ಬೆಂಗಳೂರು, ಜನವರಿ 22: ಪತ್ರಕರ್ತರು ಕಂದಾಚಾರಗಳು, ಮೌಢ್ಯಗಳಿಗೆ ಒತ್ತು ನೀಡದೇ, ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಶ್ವವಾಣಿ ದಿನಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ಲೋಕಧ್ವನಿ ಹೆಮ್ಮೆಯ ಸಾಧಕ -2026 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು ಪತ್ರಿಕೋದ್ಯಮಿಯ ಜೊತೆಗೆ ಉತ್ತಮ ಬರಹಗಾರರೂ ಹೌದು. ಇವರು ಸುಮಾರು 110 ದೇಶಗಳಿಗೆ ಭೇಟಿ ನೀಡಿರುವುದು ವಿಶೇಷ. ನಾನು 2016 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವಿಶ್ವವಾಣಿ ಪತ್ರಿಕೆಯನ್ನು ಉದ್ಘಾಟಿಸಿದ್ದು, ಈಗಲೂ ಮುಖ್ಯಮಂತ್ರಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವೆನಿಸಿದೆ. ವಿಶ್ವೇಶ್ವರ ಭಟ್ಟರು ಕಳೆದ ವರ್ಷ ಪ್ರಾರಂಭಿಸಿದ ಪ್ರವಾಸಿ ಪ್ರಪಂಚ ವಾರಪತ್ರಿಕೆಯನ್ನು ನಾನು ಲೋಕಾರ್ಪಣೆಗೊಳಿಸಿದ್ದರೆಂದು ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ 30 ಜನ ಸಾಧಕರಿಗೆ ಲೋಕಧ್ವನಿ ಹೆಮ್ಮೆಯ ಸಾಧಕ ಪ್ರಶಸ್ತಿ ಪ್ರಧಾನ ಮಾಡಿದ್ದು, ಈ ಪತ್ರಿಕೆ ಉತ್ತರ ಕನ್ನಡ ಹಾಗೂ ಕೊಪ್ಪಳದಲ್ಲಿ ಪ್ರಕಟಣೆಯಾಗುತ್ತಿದ್ದು, ರಾಜ್ಯಪತ್ರಿಕೆಯಾಗಲಿ ಎಂದು ಆಶಿಸುತ್ತೇನೆ. ಕನ್ನಡ ಮೊದಲ ರಾಜಧಾನಿಯಾಗಿದ್ದ ಬನವಾಸಿಯಿರುವ ಉತ್ತರ ಕನ್ನಡ ಜಿಲ್ಲೆ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ ಎಂದರು.
ನಾವೆಲ್ಲರೂ ಮನುಷ್ಯರಾಗಿ ಬಾಳುವುದು ಮುಖ್ಯ
ಹುಟ್ಟು ಆಕಸ್ಮಿಕ , ಸಾವು ಖಚಿತ, ಹುಟ್ಟುಸಾವುಗಳ ನಡುವೆ ನಾವು ಸಾರ್ಥಕತೆ ಕಂಡುಕೊಳ್ಳಬೇಕು. ಯಾವುದೇ ಜಾತಿಧರ್ಮದಲ್ಲಿ ಹುಟ್ಟಿದರೂ ನಾವೆಲ್ಲರೂ ಮನುಷ್ಯರಾಗಿ ಬಾಳುವುದು ಮುಖ್ಯ. ಯಾವ ಜಾತಿಧರ್ಮದ ಆಧಾರದ ಮೇಲೆ ಮನುಷ್ಯತ್ವವನ್ನು ಅಳೆಯಬಾರದು. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಜಾತಿಧರ್ಮದ ಆಧಾರದ ಮೇಲೆ ಸಮಾಜ ಒಡೆಯಬಾರದು ಎಂದರು.
ಕಂದಾಚಾರಗಳು, ಮೌಢ್ಯಗಳಿಗೆ ಒತ್ತು ನೀಡಬಾರದು
ಪತ್ರಕರ್ತರಾಗಿ ವಸ್ತುನಿಷ್ಠರಾಗಿ ಸತ್ಯವನ್ನು ಹೇಳುವ ಕೆಲಸ ಮಾಡಬೇಕು. ಸಮಾಜಕ್ಕೆ ಉಪಯೋಗವಲ್ಲದ ವಿಚಾರಗಳಿಗೆ ಮಹತ್ವವನ್ನು ನೀಡಬಾರದು.ಕಂದಾಚಾರಗಳು, ಮೌಢ್ಯಗಳಿಗೆ ಒತ್ತು ನೀಡಬಾರದು. ಒಮ್ಮೆ ತಮ್ಮ ಕಾರಿನ ಮೇಲೆ ಕಾಗೆಯೊಂದು ಕೂತಿದ್ದಕ್ಕೆ , ಅಂತೆಯೇ ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆದರೆ ಈ ಘಟನೆಯ ನಂತರವೂ ನಾನು ಮುಖ್ಯಮಂತ್ರಿಯಾಗಿಯೇ ಮುಂದುವರೆದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ಶಿಕ್ಷಣ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ
ಪತ್ರಕರ್ತರು ಮೌಢ್ಯಗಳಿಗೆ ಒತ್ತು ನೀಡದೆ ಸಮಾಜದಲ್ಲಿ ವೈಚಾರಿಕತೆ, ವೈಜ್ಞಾನಿಕತೆಯನ್ನು ಪ್ರೋತ್ಸಾಹಿಸಬೇಕು. ವಿದ್ಯಾವಂತರು ಕಂದಾಚಾರಗಳನ್ನು ನಂಬುವುದು ಕಂಡುಬರುತ್ತಿದೆ. ಜಾತಿವ್ಯವಸ್ಥೆಯಲ್ಲಿ ಚಲನೆಯಿಲ್ಲ. ಶಿಕ್ಷಣ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಸಮಾನ ಅವಕಾಶ ದೊರೆತರೆ ಎಲ್ಲರೂ ಉತ್ತಮ ಸಾಧನೆಗಳನ್ನು ಮಾಡುತ್ತಾರೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ಬಂದಾಗಲೇ ಜಾತಿ ವ್ಯವಸ್ಥೆ ತೊಲಗುತ್ತದೆ. ಸಮಾನ ಅವಕಾಶ ಮತ್ತು ಪ್ರಯತ್ನಗಳಿದ್ದರೆ ಸಮಾಜದ ಅಶಕ್ತರು ಅಭಿವೃದ್ಧಿ ಹೊಂದುತ್ತಾರೆ. ಪತ್ರಿಕೆಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾ, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದರು.
