ಮಂಬೈ: ದಕ್ಷಿಣ ಮುಂಬೈನ ಗಾಮ್ ದೇವಿ ಪ್ರದೇಶದ ಶಾಲಾ ಆವರಣದಲ್ಲಿ 15 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದ್ದು, 28 ವರ್ಷದ ಶಾಲೆಯ ಜವಾನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೆಯಿಂದ ಮರಳಿ ಮನೆಗೆ ಬಂದಾಗ ಬಾಲಕಿಯಲ್ಲಾಗುತ್ತಿದ್ದ ಬದಲಾವಣೆಯನ್ನು ಗುರುತಿಸಿದ ಪೋಷಕರು ಶಾಲೆಗೆ ಭೇಟಿನೀಡಿದ್ದು, ಆಕೆಯ ಬದಲಾವಣೆಗಳನ್ನು ಕುರಿತು ಬಾಲಕಿಯನ್ನು ಮುಂದಿಟ್ಟುಕೊಂಡು ಶಿಕ್ಷಕರೊಂದಿಗೆ ಚರ್ಚಿಸಿದಾಗ ಬಾಲಕಿಯು ತನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದಾಗಿ ಹೇಳಿದ್ದಾಳೆ. ನಂತರ ಶಾಲೆಯವರು ಗಾಮ್‌ದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಳಿಸಿದ್ದಾರೆ.
ದೂರಿನ ಹಿನ್ನಲೆ ಪೊಲೀಸರು ತನಿಖೆ ನಡೆಸಿದಾಗ ಸೆಪ್ಟಂಬರ್ 5 ರಂದು ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದು ಅನುಚಿತ ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ, ನಂತರ ಆರೋಪಿ ಜವಾನನ ಬಗ್ಗೆ ವಿಚಾರಿಸಿದಾಗ ಕೆಲವು ದಿನಗಳಿಂದ ಶಾಲೆಗೆ ಗೈರು ನೀಡಿರುವುದು ತಿಳಿದುಬಂದಿದೆ.
ಇದಲ್ಲದೆ, ಜವಾನನು ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಹಲವು ಬಾರಿ ಕಿರುಕುಳ ನೀಡಿದ್ದಾನೆ ಮತ್ತು ಬಾಲಕಿಯ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕಾರಣ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 354-ಡಿ (ಹಿಂಬಾಲಿಸುವಿಕೆ) ಮತ್ತು ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.