Sunday, November 24, 2024

ಸತ್ಯ | ನ್ಯಾಯ |ಧರ್ಮ

ಚಾತುವರ್ಣ ಪದ್ದತಿ ಬಗ್ಗೆ ಮೊದಲು ಪ್ರಶ್ನಿಸಿದ ಪುಲೆ ಅವರ ʼಗುಲಾಮಗಿರಿʼ ಕೃತಿಗೆ 150 ವರ್ಷ

  • ಎಂ ನಾಗರಾಜ ಶೆಟ್ಟಿ

1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು.

ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ ʼ ಹಮ್ಮಿಕೊಂಡು ಈ ಪುಸ್ತಕವನ್ನು ನೆನಪಿಸುವ ಮತ್ತು ಫುಲೆಯವರ ಸಾಧನೆಗಳ ಬಗ್ಗೆ ಮನನ ಮಾಡುವ ಅವಕಾಶವನ್ನು ಒದಗಿಸಿತು. ಬೆಂಗಳೂರಲ್ಲಿ ಅರಂಭಗೊಂಡ ʼ ನವಯಾನ ಟ್ರಸ್ಟ್‌ ʼ ತನ್ನ ಮೊದಲ ಕಾರ್ಯಕ್ರಮವಾಗಿ ಇಂತಹ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ಲಾಘನೀಯ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೃತಿಯ ವಿವರಗಳನ್ನು ಪ್ರಸ್ತಾಪಿಸಿ, ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಹಲವು ಪ್ರಶ್ನೆಗಳನ್ನು ಎತ್ತಿದರು. ʼ ಗುಲಾಮಗಿರಿ ʼ ಪ್ರಕಟವಾದ ಸಂದರ್ಭ, ಅದರಲ್ಲಿ ಬಳಕೆಯಾಗಿರುವ ಕಟು ಮಾತುಗಳು, ಪುರಾಣಗಳ ಅರ್ಥೈಸುವಿಕೆ, ಮಿತ್‌ ಗಳ ಅಗತ್ಯ ಇವುಗಳ ಬಗ್ಗೆ ಮಾತು ಬಂತು. ʼ ಗುಲಾಮಗಿರಿ ʼ ಯ ಓದು ಮತ್ತು ಅದನ್ನು ವರ್ತಮಾನಕ್ಕೆ ಹೊಂದಿಸಿಕೊಳ್ಳುವುದರ ಬಗೆಗೆ ಚಿಂತನೆ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದವು. ಈ ಕುರಿತು ನಿರ್ದುಷ್ಟವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯ ಇಲ್ಲದಿದ್ದರೂ ಜಾತಿ ಪದ್ಧತಿ ತನ್ನೆಲ್ಲ ಕೆಡುಕುಗಳೊಂದಿಗೆ, ಕಂಡರೂ ಕಾಣದಂತೆ ಸವಾರಿ ಮಾಡುತ್ತಿರುವ ಹೊತ್ತಿನಲ್ಲಿ ʼ ಗುಲಾಮ ಗಿರಿʼ ಕೃತಿಯನ್ನು ಅವಲೋಕಿಸುವ ಮತ್ತು ಅದನ್ನು ಸದ್ಯಕ್ಕೆ ಹೊಂದಿಸಿಕೊಳ್ಳುವ ಅಗತ್ಯವಂತೂ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಶೂದ್ರ, ಅತಿ ಶೂದ್ರರ ಗುಲಾಮಗಿರಿ

ಜ್ಯೋತಿಬಾ ಫುಲೆಯವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಮೂರನೆಯ ಗುರುವೆಂದು ತಿಳಿದುಕೊಂಡಿದ್ದರು. ಭಗವಾನ್ ಬುದ್ಧ, ಸಂತ ಕಬೀರ ಮತ್ತು ಫುಲೆಯವರನ್ನು ತನ್ನ ಗುರುಗಳೆಂದು ತಿಳಿದಿದ್ದ ಬಾಬಾ ಸಾಹೇಬರಿಗೆ ʼ ಬುದ್ಧ ಮತ್ತು ಧಮ್ಮʼ ಕೃತಿಯ ನಂತರ ಫುಲೆಯವರ ಜೀವನ ಚರಿತ್ರೆ ಬರೆಯುವ ಉದ್ದೇಶವಿತ್ತಂತೆ. ಅವರ ಅನಾರೋಗ್ಯದ ಕಾರಣ ಅದು ಕೈಗೂಡಲಿಲ್ಲ. ಬಾಬಾಸಾಹೇಬರ ತಂದೆ ರಾಮ್ ಜಿ ಸತ್ಪಾಲ್ ರವರಿಗೆ ಫುಲೆ ಮತ್ತು ಅವರ ʼ ಸತ್ಯ ಶೋಧಕ ಸಮಾಜʼ ಗೋವಿಂದ ರಾನಡೆಯವರ ಮೂಲಕ ತಿಳಿದಿತ್ತು. ಇದರಿಂದ ಬಾಲ್ಯದಲ್ಲೇ ಬಾಬಾ ಸಾಹೇಬರು ಫುಲೆಯವರ ವಿಚಾರ ಮತ್ತು ವಿಧಾಯಕ ಕೆಲಸಗಳ ಅರಿವು ಪಡೆದಿದ್ದರು. ಬಾಬಾ ಸಾಹೇಬರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜ್ಯೋತಿ ಬಾ ಫುಲೆಯವರ ಪ್ರಭಾವ ಇದ್ದೇ ಇತ್ತು.

ಹಾಗಿದ್ದರೂ ಬಾಬಾ ಸಾಹೇಬರು ಹಲವು ವಿಷಯಗಳಲ್ಲಿ ಫುಲೆಯವರಿಗಿಂತ ಭಿನ್ನವಾದ ನಿಲುವನ್ನು ತಳೆಯುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪದ ಸಂದರ್ಭಗಳಲ್ಲಿ ಖಂಡಿಸುವುದಿಲ್ಲ. ಆದರೆ ತಮ್ಮ ವ್ಯಾಖ್ಯಾನವನ್ನು ಮಂಡಿಸಲು ಹಿಂಜರಿಯುವುದಿಲ್ಲ. ಇದು ಗುರುವನ್ನು ಗೌರವಿಸುವ ಕ್ರಮ; ಸತ್ಯವೆಂದು ತೋಚಿದ್ದನ್ನು ಹೇಳುವ ಮತ್ತು ಸರಿಯಾದುದನ್ನು ಕಂಡುಕೊಳ್ಳುವ ಸಮರ್ಪಕವಾದ ದಾರಿ. ಬಾಬಾ ಸಾಹೇಬರು ಫುಲೆಯವರ ಸಾಮಾಜಿಕ ಸುಧಾರಣಾ ಕಾರ್ಯಗಳು, ಜಾತಿ ನಿರ್ಮೂಲನ ಆಂದೋಲನವನ್ನು ಮುನ್ನಡೆಸಿದರು. ಅವರ ʼ ಜಾತಿ ವಿನಾಶʼ ( Annihilation of caste ) ಫುಲೆಯವರ ʼ ಗುಲಾಮಗಿರಿʼಯ ಮುಂದುವರಿದ ಮತ್ತು ಖಚಿತ ವೈಚಾರಿಕ ನೆಲೆಯ ಕೃತಿಯೇ ಆಗಿದೆ. ಅಂಬೇಡ್ಕರ್ ರವರ ʼ ಜಾತಿ ವಿನಾಶʼದ ಮೊದಲು ʼ ಗುಲಾಮಗಿರಿʼ ಯನ್ನು ಓದುವುದು ಓದುವಿಕೆಯ ಸರಿಯಾದ ರೀತಿಯೇ ಆಗಿದೆ.

ಸಮಾಜದಲ್ಲಿ ಯಾರೂ ಕನಿಷ್ಠರಲ್ಲ, ಶ್ರೇಷ್ಠರೂ ಅಲ್ಲ; ಪ್ರತಿಯೊಬ್ಬನೂ ಸಮಾನ. ಒಬ್ಬನ ಹಿತ ಮತ್ತೊಬ್ಬನಿಗೆ ಮಾರಕವಾಗಬಾರದು ಎನ್ನುವ ಖಚಿತ ಅಭಿಪ್ರಾಯವನ್ನು ಹೊಂದಿದ್ದ ಜ್ಯೋತಿಬಾರವರು ಕೆಳಜಾತಿಯವರನ್ನು ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳಿಂದ ಪಾರು ಮಾಡಲು ಕಂಕಣಬದ್ಧರಾಗಿದ್ದರು. ಅವರಿಗೆ ಬ್ರಾಹ್ಮಣರ ಮಾನಸಿಕ ದಾಸ್ಯದಿಂದ ಶೋಷಿತ ಜಾತಿಗಳನ್ನು ಬಿಡುಗಡೆ ಮಾಡುವುದು ಅತಿ ಮುಖ್ಯವೆಂದು ತೋಚಿತ್ತು. ಅವರು ಜನರನ್ನು ಸುಲಭವಾಗಿ ತಲುಪುವ ಮಾರ್ಗಗಳನ್ನು ಅನ್ವೇಷಿಸಿದರು. ಮರಾಠಿಯಲ್ಲಿ ಜನಪ್ರಿಯವಾದ ಲಾವಣಿ, ಅಭಂಗ, ಕಾವ್ಯಗಳ ಮುಖಾಂತರ ಜನರಲ್ಲಿ ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದರು.

1955 ರಲ್ಲಿ ʼ ತೃತೀಯ ರತ್ನʼ ಎನ್ನುವ ನಾಟಕವನ್ನು ಬರೆದು ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ನೇರವಾಗಿ ವಿರೋಧಿಸಿದ್ದರು. ಅವರು ಶಿವಾಜಿ ಮಹಾರಾಜರ ಸಮಾಧಿಗೆ ಒದಗಿದ ದುರ್ಗತಿಗೆ ಮರುಗಿ ಬರೆದ ಲಾವಣಿ ಮತ್ತು ಪರಶುರಾಮನನ್ನು ಕುರಿತ ಸುಳ್ಳುಗಳನ್ನು ಬಯಲು ಮಾಡುವ ಲಾವಣಿಗಳು ಜನಪ್ರಿಯವಾಗಿದ್ದವು. ಧಾರ್ಮಿಕ ಮತ್ತು ಅಂಧಶೃದ್ಧೆಯ ಜನರನ್ನು ಪೀಡಿಸುವ ಕುಯುಕ್ತಿಯನ್ನು ಖಂಡಿಸುವ ಕಾವ್ಯ ಸಂಗ್ರಹ ʼ ಬ್ರಾಹ್ಮಣರ ಕುಯುಕ್ತಿʼ 1869 ರಲ್ಲಿ ಪ್ರಕಟವಾದಾಗ ಫುಲೆಯವರು ಹಲವರ ದುರಾಗ್ರಹಕ್ಕೆ ಪಾತ್ರರಾಗಬೇಕಾಯಿತು.

ಆ ಬಳಿಕ ಫುಲೆಯವರು ಮಹತ್ವದ, ಕ್ರಾಂತಿಕಾರಕ ಗ್ರಂಥವೊಂದನ್ನು ಬರೆಯಲು ತೀರ್ಮಾನಿಸಿದರು. 1872 ರ ಡಿಸೆಂಬರ್ ತಿಂಗಳಲ್ಲಿ ಕೆಲವು ಅಧ್ಯಾಯಗಳನ್ನು ಬರೆದ ಆ ಗ್ರಂಥ ಜೂನ್ 1873 ರಲ್ಲಿ ಪೂರ್ಣಗೊಂಡಿತು. ವೈದಿಕರ ಗ್ರಂಥ, ಶಾಸ್ತ್ರಗಳನ್ನು ನಿರಾಕರಿಸಿದ, ಅವತಾರಗಳನ್ನು ಪ್ರಶ್ನಿಸಿದ, ಜಾತಿಪದ್ಧತಿಯನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ, ʼ ಗುಲಾಮಗಿರಿʼ ಗ್ರಂಥ ಜಾತಿ ನಿರ್ಮೂಲನೆಯ ಆಂದೋಲನಕ್ಕೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತು.

ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ʼಗುಲಾಮಗಿರಿ ʼ ಗೆ ಪ್ರಾರಂಭಿಕ ಮಾತುಗಳನ್ನು ಬರೆದ ಫುಲೆಯವರು ಮರಾಠಿಯ ಮುನ್ನುಡಿಯಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ʼ ಈ ಪುಸ್ತಕದ ಮೂಲ ಉದ್ದೇಶ ಶೂದ್ರರಿಗೆ ಮತ್ತು ಅತಿ ಶೂದ್ರರಿಗೆ, ಬ್ರಾಹ್ಮಣರ ಸ್ವಾಧೀನದಲ್ಲಿ ಶತ ಶತಮಾನಗಳ ಕಾಲ ಅವರು ಅನುಭವಿಸಿದ ದೀನಾವಸ್ಥೆಯ, ಕಷ್ಟ ಪರಂಪರೆಯ ಅರಿವು ಮೂಡಿಸುವುದಾಗಿದೆ. ಆ ಮೂಲಕ ಅವರು ಇನ್ನು ಮುಂದೆ ಬ್ರಾಹ್ಮಣರ, ಭಟ್ಟರ ದೌರ್ಜನ್ಯದಿಂದ ಬಿಡುಗಡೆ ಪಡೆಯುವ ಮಾರ್ಗವನ್ನು ಆಳವಾಗಿ ಚಿಂತಿಸಿ ಕಂಡುಕೊಳ್ಳಬೇಕುʼ.

ʼ ಗುಲಾಮಗಿರಿʼ ಪುಸ್ತಕದಲ್ಲಿ ಫುಲೆಯವರು ಬ್ರಾಹ್ಮಣ್ಯ ಎನ್ನುವ ಶಬ್ದದ ಬದಲು ಬ್ರಾಹ್ಮಣರು ( Brahmins) ಮತ್ತು ಪುರೋಹಿತದ ಬದಲಾಗಿ ಭಟ್ಟ (Bhats) ಎನ್ನುವ ಪದವನ್ನು ಉಪಯೋಗಿಸುತ್ತಾರೆ. ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಅವರಿಗೆ ಹಿಡಿತ ಇದ್ದರೂ ʼ ಗುಲಾಮಗಿರಿ ʼ ಯಲ್ಲಿ ಉಪಯೋಗಿಸಿದ ಮರಾಠಿ ಜನರ ಆಡು ಭಾಷೆಯಾಗಿದ್ದು, ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅದರಲ್ಲಿ ಗ್ರಾಮ್ಯವನ್ನೂ ಹೇರಳವಾಗಿ ಬಳಸಿದ್ದಾರೆ.

ʼ ಗುಲಾಮಗಿರಿʼ ಪುಸ್ತಕದಲ್ಲಿ ಜ್ಯೋತಿಬಾ ಮತ್ತು ದೋಂಡಿಬಾ ಎನ್ನುವ ಇಬ್ಬರು ವ್ಯಕ್ತಿಗಳ ನಡುವೆ ಸಂಭಾಷಣೆ ನಡೆಯುತ್ತದೆ. ಫುಲೆಯವರು ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸಿದವರಾಗಿದ್ದರಿಂದ ಸಂಭಾಷಣೆ ಕಲೆ ಅವರಿಗೆ ಒದಗಿ ಬಂದಿದೆ. ದೋಂಡಿಬಾ ವ್ಯಕ್ತ ಪಡಿಸುವ ಅನುಮಾನಗಳಿಗೆ ನೇರವಾಗಿ, ತಮಾಷೆಯಾಗಿ, ಕಟುವಾಗಿ ಉತ್ತರಿಸುವ ಜ್ಯೋತಿಬಾ ನಿರ್ದಾಕ್ಷಿಣ್ಯವಾಗಿ ಪುರಾಣ, ಶಾಸ್ತ್ರ ಗ್ರಂಥಗಳನ್ನು ಜಾಲಾಡುತ್ತಾರೆ. ದಶಾವತಾರದ ಕಲ್ಪನೆಗಳನ್ನು ಒಂದೊಂದಾಗಿ ವಿಘಟಿಸುವ ಫುಲೆಯವರು ಪರಶುರಾಮನ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ. ಇಪ್ಪತ್ತೊಂದು ಸಲ ಭೂ ಪ್ರದಕ್ಷಿಣೆ ಮಾಡಿ ಹುಡುಕಿ, ಹುಡುಕಿ ಕ್ಷತ್ರಿಯರನ್ನು ನಿರ್ನಾಮ ಮಾಡಿದ್ದಲ್ಲದೆ, ನವ ಜಾತ ಶಿಶುಗಳನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದನ್ನು, ಗರ್ಭಿಣಿಯರನ್ನು ಅಂಡಲೆಸಿ ಶಿಶು ಹತ್ಯೆ ಮಾಡಿದ್ದನ್ನು ಅತಿ ಕ್ರೂರವಾದ ಕೊಲೆಗಡುಕತನ ಎಂದು ಹೇಳುತ್ತಾರೆ. ಬಾಬಾ ಸಾಹೇಬರು ಮೂಲತಃ ಶೂದ್ರರು ಕ್ಷತ್ರಿಯರಾಗಿದ್ದರು ಎನ್ನುವ ಫುಲೆಯವರ ಸಿದ್ಧಾಂತವನ್ನು ಒಪ್ಪಿರುವುದಲ್ಲದೆ ಈ ಕುರಿತು ವಿವರವಾಗಿ ಬರೆದಿದ್ದಾರೆ.

ಅಂತೆಯೇ ಫುಲೆಯವರು ನ್ಯಾಯವಂತಿಕೆಯಿಂದ ರಾಜ್ಯವಾಳುತ್ತಿದ್ದ ಬಲಿಯನ್ನು ಅನ್ಯಾಯವಾಗಿ ರಾಜ್ಯಭ್ರಷ್ಟನಾಗಿ ಮಾಡಿದ್ದನ್ನು ಖಂಡಿಸುತ್ತಾರೆ. ಅವರ ಪ್ರಕಾರ ಬಲಿ ರಾಜ್ಯ ಸ್ವಾತಂತ್ರ್ಯ, ಸಮಾನತೆಗಳ ರಾಜ್ಯ. ಅವತಾರ ಕಲ್ಪನೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ಫುಲೆಯವರ ಉದ್ದೇಶವಾಗಿತ್ತು. ಮಹಾಭಾರತ ರಚನೆಯಾಗುವುದಕ್ಕಿಂತ ಮೊದಲು ಅವತಾರಗಳ ಪ್ರಸ್ತಾಪ ಇರಲಿಲ್ಲ; ಧಾರ್ಮಿಕ ಹತೋಟಿಯನ್ನು ಉದ್ದೇಶದಿಂದ ಪುರಾಣಗಳಲ್ಲಿ ಅವುಗಳನ್ನು ಸೇರ್ಪಡೆಗೊಳಿಸಿರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ.

ʼ ಗುಲಾಮಗಿರಿʼ ಪುಸ್ತಕದ ಕಠೋರತೆಗೆ ಪೇಶ್ವೆಯವರ ಕಾಲದ ದುಷ್ಟ ಆಡಳಿತ ಪದ್ಧತಿಯೇ ಕಾರಣ ಎನ್ನಬಹುದು. ಫುಲೆಯವರು ನೇರವಾಗಿ ಬ್ರಾಹ್ಮಣರ ಟೀಕೆ ಮಾಡಿದ್ದರೂ ಅವರ ಗುರಿ ಚಿತ್ಪಾವನ ಬ್ರಾಹ್ಮಣರು ಎನ್ನಲಾಗುತ್ತದೆ. ಬಾಳಾಜಿ ವಿಶ್ವನಾಥ ಪೇಶ್ವೆಯ ಕಾಲದಲ್ಲಿ ಚಿತ್ಪಾವನ‌ ಬ್ರಾಹ್ಮಣರು ಇನ್ನಿತರ ಬ್ರಾಹ್ಮಣ ಪಂಥಗಳನ್ನು ಬದಿಗೊತ್ತಿ ಶೂದ್ರರನ್ನು, ಅತಿ ಶೂದ್ರರನ್ನು ಅತಿ ಕ್ರೂರವಾಗಿ ನಡೆಸಿಕೊಂಡಿದ್ದಲ್ಲದೆ ಎಲ್ಲಾ ರೀತಿಯ ವೈಭೋಗಗಳನ್ನೂ ಪಡೆದುಕೊಂಡಿದ್ದರು.

ಶೂದ್ರರ, ಅತಿ ಶೂದ್ರರ ದೀನಾವಸ್ಥೆಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ ಫುಲೆಯವರಿಗೆ ಬರವಣಿಗೆ ಅವರನ್ನು ವಿಮೋಚನೆಯ ದಾರಿಯಲ್ಲಿ ಕೊಂಡೊಯ್ಯವ ಮಾರ್ಗಗಳಲ್ಲಿ ಒಂದಾಗಿ ಕಂಡಿತ್ತು. ಸಮಾನತೆಯನ್ನು, ಸ್ವಾತಂತ್ರ್ಯವನ್ನು ನೀಡುವ ಯಾವುದೇ ಗ್ರಂಥವಾದರೂ ತಾನದನ್ನು ಗೌರವಿಸುತ್ತೇನೆ ಎಂದು ಹೇಳಿದ ಫುಲೆಯವರು ನಾನಾ ರೀತಿಯ ಮೂಢನಂಬಿಕೆ, ಅಜ್ಞಾನದಲ್ಲಿ ತೊಳಲಾಡುತ್ತಿರುವ ಶೂದ್ರ, ಅತಿ ಶೂದ್ರ ಬಂಧುಗಳಲ್ಲಿ ಒಬ್ಬನಾದರೂ ವೈದಿಕರ ದಾಸ್ಯದಿಂದ ಮುಕ್ತನಾಗಲು ಬಯಸಿ ತನ್ನ ಹೆಸರು ತಿಳಿಸಿ ಪತ್ರ ಬರೆದರೆ ನಾನು ಹೆಮ್ಮೆ ಪಡುತ್ತೇನೆ, ಆತನಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.

ಸಮಾಜ ಸುಧಾರಣೆಗಳು

ಫುಲೆಯವರು ಶಾಲೆಯಲ್ಲಿ ಓದಿದ್ದು ಕಡಿಮೆಯೆಂದೇ ಹೇಳಬಹುದು.ಅವರ ಪ್ರಾಥಮಿಕ ಶಿಕ್ಷಣ, ತಂದೆ ಗೋವಿಂದ ರಾಯರಿಗೆ ಕೆಲವರು ದುರ್ಬೋಧೆ ಮಾಡಿದ್ದರಿಂದ ಅರ್ಧದಲ್ಲೇ ನಿಂತಿತ್ತು. ಮತ್ತೆ ಮೂರು ವರ್ಷಗಳ ನಂತರ ತಂದೆ ಮನಸ್ಸು ಬದಲಾಯಿಸಿ ಫುಲೆಯವರನ್ನು ಶಾಲೆಗೆ ಸೇರಿಸಿದರು. ಅವರು ಪಡೆದ ಶಿಕ್ಷಣ, ಇಂಗ್ಲಿಷ್ ಜ್ಞಾನ ಅವರಿಗೆ ಒಳ್ಳೆಯ ನೌಕರಿಯನ್ನು ಖಂಡಿತ ಒದಗಿಸುತ್ತಿತ್ತು. ಆದರೆ ಫುಲೆಯವರು ನೌಕರಿ ಮಾಡದೆ ಬದುಕನ್ನು ಸಾಮಾಜಿಕ ಸೇವೆಗೇ ಮುಡುಪಾಗಿಟ್ಟರು.

