ಐಪಿಎಲ್ 18 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯದ ಸಂಭ್ರಮಾಚರಣೆಯಲ್ಲಿ ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಹತ್ತು ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಾಗೂ 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಹೊರಟ ಕಿಕ್ಕಿರಿದ ಅಭಿಮಾನಿಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇಂದು ಬೆಳಿಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಸಂಭ್ರಮಾಚರಣೆ ಸಲುವಾಗಿ ಬಂದು ಇಳಿದಿತ್ತು. ಈ ಸಂದರ್ಭದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸರ್ಕಾರದ ವತಿಯಿಂದ ವಿಧಾನ ಸೌಧದಲ್ಲಿ ಸಂಭ್ರಮದ ವೇಳೆ ಈ ದುರ್ಘಟನೆ ನಡೆದಿದೆ.
ಆರ್ಸಿಬಿ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಗೇಟ್ ನಂ.12 ರಲ್ಲಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಹಲವು ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ.
ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕಾಲ್ತುಳಿತದಲ್ಲಿ ಯುವಕನೋರ್ವನಿಗೆ ಕಾಲು ಮುರಿತವಾಗಿದೆ. ಹತ್ತು ಮಂದಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.