ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಹೋರಾಟಗಾರರ ಶ್ರಮಕ್ಕೆ ಸಂದ ಜಯ – ನಟಿ ರಮ್ಯಾ

ಬೆಂಗಳೂರು : ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ (NEET UG) ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಸ್ಯಾಂಡಲ್‌ವುಡ್ ಮಾಜಿ ನಟಿ ಹಾಗೂ ಮಾಜಿ ಸಂಸದೆ ದಿವ್ಯ ಸ್ಪಂದನಾ ರಮ್ಯಾ (Ramya) ಸಾಮಾಜಿಕ ಜಾಲತಾಣದಲ್ಲಿ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರ ಪದತ್ಯಾಗದ ನಿರ್ಧಾರ ಹೊರಬೀಳುತ್ತಿದ್ದಂತೆ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇದನ್ನು ಅತ್ಯಂತ ಸಂತೋಷದ ಸುದ್ದಿ ಎಂದು ಬಣ್ಣಿಸಿದ್ದಾರೆ.

ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ

ಪರೀಕ್ಷಾ ಅಕ್ರಮದ ವಿರುದ್ಧ ದೇಶಾದ್ಯಂತ ಬೀದಿಗಿಳಿದು ಹೋರಾಟ ನಡೆಸಿದ ಲಕ್ಷಾಂತರ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಪ್ರತಿಭಟನೆಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಎಲ್ಲರ ಸಾಮೂಹಿಕ ಪ್ರಯತ್ನ ಹಾಗೂ ದಣಿವರಿಯದ ಹೋರಾಟದ ಫಲವಾಗಿಯೇ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬರುವಂತಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಸದ್ಯ ಸಚಿವರ ರಾಜೀನಾಮೆಗೆ ಸಂಬಂಧಿಸಿದಂತೆ ರಮ್ಯಾ ವ್ಯಕ್ತಪಡಿಸಿರುವ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

‘ನಾವು ಗೆದ್ದಿದ್ದೇವೆ..’ ಪ್ರಧಾನ್​​ ರಾಜೀನಾಮೆ ಬೆನ್ನಲ್ಲೇ ಜಿರಳೆ ಪಾರ್ಟಿ ಸಂಭ್ರಮಾಚರಣೆ

ಇನ್ನು ಕಳೆದ ಕೆಲ ದಿನಗಳಿಂದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಕಾಕ್ರೋಚ್‌ ಜನತಾ ಪಾರ್ಟಿ ಈ ರಾಜೀನಾಮೆಯನ್ನ ಸ್ವಾಗತ ಮಾಡಿದ್ದು, ನಾವು ಗೆದ್ದಿದ್ದೇವೆ ಎಂದು ಸಂಭ್ರಮ ಆಚರಣೆ ಮಾಡಿದ್ದಾರೆ.

ಶೈಕ್ಷಣಿಕ ವಲಯದ ಏಳಿಗೆಗಾಗಿ ಕೆಲಸ ಮಾಡಿದ್ದೇನೆ

ಸಾಮಾಜಿಕ ಜಾಲತಾಣ ‘X’ ನಲ್ಲಿ ಪತ್ರ ಹಂಚಿಕೊಂಡಿರುವ ಧರ್ಮೇಂದ್ರ ಪ್ರಧಾನ್, ತಮಗೆ ಇದು ವೈಯಕ್ತಿಕ ಗೌರವದ ಪ್ರಶ್ನೆಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಸುದೀರ್ಘ ಹೇಳಿಕೆಯಲ್ಲಿ ಧರ್ಮೇಂದ್ರ ಪ್ರಧಾನ್, ಕಳೆದ ನಲ್ವತ್ತು ವರ್ಷಗಳಿಂದ ವಿದ್ಯಾರ್ಥಿಗಳ ಹಿತಾಶಕ್ತಿ ಹಾಗೂ ಶೈಕ್ಷಣಿಕ ವಲಯದ ಏಳಿಗೆಗಾಗಿ ತಾವು ಕೆಲಸ ಮಾಡುತ್ತಾ ಬಂದಿರುವುದಾಗಿ ನೆನಪಿಸಿಕೊಂಡಿದ್ದಾರೆ. ಸಶಕ್ತ ಭಾರತದ ನಿರ್ಮಾಣಕ್ಕೆ ಎಲ್ಲರನ್ನೂ ಒಳಗೊಳ್ಳುವ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಬುನಾದಿಯಾಗಿದೆ. ಯುವಜನತೆಯ ಆಶೋತ್ತರಗಳನ್ನು ಈಡೇರಿಸುವುದು ತಮ್ಮ ಸಾರ್ವಜನಿಕ ಜೀವನದ ಪ್ರಮುಖ ಕರ್ತವ್ಯವಾಗಿದೆ ಎಂದಿರುವ ಅವರು, ತಮಗೆ ದೇಶಸೇವೆಯ ಜವಾಬ್ದಾರಿ ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು