Thursday, August 15, 2024

ಸತ್ಯ | ನ್ಯಾಯ |ಧರ್ಮ

ಭಾರತದಲ್ಲಿ 19.5 ಕೋಟಿ ಜನ ಅಪೌಷ್ಟಿಕರು- ವಿಶ್ವದಲ್ಲೇ ಅತೀ ಹೆಚ್ಚು: ವಿಶ್ವಸಂಸ್ಥೆ ವರದಿ

ಬೆಂಗಳೂರು: ಭಾರತವು 19.5 ಕೋಟಿ ಅಪೌಷ್ಟಿಕ ಜನರಿಂದ ತುಂಬಿಹೋಗಿದೆ – ಇದು ವಿಶ್ವದಲ್ಲೇ ಅತಿ ಹೆಚ್ಚು- ಎಂದು ಜುಲೈ 24 ರಂದು ಬಿಡುಗಡೆಯಾದ ಈ ವರ್ಷದ ‘ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್‘ (SOFI) ವರದಿ ಹೇಳಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ವರದಿಯನ್ನು ಸಿದ್ಧಪಡಿಸಿದೆ ಮತ್ತು ವಿಶ್ವಸಂಸ್ಥೆ ಮತ್ತು ಯುನಿಸೆಫ್ ಸೇರಿದಂತೆ ಇತರ ನಾಲ್ಕು ವಿಶ್ವಸಂಸ್ಥೆಯ ಏಜೆನ್ಸಿಗಳು ಜಂಟಿಯಾಗಿ ಪ್ರಕಟಿಸಿದೆ.

FAO ಅಪೌಷ್ಟಿಕತೆಯನ್ನು ಸಾಮಾನ್ಯ ಮತ್ತು ಸಕ್ರಿಯ ಜೀವನವನ್ನು ನಡೆಸಲು ಅಗತ್ಯವಿರುವ ಆಹಾರದ ಪ್ರಮಾಣವನ್ನು ಪಡೆಯಲು ಮತ್ತು ಸೇವಿಸಲು ಸಾಧ್ಯವಾಗದ ಸ್ಥಿತಿಯೆಂದು ವ್ಯಾಖ್ಯಾನಿಸಿದೆ. ಅಪೌಷ್ಟಿಕತೆಯ ವ್ಯಾಪಕತೆಯನ್ನು ಹಸಿವನ್ನು ಅಳೆಯಲು ಬಳಸಲಾಗುತ್ತದೆ.

ಈ ವರ್ಷ ಭಾರತದ ಅಂಕಿಅಂಶಗಳು ಹಿಂದಿನದಕ್ಕಿಂತ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ: ಉದಾಹರಣೆಗೆ 2004-06ರ ಅವಧಿಯಲ್ಲಿ ದೇಶದಲ್ಲಿ ಅಪೌಷ್ಟಿಕತೆಯ ಸಂಖ್ಯೆ 24 ಕೋಟಿ ಇತ್ತು.

SOFI ವರದಿಯು ಅರ್ಧಕ್ಕಿಂತ ಹೆಚ್ಚು ಭಾರತೀಯರು (55.6%) ಇನ್ನೂ ‘ಆರೋಗ್ಯಕರ ಆಹಾರ’ವನ್ನು ಪಡೆಯಲು ಅಸಮರ್ಥರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ಈ ಪ್ರಮಾಣವು ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕವಾಗಿದ್ದು, ಈ ಸಂಖ್ಯೆ ಭಾರತದಲ್ಲಿ 79 ಕೋಟಿಯಾಗಿದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾನ್ಯ ದಿನದಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಬೇಕಾದ ಶಕ್ತಿಯನ್ನು ಹೊಂದಲು ಸಾಕಷ್ಟು ಆಹಾರವನ್ನು ತಿನ್ನುವುದು ಮತ್ತು ಪೌಷ್ಟಿಕಾಂಶದ ಕೊರತೆ ಇಲ್ಲದಿರುವುದು ಅತೀ ಮುಖ್ಯ. ಆದರೆ ಬಹುಪಾಲು ಭಾರತೀಯರು ಈ ರೀತಿ ಬದುಕಲು ಸಮರ್ಥರಾಗಿದ್ದಾರೆ. ಇನ್ನೊಂದು ವಿಚಾರವೆಂದರೆ, ಗುಣಮಟ್ಟದ ಅಥವಾ ‘ಆರೋಗ್ಯಕರ ಆಹಾರ’ ಸೇವಿಸುವುದು. ಅರ್ಧಕ್ಕಿಂತ ಹೆಚ್ಚು ಭಾರತೀಯರಿಗೆ ಇದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

FAO ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿರುವ ‘ಆರೋಗ್ಯಕರ ಆಹಾರ’ವನ್ನು ವಿವರಿಸುತ್ತದೆ: ಆಹಾರ ವೈವಿಧ್ಯತೆ (diversity), ಸಮರ್ಪಕತೆ (adequacy), ಮಿತಗೊಳಿಸುವಿಕೆ (moderation) ಮತ್ತು ಸಮತೋಲನ (balance).

ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗದ ಭಾರತದ ಪ್ರಸ್ತುತ ಅನುಪಾತವು (2023 ರಂತೆ) 2022 ರಲ್ಲಿದ್ದಕ್ಕಿಂತ ಸುಮಾರು ಮೂರು ಶೇಕಡಾವಾರು ಅಂಕಗಳು ಉತ್ತಮವಾಗಿದೆ. ಕಳೆದ ಐದು ವರ್ಷಗಳಲ್ಲಿ, ಈ ಜನರ ಅನುಪಾತದಲ್ಲಿ ಈ ಪ್ರಮಾಣದಲ್ಲಿ ಮಾತ್ರ ಇಳಿಮುಖವಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ‘ಸುಸ್ಥಿರ ಅಭಿವೃದ್ಧಿ ಗುರಿಗಳ ಭಾರತ ಸೂಚ್ಯಂಕ 2023-24’ ಕುರಿತು ನೀತಿ ಆಯೋಗದ ವರದಿಯು 99% ಅರ್ಹ ಫಲಾನುಭವಿಗಳು 2023-2024 ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅಡಿಯಲ್ಲಿ ಒಳಪಡುತ್ತಾರೆ ಎಂದು ಹೇಳಿದೆ .

ಪಡಿತರ ವಿತರಣೆ ವ್ಯವಸ್ಥೆ ಈ ಕಾಯಿದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ‘ಅಂತ್ಯೋದಯ ಅನ್ನ ಯೋಜನೆʼಯ ಅಡಿಯಲ್ಲಿ ತಿಂಗಳಿಗೆ ಒಂದು ಮನೆಗೆ 35 ಕೆಜಿ ಆಹಾರಧಾನ್ಯಗಳನ್ನು ಮತ್ತು ‘ಆದ್ಯತಾ ಕುಟುಂಬಗಳಿಗೆ’ 5 ಕೆಜಿ ಆಹಾರಧಾನ್ಯಗಳನ್ನು ನೀಡುತ್ತದೆ. ಧಾನ್ಯಗಳು, ಗೋಧಿ ಮತ್ತು ಅಕ್ಕಿಯನ್ನು ಅನುಕ್ರಮವಾಗಿ ರೂ. 1, ರೂ. 2 ಮತ್ತು ರೂ. 3 ರ ಸಬ್ಸಿಡಿ ಬೆಲೆಯಲ್ಲಿ ನೀಡಲಾಗುತ್ತದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಮೇಲೆ ನರೇಂದ್ರ ಮೋದಿ ಸರ್ಕಾರವು ಏಪ್ರಿಲ್ 2020 ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಜನವರಿ 1, 2023 ರಿಂದ ಇದನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಯೋಜನೆಯಡಿಯಲ್ಲಿ, ಪ್ರತಿ ಅರ್ಹ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ಸುಮಾರು 80.48 ಕೋಟಿ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

SOFI ವರದಿಯ ಸಂಶೋಧನೆಗಳು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಈ ಎರಡು ಯೋಜನೆಗಳಿಗಿಂತ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.

ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಮೇಲಿನ ಈ ಎರಡು ಸೂಚಕಗಳ ಹೊರತಾಗಿ, ವರದಿಯು ಸರಳವಾಗಿ ‘ಹಸಿವು’ ಎಂದರೇನು ಅಥವಾ ದೀರ್ಘಕಾಲದ ಅಪೌಷ್ಟಿಕತೆ ಎಂದರೇನು ಎಂಬುದನ್ನು ವಿವರಿಸುತ್ತದೆ.

“ಇದು ಆಹಾರದಿಂದ ಸಾಕಷ್ಟು ಶಕ್ತಿ ಸಿಗದೆ ಉಂಟಾಗುವ ಅಹಿತಕರ ಅಥವಾ ನೋವು. ಈ ವರದಿಯಲ್ಲಿ, ಹಸಿವು ಎಂಬ ಪದವು ದೀರ್ಘಕಾಲದ ಅಪೌಷ್ಟಿಕತೆಗೆ ಸಮಾನಾರ್ಥಕವಾಗಿದೆ ಮತ್ತು ಇದನ್ನು prevalence of undernourishment (ಪಿಒಯು) ದಿಂದ ಅಳೆಯಲಾಗುತ್ತದೆ” ಎಂದು ವರದಿ ಹೇಳುತ್ತದೆ.

ಭಾರತದ ಜನಸಂಖ್ಯೆಯ ಸುಮಾರು 13% ಜನರು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಕಳೆದ ವರ್ಷ ಹೊರಬಂದ ಜಾಗತಿಕ ಹಸಿವು ಸೂಚ್ಯಂಕ (GHI) ವರದಿಯಲ್ಲಿ ಭಾರತ 111 ನೇ ಸ್ಥಾನದಲ್ಲಿದೆ, ಕೇವಲ 14 ದೇಶಗಳು ಭಾರತಕ್ಕಿಂತ ಕೆಟ್ಟದಾಗಿವೆ. ಐರ್ಲೆಂಡ್ ಮತ್ತು ಜರ್ಮನಿಯ ‘ಕನ್ಸರ್ನ್ ವರ್ಲ್ಡ್‌ವೈಡ್’ ಮತ್ತು ‘ವೆಲ್ಟ್ ಹಂಗರ್‌ಹಿಲ್ಫ್’ ಎಂಬ ಎರಡು ಎನ್‌ಜಿಒಗಳು ಈ ವರದಿಯನ್ನು ಸಿದ್ಧಪಡಿಸಿದ್ದವು. ಈ ವರದಿಯಲ್ಲಿ ತನ್ನನ್ನು ಹಾಡಿ ಹೊಗಳದ ಕಾರಣ ಭಾರತ ಸರ್ಕಾರ ಅದನ್ನು ತಿರಸ್ಕರಿಸಿತು.

ಇತರ ಸೂಚ್ಯಂಕಗಳು:

ಬಾಲ್ಯಾವಸ್ಥೆಯ ಪೋಷಣೆಗೆ ಸಂಬಂಧಿಸಿದಂತೆ, ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಕ್ಷೀಣಿಸುವ (ಎತ್ತರಕ್ಕೆ ಇರಬೇಕಾದ ತೂಕಕ್ಕಿಂತ ಕಡಿಮೆ ಇರುವುದು) ಸಮಸ್ಯೆ 18.7% ಆಗಿದೆ. ಇದು ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚು. ಐದು ವರ್ಷದೊಳಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ (ವಯಸ್ಸಿಗೆ ಇರಬೇಕಾದ ಎತ್ತರಕ್ಕಿಂತ ಕಡಿಮೆ ಬೆಳೆಯುತ್ತಿರುವುದು) 31.7% ಇದೆ.

ಭಾರತದಲ್ಲಿ ಕಡಿಮೆ ತೂಕದ ಜನನದ ಪ್ರಮಾಣವು 27.4% ಇದೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ಮಗುವಿನ ಜನನದ ಸಮಯದಲ್ಲಿ 2,500 ಗ್ರಾಂಗಿಂತ ಕಡಿಮೆ ತೂಕವಿದ್ದರೆ, ಅದನ್ನು ಕಡಿಮೆ ತೂಕದ ಮಗು ಎಂದು ಕರೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಕಡಿಮೆ ಜನನ ತೂಕದ ಶಿಶುಗಳು ಹೆಚ್ಚಿನ ತೂಕದ ಶಿಶುಗಳಿಗಿಂತ (ಒಂದು ವರ್ಷದೊಳಗಿನ ಮಕ್ಕಳು) ಸಾಯುವ ಸಾಧ್ಯತೆ 20 ಪಟ್ಟು ಹೆಚ್ಚು. ಕಡಿಮೆ ತೂಕದ ಮಕ್ಕಳ ಜನನ ಗರ್ಭಿಣಿಯರಲ್ಲಿ ಇರುವ  ಅಪೌಷ್ಟಿಕತೆಯ ಸೂಚಕವಾಗಿದೆ.

“ಜನಸಂಖ್ಯೆಯ ಮಟ್ಟದಲ್ಲಿ, ಕಡಿಮೆ ತೂಕ ಹೊಂದಿರುವ ಶಿಶುಗಳ ಜನನ ಪ್ರಮಾಣವು ಬಹುಮುಖಿ ಸಾರ್ವಜನಿಕ ಆರೋಗ್ಯ ಸಮಸ್ಯೆಯ ಸೂಚಕವಾಗಿದೆ, ಇದು ದೀರ್ಘಾವಧಿಯ ತಾಯಿಯ ಅಪೌಷ್ಟಿಕತೆ, ಅನಾರೋಗ್ಯ ಮತ್ತು ಗರ್ಭಾವಸ್ಥೆಯಲ್ಲಿ ಸಿಗುವ ಕಳಪೆ ಆರೋಗ್ಯ ಸೇವೆಯನ್ನು ಒಳಗೊಂಡಿರುತ್ತದೆ” ಎಂದು WHO ಹೇಳುತ್ತದೆ.

2030 ರಲ್ಲಿ 14.2% ನವಜಾತ ಶಿಶುಗಳು ಕಡಿಮೆ ಜನನ ತೂಕವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದ್ದು, 2012 ರ ಮಟ್ಟಕ್ಕೆ ಹೋಲಿಸಿದರೆ 2030 ರ ಜಾಗತಿಕ ಗುರಿಯ 30% ರಷ್ಟು ಕಡಿಮೆಯಾಗಿದೆ.

ಅದೇ SOFI ವರದಿಯು 53.0% ರಷ್ಟು ಭಾರತದ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಮಹಿಳೆಯರಲ್ಲಿ ರಕ್ತಹೀನತೆಯ, ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸಿನಲ್ಲಿ, ಅವರ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ಹೆರಿಗೆಯ ಸಮಯದಲ್ಲಿ ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಜಾಗತಿಕವಾಗಿ, ಮಹಿಳೆಯರಲ್ಲಿ (15 ರಿಂದ 49 ವರ್ಷಗಳು) ರಕ್ತಹೀನತೆಯ ಪ್ರಮಾಣವು 2012 ರಲ್ಲಿ 28.5% ರಿಂದ 2019 ರಲ್ಲಿ 29.9% ಕ್ಕೆ ಏರಿಕೆಯಾಗಿದೆ. ಇದು 2030 ರ ವೇಳೆಗೆ 32.3% ಅನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.

ಒಂದು ಕಡೆ ಮಕ್ಕಳು ಮತ್ತು ವಯಸ್ಕರಲ್ಲಿರುವ ಅಪೌಷ್ಟಿಕತೆ ಆತಂಕದ ಸಂಗತಿಯಾಗಿದ್ದರೆ, ಈ ವರದಿಯು ಭಾರತದಲ್ಲಿರುವ ಸ್ಥೂಲಕಾಯದ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲಿದೆ.

ಇದು ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕಾಡುತ್ತಿದೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಲ್ಲಿ ಸುಮಾರು 2.8% ಅಧಿಕ ತೂಕವನ್ನು ಹೊಂದಿದ್ದಾರೆ. ಇದು 2012 ರಲ್ಲಿ ಇದ್ದ 2.2% ಗಿಂತ ಹೆಚ್ಚು.

ವಯಸ್ಕರಲ್ಲಿ, ಸ್ಥೂಲಕಾಯತೆಯ ಪ್ರಮಾಣವು 7.3% ಇದೆ. ಇದು 2022 ರಲ್ಲಿ 4.1% ಆಗಿತ್ತು. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ವರದಿಯು ಭಾರತದಲ್ಲಿ ಪ್ರತಿ ಎರಡನೇ ವ್ಯಕ್ತಿ ದೈಹಿಕವಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳುತ್ತದೆ.

ಸ್ಥೂಲಕಾಯತೆಯ ನಿರಂತರ ಹೆಚ್ಚಳವು ವಿಶ್ವಾದ್ಯಂತ ಇರುವ ಸಮಸ್ಯೆಯಾಗಿದೆ. “ವಯಸ್ಕರಲ್ಲಿರುವ ಸ್ಥೂಲಕಾಯದ ಸಮಸ್ಯೆ ಕಳೆದ ದಶಕದಿಂದ ಸ್ಥಿರವಾದ ಹೆಚ್ಚಳವನ್ನು ಕಂಡಿದೆ, 2012 ರಲ್ಲಿ ಇದ್ದ 12.1%, 2022 ರಲ್ಲಿ 15.8% ಕ್ಕೆ ಏರಿಕೆಯಾಗಿದೆ. 2030ರಲ್ಲಿ 1.2 ಶತಕೋಟಿಗೂ ಹೆಚ್ಚು ಸ್ಥೂಲಕಾಯದ ವಯಸ್ಕರು ಭಾರತದಲ್ಲಿ ಇರಲಿದ್ದಾರೆ,” ಎಂದು SOFI ವರದಿ ಹೇಳುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page