ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಎದುರು ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಫೈರಿಂಗ್ ಸಂಭವಿಸಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರ ಖಾಸಗಿ ಭದ್ರತಾ ಸಿಬ್ಬಂದಿಗೆ ಸೇರಿದ ಮೂರು ಗನ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದು, ಅವುಗಳನ್ನು ಫರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್)ಗೆ ಕಳುಹಿಸಲಾಗಿದೆ. ಗನ್‌ಮ್ಯಾನ್‌ಗಳ ಶಸ್ತ್ರಾಸ್ತ್ರಗಳ ತಾಂತ್ರಿಕ ಪರಿಶೀಲನೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯ ಪ್ರಕಾರ ಜನಾರ್ದನ ರೆಡ್ಡಿ ಅವರ ಗನ್‌ಮ್ಯಾನ್‌ಗಳ ಗನ್‌ಗಳಿಂದ ಗುಂಡು ಹಾರಿಸಿಲ್ಲ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಆದರೆ ಬಳ್ಳಾರಿಯಲ್ಲಿ ಸಧ್ಯದ ಬೆಳವಣಿಗೆ ಮತ್ತು ನಿಷೇಧಾಜ್ಞೆ ಜಾರಿ ಆಗಿರುವ ಹಿನ್ನೆಲೆಯಲ್ಲಿ ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಗಲಾಟೆ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿ 11 ಜನರ ವಿರುದ್ಧ ಎಫ್ಐಆರ್ ಆಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ
ಗಲಾಟೆ ನಡೆದ ಹಿನ್ನೆಲೆ
ಜನವರಿ 3ರಂದು ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜನಾರ್ದನ ರೆಡ್ಡಿ ಅವರ ಮನೆ ಸಮೀಪ ಬ್ಯಾನರ್ ಕಟ್ಟಲು ಆಗಮಿಸಿದ್ದರು. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಹಾಗೂ ತಂಡ ಬ್ಯಾನರ್ ಕಟ್ಟಲು ಮುಂದಾದಾಗ, ಜನಾರ್ದನ ರೆಡ್ಡಿ ಅವರ ಭದ್ರತಾ ಸಿಬ್ಬಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಉಂಟಾಗಿದ್ದು, ಸ್ಥಳಕ್ಕೆ ಜನಾರ್ದನ ರೆಡ್ಡಿ ಬೆಂಬಲಿಗರೂ ಆಗಮಿಸಿದರು. ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಹೊಡೆದಾಟ ಹಾಗೂ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ತೀವ್ರಗೊಂಡಿದೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಸತೀಶ್ ರೆಡ್ಡಿ ಅವರ ಕಡೆಯ ಗನ್‌ಮ್ಯಾನ್ ಗನ್ ತೋರಿಸಿದ್ದಾನೆ. ಗಲಾಟೆ ತಡೆಯಲು ಯತ್ನಿಸುವ ವೇಳೆ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗಾಳಿಯಲ್ಲಿ ಹಾರಿಸಿದ ಗುಂಡು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್‌ಗೆ ತಗುಲಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರು, ಜನಾರ್ದನ ರೆಡ್ಡಿ ಬೆಂಬಲಿಗರ ಫೈರಿಂಗ್‌ನಿಂದಲೇ ರಾಜಶೇಖರ್ ಸಾವನ್ನಪ್ಪಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಫರೆನ್ಸಿಕ್ ವರದಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸತ್ಯಾಂಶ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
