ಗೃಹಲಕ್ಷ್ಮಿ ಯೋಜನೆ: 1.24 ಕೋಟಿ ಮಹಿಳೆಯರ ಖಾತೆಗೆ 30ನೇ ಕಂತಿನ ಹಣ ಜಮೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಯ 30ನೇ ಕಂತಿನ ಹಣವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಒಟ್ಟು 1,24,10,668 ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗಿದ್ದು, ಯೋಜನೆ ಆರಂಭದಿಂದ ಇಲ್ಲಿಯವರೆಗೆ ತಲಾ ₹60,000 ರೂಪಾಯಿಗಳನ್ನು ಪ್ರತಿ ಫಲಾನುಭವಿಗೆ ವಿತರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯುತ್ತಿದೆ. ಜನರಿಗೆ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ” ಎಂದು ತಿಳಿಸಿದರು.

ಭ್ರಷ್ಟಾಚಾರಕ್ಕೆ ಕಡಿವಾಣ, DBT ಮೂಲಕ ಪಾರದರ್ಶಕ ವಿತರಣೆ
ಈ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ ಡಿಬಿಟಿ (Direct Benefit Transfer) ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ, ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರಕ್ಕೆ ಸಂಪೂರ್ಣ ತಡೆ ಬಿದ್ದಿದ್ದು, ಅರ್ಹ ಮಹಿಳೆಯರಿಗೆ ನೂರು ಪೈಸೆ ನೂರು ಪೈಸೆಯೂ ತಲುಪುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಸ್ವಾವಲಂಬನೆಗೆ ಆರ್ಥಿಕ ಬಲ
ಗೃಹಲಕ್ಷ್ಮಿ ಯೋಜನೆಯ ಹಣವು ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಹಿಳೆಯರ ಆರ್ಥಿಕ ಸ್ವಾಲಂಬನೆಗೆ ನಿರ್ಣಾಯಕ ನೆರವು ನೀಡುತ್ತಿದೆ. ಕುಟುಂಬದ ದಿನನಿತ್ಯದ ಖರ್ಚು-ವೆಚ್ಚ, ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆ ಹಾಗೂ ಆಹಾರ ಭದ್ರತೆಯ ದೃಷ್ಟಿಯಿಂದ ಈ ನೆರವು ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಮಿಸಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಒಂದು ಪ್ರಮುಖ ಯೋಜನೆಯಾಗಿದ್ದು, ರಾಜ್ಯದ ಮಹಿಳಾ ಶಕ್ತಿಯನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು