ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆಗಾಗಿ ಆರೋಗ್ಯ ಇಲಾಖೆಗೆ ವಿಶೇಷ ಸೂಚನೆ ನೀಡಿದೆ. ಉಸಿರಾಟದ ತೊಂದರೆ ಇದ್ದು, ಆಸ್ಪತ್ರೆಗೆ ದಾಖಲಾಗುವ ಎಲ್ಲಾ ರೋಗಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ತಿಳಿಸಿದೆ.
ಈಗಾಗಲೇ ರಾಜ್ಯದಲ್ಲಿ 35 ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗಿವೆ. ಆದರೆ ಈ ಅವಧಿ ಸಾಂಕ್ರಾಮಿಕ ಹಬ್ಬಲು ಸೂಕ್ತ ಸಮಯ ಹಾಗೂ ಈ ಬಾರಿಯ ಕೋವಿಡ್ ಸಾಂಕ್ರಾಮಿಕ ಅಷ್ಟು ಪರಿಣಾಮಕಾರಿ ಅಲ್ಲದೇ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಜನ ಸಂದಣಿ ಪ್ರದೇಶ ಗಳಲ್ಲಿ ಹೋಗುವ ವೇಳೆ ಮಾಸ್ಕ್ ಧರಿಸುವುದು ಸಹಿತ ಸೂಕ್ತ ಮುನ್ನೆಚ್ಚ ರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಉಸಿರಾಟದ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲಾಗುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಕಳೆದ 20 ದಿನಗಳ ಅವಧಿಯಲ್ಲಿ, ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯನ್ನು ಗಮನಿಸಲಾಗಿದೆ. ಈ ವರ್ಷ ಇದುವರೆಗೆ ಯಾವುದೇ ಕೊರೊನಾ ಮರಣಗಳು ವರದಿಯಾಗಿರುವುದಿಲ್ಲ. ಪ್ರಸ್ತುತ ಕೊರೊನಾ ಪರಿಸ್ಥಿತಿ ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಪ್ರದೇಶಗಳಿಗೆ ತೆರಳುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ಆರೋಗ್ಯ ಇಲಾಖೆಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ.
ಹಾಗೆಯೇ ಆದ್ಯತೆಯ ಮೇಲೆ ಕೋವಿಡ್ – 19 ಪರೀಕ್ಷೆಗೆ ಒಳಪಡುವುದರಿಂದ ಸೂಕ್ತ ಚಿಕಿತ್ಸೆ ಪಡೆಯುವುದರೊಂದಿಗೆ ಕೋವಿಡ್ ಪ್ರಸರಣವನ್ನು ನಿಯಂತ್ರಿಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.