ಆಪ್ತಮಿತ್ರರ ಬಾಂಧವ್ಯ ಮತ್ತೊಮ್ಮೆ ಬಹಿರಂಗವಾಗಿದೆ. 2,238 ಕೋಟಿ ರೂ.ಗಳ ಸೆಕ್ಯೂರಿಟೀಸ್ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಕಂಪನಿಗಳನ್ನು ರಕ್ಷಿಸಲು ಕೇಂದ್ರದ ಮೋದಿ ಸರ್ಕಾರವೇ ನೇರವಾಗಿ ಅಖಾಡಕ್ಕಿಳಿದಿದೆ. ಇದಕ್ಕಾಗಿ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲೇ ಅತ್ಯಂತ ಬಲಿಷ್ಠ ನಿಯಂತ್ರಣ ಸಂಸ್ಥೆ ಎನಿಸಿಕೊಂಡಿರುವ ಅಮೆರಿಕದ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಜೊತೆಗೂ ಸಂಘರ್ಷಕ್ಕೆ ಇಳಿದಿದೆ. ಅದಾನಿಗೆ ಸಮನ್ಸ್ ಜಾರಿ ಮಾಡುವಂತೆ ಕಳೆದ 14 ತಿಂಗಳಲ್ಲಿ ಎಸ್‌ಇಸಿ ಆರು ಬಾರಿ ಮನವಿ ಮಾಡಿದ್ದರೂ, ಕೊನೆಗೆ ಸ್ಪಂದಿಸಿದ ಕೇಂದ್ರ ಸರ್ಕಾರವು, ‘ಹೇಗ್ ಸೇವಾ ಒಪ್ಪಂದ’ವನ್ನು (Hague Service Convention) ನೆಪವಾಗಿಟ್ಟುಕೊಂಡು ಈ ಸಮನ್ಸ್‌ಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಣ್ಣಗೆ ಹೇಳಿದೆ. ಅದಾನಿ ಕಂಪನಿಯನ್ನು ರಕ್ಷಿಸಲೆಂದೇ ಕೇಂದ್ರದ ಮೋದಿ ಸರ್ಕಾರ ಹೀಗೆ ವರ್ತಿಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಈ ನಡೆಗೆ ರಾಜಕೀಯ ವಲಯಗಳು ಅಚ್ಚರಿ ವ್ಯಕ್ತಪಡಿಸಿವೆ.
ಇ-ಮೇಲ್ ಕಳುಹಿಸುತ್ತೇವೆ..
2,238 ಕೋಟಿ ರೂ.ಗಳ ಸೆಕ್ಯೂರಿಟೀಸ್ ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ಸಮನ್ಸ್ ನೀಡಲು ಭಾರತದ ಮೋದಿ ಸರ್ಕಾರದಿಂದ ಕಳೆದ 14 ತಿಂಗಳುಗಳಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಬುಧವಾರ ಎಸ್‌ಇಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರನೇ ಬಾರಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಕೇಂದ್ರವು, ಈ ಸಮನ್ಸ್‌ಗಳು ಹೇಗ್ ಸೇವಾ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿವೆ, ಆದ್ದರಿಂದ ಅದಾನಿಗೆ ಸಮನ್ಸ್ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ ಎಂದು ಎಸ್‌ಇಸಿ ಅಳಲು ತೋಡಿಕೊಂಡಿದೆ. ತಾವು ಹೇಗ್ ಸೇವಾ ಒಪ್ಪಂದದ ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವೆ ಎಂದು ಎಸ್‌ಇಸಿ ಕೋರ್ಟ್ ಗಮನಕ್ಕೆ ತಂದಿದೆ. ಸಹಿ, ಮುದ್ರೆಗಳಿಲ್ಲ ಎಂದು ಕಳೆದ ಏಪ್ರಿಲ್‌ನಲ್ಲೂ ಕೇಂದ್ರ ಸರ್ಕಾರ ಇದೇ ರೀತಿ ಸಬೂಬು ಹೇಳಿತ್ತು ಎಂದು ಎಸ್‌ಇಸಿ ನೆನಪಿಸಿದೆ. ಇನ್ನು ಮುಂದೆ ಭಾರತದ ಕಾನೂನು ಸಚಿವಾಲಯದ ಮೂಲಕ ಅದಾನಿಗೆ ಸಮನ್ಸ್ ಜಾರಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ನೇರವಾಗಿ ಕಂಪನಿಯ ಅಧಿಕೃತ ಇ-ಮೇಲ್‌ಗೆ ಸಮನ್ಸ್ ನೀಡಲು ಅವಕಾಶ ಕಲ್ಪಿಸಬೇಕೆಂದು ಎಸ್‌ಇಸಿ ನ್ಯಾಯಾಲಯವನ್ನು ಕೋರಿದೆ.
