ದೆಹಲಿ : ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುವ ಮುನ್ನವೇ ಬಿಜೆಪಿ, ಆಪ್‌ನ ಏಳು ಅಭ್ಯರ್ಥಿಗಳಿಗೆ ತಲಾ 15 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಆಪ್‌ನ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಗುರುವಾರ ಆರೋಪಿಸಿದ್ದಾರೆ. ಬಿಜೆಪಿ, ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಿಜೆಪಿಯ ಆಮಿಷದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ 7 ಮಂದಿ ಶಾಸಕರಿಗೆ ಬಿಜೆಪಿ ಕರೆ ಮಾಡಿದ್ದು, ಬಿಜೆಪಿಗೆ ಸೇರಿದರೆ ತಲಾ 15 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದೆ. ಕೆಲವರಿಗೆ ಮುಖಾಮುಖಿ ಭೇಟಿಯಾಗುವಂತೆ ತಿಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.‘‘ಬಿಜೆಪಿಯ ಇಂತಹ ನಡೆಯಿಂದ ಫಲಿತಾಂಶದ ಮುನ್ನವೇ ತನ್ನ ಸೋಲನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೆ, ಸೋಲುವ ಕಾರಣಕ್ಕಾಗಿಯೇ ಬಿಜೆಪಿ ಈ ರೀತಿ ಅಡ್ಡ ದಾರಿ ಹಿಡಿಯಲು ಪ್ರಯತ್ನಿಸುತ್ತಿದೆ” ಎಂದರು.
“ಬಿಜೆಪಿಯ ಇಂತಹ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವಂತೆ ಹಾಗೂ ಅವರು ಯಾವುದೇ ಮುಖಾಮುಖಿ ಭೇಟಿಗೆ ಆಹ್ವಾನ ನೀಡಿದರೆ, ಅದನ್ನು ದಾಖಲಿಸಿಕೊಳ್ಳಲು ಸ್ಪೈ ಕ್ಯಾಮೆರಾ ಬಳಸುವಂತೆ ಪಕ್ಷ ಅವರಿಗೆ ಸಲಹೆ ನೀಡಿದೆ” ಎಂದು ತಿಳಿಸಿದ್ದಾರೆ.ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಚುನಾವಣೆ ನಡೆದಿದ್ದು, ಫೆ. 8ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.