ತುಮಕೂರು: ಗಣೇಶ ವಿಸರ್ಜನೆ ವೇಳೆ ಅಪ್ಪ, ಮಗ ಸೇರಿದಂತೆ ಮೂವರ ಸಾವು

ತುರುವೇಕೆರೆ (ತುಮಕೂರು ಜಿಲ್ಲೆ): ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ತಂದೆ-ಮಗ ಸೇರಿದಂತೆ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ರಂಗನಹಟ್ಟಿ ಗ್ರಾಮದ ನಿವಾಸಿಗಳಾದ ರೇವಣ್ಣ (50), ಅವರ ಮಗ ಶರತ್ (26) ಮತ್ತು ದಯಾನಂದ್ (22) ಎಂದು ಗುರುತಿಸಲಾಗಿದೆ.

ಗ್ರಾಮದಲ್ಲಿ ಕೂರಿಸಲಾಗಿದ್ದ ಗಣಪತಿಯನ್ನು ಮೆರವಣಿಗೆಯಲ್ಲಿ ಕೆರೆಯ ಬಳಿ ತರಲಾಗಿತ್ತು. ವಿಸರ್ಜನೆಯ ವೇಳೆ ಶರತ್‌ ಮತ್ತು ದಯಾನಂದ್‌ ಮೂರ್ತಿಯನ್ನು ಕೆರೆಯಲ್ಲಿ ಮುಳುಗಿಸಲು ಮುಂದಾದರು.

ಆದರೆ ಕೆರೆಯಲ್ಲಿ ಕೆಸರಿದ್ದ ಕಾರಣ ಅವರ ಕಾಲು ಅಲ್ಲೇ ಹೂತುಕೊಂಡಿತು. ಇಬ್ಬರಿಗೂ ಈಜು ಬಾರದ ಕಾರಣ ಏನು ಮಾಡುವುದೆಂದು ತಿಳಿಯದೇ ಇಬ್ಬರೂ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗತ್ತಿದ್ದ ಮಗನನ್ನು ಕಂಡ ರೇವಣ್ಣ ಕೂಡಲೇ ನೀರಿಗೆ ಹಾರಿದ್ದಾರೆ. ವಿಷಾದವೆಂದರೆ ಅವರಿಗೂ ಈಜು ಬರುತ್ತಿರಲಿಲ್ಲ. ಕೊನೆಗೆ ಮೂವರೂ ನೀರಿನಲ್ಲಿ ಮುಳುಗಿದರು.

ಮೃತದೇಹಗಳನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆ ಶೋಧ ಕಾರ್ಯ ವಿಳಂಬವಾಯಿತು. ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು