ಬೆಂಗಳೂರು: ತನಿಖೆ ಹಾಗೂ ಕಾನೂನು ಜಾರಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಶ್ರೇಣಿಯ ಸಿಬ್ಬಂದಿಗೆ ರಾಜ್ಯ ಗೃಹ ಇಲಾಖೆ ಒಟ್ಟು ₹35 ಲಕ್ಷ ನಗದು ಬಹುಮಾನ ಮಂಜೂರು ಮಾಡಿದೆ.
ಆದೇಶದಂತೆ, ಡಿಜಿ ಹಾಗೂ ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ ₹20,000 ನೀಡಲಾಗಿದ್ದು, ಈ ಶ್ರೇಣಿಗೆ ಒಟ್ಟು ₹25 ಲಕ್ಷ ಮಂಜೂರು ಮಾಡಲಾಗಿದೆ. ಡಿಜಿಪಿ, ಎಡಿಜಿಪಿ ಹಾಗೂ ಐಜಿಪಿ ಶ್ರೇಣಿಯ ಅಧಿಕಾರಿಗಳಿಗೆ ತಲಾ ₹8,000ರಂತೆ ಒಟ್ಟು ₹3 ಲಕ್ಷ, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲಾ ₹5,000ರಂತೆ ₹2 ಲಕ್ಷ, ಜಿಲ್ಲಾ ಮಟ್ಟದ ಸಿಬ್ಬಂದಿಗೆ ತಲಾ ₹5,000ರಂತೆ ಒಟ್ಟು ₹1 ಲಕ್ಷ ನೀಡಲಾಗಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳ ಪರಿಣಾಮಕಾರಿ ತನಿಖೆ ಹಾಗೂ ವಿಚಾರಣೆಯನ್ನು ಪರಿಗಣಿಸಿ ಈ ಬಹುಮಾನಗಳನ್ನು ಘೋಷಿಸಲಾಗಿದೆ. ಸಮಗ್ರ ತನಿಖೆ, ಸಾಕ್ಷ್ಯ ಸಂಗ್ರಹ ಮತ್ತು ಪರಿಣಾಮಕಾರಿ ನ್ಯಾಯಾಲಯದ ವಿಚಾರಣೆಯ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT)ವು ಒಟ್ಟು ಐದು ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 02/2024ರಲ್ಲಿ ನ್ಯಾಯಾಲಯ ವಿಚಾರಣೆ ಪೂರ್ಣಗೊಂಡಿದೆ. ಈ ಪ್ರಕರಣದಲ್ಲಿ ಆರೋಪಿಯಾದ ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹11.60 ಲಕ್ಷ ದಂಡ ವಿಧಿಸಲಾಗಿದೆ. ಇದರಲ್ಲಿ ₹11.25 ಲಕ್ಷವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ, ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಗುನ್ನೆ ನಂ.229/2024ರ ಗಂಭೀರ ಬ್ಯಾಂಕ್ ಕನ್ನಕಳವು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಕಳುವಾದ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ 83 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಒಟ್ಟು ₹10,02,500 ನಗದು ಬಹುಮಾನವನ್ನು ಮಂಜೂರು ಮಾಡಲಾಗಿದೆ. ಈ ವಿಶೇಷ ಪ್ರಕರಣವನ್ನು ಪರಿಗಣಿಸಿ ಡಿಜಿ ಮತ್ತು ಐಜಿಪಿಯವರ ಅನುಮೋದನೆಯೊಂದಿಗೆ ಬಹುಮಾನ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಪಡೆಗಳಲ್ಲಿ ವೃತ್ತಿಪರತೆ, ಹೊಣೆಗಾರಿಕೆ ಹಾಗೂ ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಗದು ಬಹುಮಾನಗಳನ್ನು ನೀಡಲಾಗಿದೆ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ.