ಶೂದ್ರರ ಮತ್ತು ಅತಿ ಶೂದ್ರರ ಸುಧಾರಣೆಗೆ ಶಿಕ್ಷಣದ ಅಗತ್ಯವನ್ನು ಮನಗಂಡ ಫುಲೆಯವರು ಶಾಲೆಗಳನ್ನು ತೆರೆದು ತಾವೇ ಶಿಕ್ಷಕರಾಗಿ ದುಡಿದರು. ಹದಿಮೂರನೇ ವಯಸ್ಸಿಗೆ ಮದುವೆಯಾದ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹೆಂಡತಿ ಸಾವಿತ್ರಿ ಬಾಯಿಯವರಿಗೆ ತಾವೇ ಓದು ಬರಹ ಕಲಿಸಿದರು. 1948ರಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆ ಪುಣೆಯಲ್ಲಿ ಆರಂಭವಾಯಿತು. ಹಲವು ಅಡ್ಡಿ ಆತಂಕಗಳ ನಡುವೆಯೂ ಫುಲೆ ದಂಪತಿ ಶಾಲೆಗಳನ್ನು ನಡೆಸಿದ್ದಲ್ಲದೆ ಅವರಿಬ್ಬರೂ ಇದಕ್ಕಾಗಿ ಯಾವ ಸವಲತ್ತನ್ನೂ ಪಡೆಯಲಿಲ್ಲ.

ಫುಲೆಯವರು ಸಮಾಜ ಸುಧಾರಕರಾಗಿದ್ದಂತೆ, ವಿಚಾರವಾದಿ, ಬರಹಗಾರ, ಪತ್ರಕರ್ತ ಮತ್ತು ಆಡಳಿತಕಾರನೂ ಆಗಿದ್ದರು. ಶೋಷಿತ ಜಾತಿಗಳ ಸುಧಾರಣೆಗಾಗಿ ಅವರು ಸ್ಥಾಪಿಸಿದ ʼ ಸತ್ಯ ಶೋಧಕ ಸಮಾಜ ʼ ದಲ್ಲಿ ಬ್ರಾಹ್ಮಣರನ್ನೊಳಗೊಂಡು ಎಲ್ಲಾ ಜಾತಿ,ಧರ್ಮದ ಜನರೂ ಇದ್ದರು. ಅಸ್ಪರ್ಶ್ಯತೆಯ ವಿರುದ್ಧ ಸಮರವನ್ನೇ ಸಾರಿದ ಫುಲೆಯವರು ʼ ಅಸ್ಪರ್ಶ್ಯರ ಕೈಫಿಯತ್ತು ʼ ಎನ್ನುವ ಪುಸ್ತಕ ಪ್ರಕಟಿಸಿದ್ದಲ್ಲದೆ, ಅವರ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಯುವಕರ ತಂಡವೊಂದನ್ನು ಸಿದ್ಧಪಡಿಸಿದರು. ಅವರಿಗೆ ನಿರಂತರ ಮಾರ್ಗದರ್ಶನ ನೀಡಿ ಬರೆಯಲು, ಭಾಷಣ ಮಾಡಲು ತರಬೇತಿ ಕೊಟ್ಟು ಸುಧಾರಣಾ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದರು.

ಬ್ರಾಹ್ಮಣ ವಿಧವೆಯ ವಿಮೋಚನೆಗಾಗಿ ಅವರು ಸ್ಥಾಪಿಸಿದ ʼ ಬಾಲಹತ್ಯಾ ಪ್ರತಿಬಂಧಕ ಗೃಹ ʼ ದೇಶದಲ್ಲಿಯೇ ಮೊತ್ತ ಮೊದಲ ಸಂಸ್ಥೆಯಾಗಿತ್ತು. ಈ ಸಂಸ್ಥೆಯಿಂದಾಗಿ ವಿಧವೆಯರು ಅಪಕೀರ್ತಿಗೆ ಒಳಗಾಗುವುದು, ಭ್ರೂಣ ಹತ್ಯೆ, ಶಿಶು ಹತ್ಯೆಗಳಾಗುವುದು ತಪ್ಪಿತು. ಬ್ರಾಹ್ಮಣರಲ್ಲದೆ ಇತರ ಜಾತಿಗಳಲ್ಲೂ ವಿಧವೆಯರ ಮರು ವಿವಾಹವನ್ನು ಪ್ರೋತ್ಸಾಹಿಸಿದರು. ತಾವೇ ನೇತೃತ್ವ ವಹಿಸಿ ಕಡಿಮೆ ಖರ್ಚಿನಲ್ಲಿ ಅಂತರ್ ಜಾತೀಯ ವಿವಾಹಗಳು ನಡೆಯುವಂತೆಯೂ ನೋಡಿಕೊಂಡರು.

ಪೇಶ್ವೆಯರ ಆಡಳಿತಕ್ಕೊಳಪಟ್ಟಿದ್ದ, ಚಿತ್ಪಾವನ ಬ್ರಾಹ್ಮಣರು ಶೂದ್ರ, ಅತಿ ಶೂದ್ರರನ್ನು ನಿಕೃಷ್ಟವಾಗಿ ನೋಡಿಕೊಳ್ಳುತ್ತಿದ್ದ ಪ್ರದೇಶದಲ್ಲಿ ಫುಲೆಯವರು ಏಕಾಂಗಿಯಾಗಿ ಮಾಡಿದ ಸಾಮಾಜಿಕ ಕಾರ್ಯಗಳು ಬೆರಗು ಹುಟ್ಟಿಸುತ್ತವೆ. ಅವರು ಹುಟ್ಟು ಹಾಕಿದ- ಮಹಾರಾಷ್ಟ್ರದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾದ ʼ ಸತ್ಯಶೋಧಕ ಸಮಾಜ ʼ ಕ್ರಮೇಣ ನಿಸ್ತೇಜಗೊಂಡಿತು. ಆದರೆ ಶೂದ್ರ, ಅತಿ ಶೂದ್ರರಲ್ಲಿ ಅವರು ಮೂಡಿಸಿದ ಎಚ್ಚರ ಮುಂದಿನ ತಲೆಮಾರುಗಳಿಗೆ ಹರಿದು ಬಂತು. ಫುಲೆಯವರನ್ನು ತಮ್ಮ ಗುರುಗಳೆಂದು ಕರೆದುಕೊಂಡ ಬಾಬಾ ಸಾಹೇಬ ಅಂಬೇಡ್ಕರ್ ರವರು ಫುಲೆಯವರ ಸಿದ್ಧಾಂತಗಳನ್ನು ಪರಿಷ್ಕರಿಸಿದರು; ವಿಸ್ತರಿಸಿದರು.

ಜಾಗೃತಿಯ ಅಗತ್ಯ

ಫುಲೆಯವರ ʼ ಗುಲಾಮಗಿರಿʼ ಪುಸ್ತಕ ಮತ್ತು ಅವರ ವಿಚಾರಗಳಿಗೆ ಮರು ಹುಟ್ಟು ಕೊಟ್ಟವರು ಕಾನ್ಶಿರಾಮ್. ಅವರ ʼ ʼಬಹುಜನ ಸಮಾಜ ಪಕ್ಷʼದ ಪೋಸ್ಟರ್ ಗಳಲ್ಲಿ ಸಮಾಜ ಸುಧಾರಕರ ಚಿತ್ರಗಳು ತಪ್ಪದೇ ಅಚ್ಚಾಗುತ್ತಿದ್ದವು. ಜ್ಯೋತಿಬಾ ಫುಲೆ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್ ಇವರನ್ನು ʼ ಬಹುಜನ ಸಮಾಜ ಪಕ್ಷʼ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿತು. ವಿಸ್ಮೃತಿಗೆ ಸಂದಿದ್ದ ಫುಲೆಯವರನ್ನು, ಮಹಾರಾಷ್ಟ್ರಕ್ಕೆ ಮತ್ತು ಅಕಡೆಮಿಕ್ ಓದಿಗೆ ಸೀಮಿತರಾಗಿದ್ದ ಅಂಬೇಡ್ಕರ್ ರವರನ್ನು, ಕೇರಳ ಮತ್ತು ಕನ್ನಡ ಜಿಲ್ಲೆಗಳಿಗೆ ಬೆಳಕು ತೋರಿದ ನಾರಾಯಣ ಗುರುಗಳನ್ನು, ದ್ರಾವಿಡ ನಾಡಿಂದೀಚೆ ಹೆಸರು ಗಳಿಸದ ಪೆರಿಯಾರ್ ರವರನ್ನು ದೇಶದಾದ್ಯಂತ ಪರಿಚಯಿಸಿದವರು ಕಾನ್ಶಿರಾಮ್. ಅಂಬೇಡ್ಕರ್ ರವರು ಮುಂದುವರಿಸಿದ ಸುಧಾರಣೆಗಳನ್ನು ಕಾನ್ಶಿರಾಮ್ ಕೈಗೆತ್ತಿಕೊಂಡರು.

