮೂಲಭೂತ ಸತ್ಯಗಳನ್ನು ಹೇಳುವವರ ಮೇಲೆ ಸಾಮಾಜಿಕ ಜಾಲತಾಣಗಳಲಲ್ಲಿ ಹಾಗೂ ಹೊರಗೂ ದಾಳಿಗಳಾಗುತ್ತಿವೆ. ತಟಸ್ಥರಾಗಿರುವುದು ಸ್ವತಂತ್ರ ಮಾಧ್ಯಮಗಳ ಕೆಲಸವಲ್ಲ, ನಾವು ಜನರ ಪಕ್ಷಪಾತಿ ಆಗಿರಬೇಕು. ಟಿವಿ ಮಾಧ್ಯಮಗಳು ಒಂದು ಸುಳ್ಳಿನ ಪರದೆಯನ್ನು ಸೃಷ್ಟಿಸುತ್ತವೆ, ಅದರ ವಿರುದ್ಧ ನಾವು ಪ್ರವಾಹದ ವಿರುದ್ಧ ಈಜುತ್ತಿರುವಂತೆ ಈಜುತ್ತಿದ್ದೇವೆ. ಇದರ ಪರಿಣಾಮ ಏನೆ ಆದರೂ ನಾವು ನಮ್ಮ ಕೆಲಸ ಮಾಡಬೇಕು. ಅದು ನಾಳೆಯೇ ಬರದಿರಬಹುದು, ಆದರೂ ಇದು ದೀರ್ಘಕಾಲ ನಡೆಯಬೇಕಾದ ಕೆಲಸ. ಇದು ನಮ್ಮ ಭವಿಷ್ಯ, ವರ್ತಮಾನಕ್ಕೆ ಸಂಬಂಧಿಸಿದ ಹೋರಾಟ ಎಂದು ಅವರು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page