Home ಬ್ರೇಕಿಂಗ್ ಸುದ್ದಿ ಚಿನ್ನದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ – 139 ಮಂದಿಗೆ ವಂಚನೆ

ಚಿನ್ನದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ – 139 ಮಂದಿಗೆ ವಂಚನೆ

ಹಾಸನ : ಚಿನ್ನದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನಾಭರಣ ಪಡೆದು ವಂಚನೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಹಾಸನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲದ ಮಂಜುನಾಥ್ ಬಂಧಿತ ಆರೋಪಿಯಾಗಿದ್ದಾನೆ.

ಈತ ‘ಗಜಲಕ್ಷ್ಮಿ ಗೋಲ್ಡ್ ಫೈನಾನ್ಸ್’ ಹೆಸರಿನಲ್ಲಿ ಸಾರ್ವಜನಿಕರಿಂದ ಚಿನ್ನಾಭರಣ ಸಂಗ್ರಹಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಸಾಲ ಪಡೆದು, ಅದೇ ಹಣವನ್ನು ಶೇ. 5ರ ಬಡ್ಡಿದರದಲ್ಲಿ ಸಾಲವಾಗಿ ನೀಡುವ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ.ಪೊಲೀಸರ ತನಿಖೆ ವೇಳೆ, ಆರೋಪಿ ಸುಮಾರು 2 ಕೆ.ಜಿ. ಚಿನ್ನಾಭರಣವನ್ನು ಹಾಸನ, ಚನ್ನರಾಯಪಟ್ಟಣ ಹಾಗೂ ಗುಂಡ್ಲುಪೇಟೆಯ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವುದು ಬೆಳಕಿಗೆ ಬಂದಿದೆ. ಈತನ ಮೋಸದ ಜಾಲಕ್ಕೆ ಒಟ್ಟು 139 ಮಂದಿ ಸಿಲುಕಿರುವುದು ಪತ್ತೆಯಾಗಿದೆ.

ಇಲ್ಲಿಯವರೆಗೆ 97 ಮಂದಿ ತಮ್ಮ ಚಿನ್ನಾಭರಣವನ್ನು ಮರಳಿ ಪಡೆದಿದ್ದು, ಉಳಿದ 42 ಮಂದಿ ಇನ್ನೂ ಸಂಪರ್ಕಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಚಿನ್ನಾಭರಣ ಅಡವಿಟ್ಟಿರುವ ಉಳಿದ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಹಾಸನ ನಗರ ಠಾಣೆಗೆ ಭೇಟಿ ನೀಡಿ ತಮ್ಮ ಆಭರಣಗಳನ್ನು ವಾಪಸ್‌ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

You cannot copy content of this page

Exit mobile version