ಕಾನ್ಶಿರಾಮ್ ಕಾಲವಾದ ಬಳಿಕ ಹಲವು ಬದಲಾವಣೆಗಳು ಸಂಭವಿಸಿವೆ. ಜಾತಿಪದ್ಧತಿ ಅಳಿಯುವ ಬದಲು ಪ್ರಬಲರ ಅಸ್ತ್ರವಾಗಿ ಶೂದ್ರರ, ತಳಜಾತಿಗಳ,ದಲಿತರ ದಮನಕ್ಕೆ ಬಳಕೆಯಾಗುತ್ತಿದೆ. ಹಿಂದೂ ಎನ್ನುವ ಶಬ್ದ ಪ್ರಯೋಗವನ್ನು ಮಾಡದೆ, ಜಾತಿವಿನಾಶವನ್ನು, ಸಮಾನತೆಯ ಬದುಕನ್ನು ಹಾರೈಸಿದ ಫುಲೆಯವರ ಸಿದ್ಧಾಂತಗಳು ಹಿಂದುತ್ವದ ಅಡಿಯಲ್ಲಿ ನಲುಗುತ್ತಿವೆ. ಫುಲೆಯವರು ಸರಿಯಾಗಿಯೇ ಗುರುತಿಸಿದಂತೆ ಸವರ್ಣೀಯರು ಜಾತಿಗಳಲ್ಲಿ ವಿಭಜನೆ ಮಾಡಿ ತಮ್ಮ ಅನುಕೂಲಕ್ಕೋಸ್ಕರ ಅವರನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಶೋಷಿತರು ಶೋಷಕರ ಗುಲಾಮರಾಗಿ ಮುಂದುವರಿಯುತ್ತಿರುವುದು ನಿಚ್ಚಳವಾಗಿ ಕಂಡು ಬರುತ್ತಿದೆ.

ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಅಗತ್ಯವನ್ನು ಮತ್ತೆ ಮೂಡಿಸುವುದು ಅವಶ್ಯವಾಗಿದೆ. ದುರ್ದೈವವೆಂದರೆ ʼ ಗುಲಾಮಗಿರಿʼ ಕೃತಿಗೆ 150 ವರ್ಷಗಳಾಗಿದ್ದನ್ನು ನೆನಪಿಸಿಕೊಳ್ಳುವ ಎಚ್ಚರವೂ ಕಾಣೆಯಾಗಿರುವುದು. ಇಂತಹ ಸಂದರ್ಭದಲ್ಲಿʼ ನವಯಾನ ಟ್ರಸ್ಟ್ ʼ ಕಾರ್ಯಕ್ರಮವನ್ನು ಏರ್ಪಡಿಸಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಇಂತಹ ಕೆಲಸ ಎಲ್ಲಾ ಕಡೆಗಳಲ್ಲೂ ಆಗಬೇಕಿತ್ತು. ಅಂಬೇಡ್ಕರ್, ಕಾನ್ಶಿರಾಮ್ ರಂತ ಮಹನೀಯರು ಮಾತ್ರವೇ ಸಮಾನತೆಯ, ಜಾತಿವಿನಾಶದ, ಸಮಾಜ ಸುಧಾರಣೆಯ ಕೆಲಸ ಮಾಡಬೇಕಿಲ್ಲ. ಪ್ರತಿಯೊಬ್ಬರಲ್ಲೂ ಆ ಎಚ್ಚರ ಇದ್ದು ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಿದೆ.

ʼ ಗುಲಾಮ ಗಿರಿ- 150ʼ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರೊಬ್ಬರು ಹೇಳುತ್ತಿದ್ದರು: ʼ ನಿಮ್ಮಲ್ಲಿ ಅನೇಕರು ಸತ್ಯನಾರಾಯಣ ಪೂಜೆ ಮಾಡಿರಬಹುದುʼ. ಅವರಂದಂತೆ ಹತ್ತೊಂಬತ್ತನೇ ಶತಮಾನದಲ್ಲಿ ಹಠಾತ್ತಾಗಿ ಸೃಷ್ಟಿಸಿದ ಸತ್ಯನಾರಾಯಣ ಪೂಜೆ ಮಾಡದೇ ಇರುವವರೇ ಅಪರೂಪವಾಗಿರಬಹುದು. ಫುಲೆಯವರು ಇಂತಹ ನಂಬಿಕೆ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಅವರು ತಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ಕಾಗೆಗಳಿಗೆ ಎಡೆ ಇಟ್ಟಿರಲಿಲ್ಲ. ಅದರ ಬದಲು ಹೊಟ್ಟೆಗಿಲ್ಲದವರಿಗೆ, ಅಂಗವಿಕಲರಿಗೆ ಉಣ ಬಡಿಸಿದ್ದರು. ಈಗ ಯಾರಾದರೂ ಈ ಆದರ್ಶವನ್ನು ಪಾಲಿಸುತ್ತಾರೆಯೇ? ಅನವಶ್ಯ ಅಹಾರವನ್ನು ಪೋಲು ಮಾಡುವ ಈ ರೀತಿಯ ಪದ್ಧತಿಗಳನ್ನು ಮಾಡದಿರುವುದು ಫುಲೆಯವರನ್ನು ನೆನಸಿಕೊಳ್ಳುವ ಅವರಿಗೆ ಕೃತಜ್ಞತೆ ಹೇಳುವ ಒಂದು ಸಣ್ಣ ಮಾರ್ಗ.ಇಂತಹ ಕ್ರಿಯೆಗಳೇ ಅಜ್ಞಾನವನ್ನು ನಿವಾರಿಸಲು ಸಹಾಯ ಮಾಡುತ್ತವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page