ಹೇಗ್ ಸೇವಾ ಒಪ್ಪಂದದ ಪ್ರಕಾರ, ಯಾವುದೇ ಪ್ರಕರಣದಲ್ಲಿ ಭಾರತದಲ್ಲಿ ವಾಸಿಸುವ ಪ್ರತಿವಾದಿಗಳಿಗೆ ಸಮನ್ಸ್ ನೀಡಬೇಕಾದರೆ, ಸಮನ್ಸ್ ಜೊತೆಗೆ ದೂರಿನ ಪ್ರತಿಯನ್ನು (Complaint Copy) ಕೂಡ ನೀಡಬೇಕಾಗುತ್ತದೆ ಎಂದು ಎಸ್‌ಇಸಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಪ್ರತಿವಾದಿಗಳಿಗೆ (ಗೌತಮ್ ಅದಾನಿ, ಸಾಗರ್ ಅದಾನಿ) ಸಮನ್ಸ್ ಮತ್ತು ದೂರಿನ ಪ್ರತಿಯನ್ನು ತಲುಪಿಸಲು ಭಾರತದ ಕಾನೂನು ಇಲಾಖೆಯ ಸಹಾಯ ಕೋರಲಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಸಾಲ ಪಡೆಯುವ ಸಂದರ್ಭದಲ್ಲಿ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ ಬಗ್ಗೆ ಗೌತಮ್ ಮತ್ತು ಸಾಗರ್ ಅದಾನಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ 2024ರ ನವೆಂಬರ್ 20ರಂದು ಫೆಡರಲ್ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಫೆಡರಲ್ ಸೆಕ್ಯೂರಿಟೀಸ್ ಕಾನೂನನ್ನು ಉಲ್ಲಂಘಿಸಲಾಗಿದೆ ಎಂದು ಅದಾನಿ ಮೇಲೆ ಆರೋಪ ಹೊರಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಪ್ರಪಂಚದಾದ್ಯಂತ ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಒಲವು ಹೆಚ್ಚುತ್ತಿರುವಾಗ, ಸೌರ ವಿದ್ಯುತ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಲು ಅದಾನಿ ಗ್ರೂಪ್ ಪ್ರಯತ್ನಗಳನ್ನು ಚುರುಕುಗೊಳಿಸಿತ್ತು. ಇದರ ಭಾಗವಾಗಿ ಭಾರತದಲ್ಲಿ ಬೃಹತ್ ಸೋಲಾರ್ ಎನರ್ಜಿ ಪ್ರಾಜೆಕ್ಟ್‌ಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿತು. ಈ ವೇಳೆ ಯಾವುದೇ ಪೈಪೋಟಿ ಇಲ್ಲದೆ ಗುತ್ತಿಗೆ ಟೆಂಡರ್‌ಗಳನ್ನು ದಕ್ಕಿಸಿಕೊಳ್ಳಲು ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಜಮ್ಮು ಕಾಶ್ಮೀರ ಮತ್ತು ಛತ್ತೀಸ್‌ಗಢ ರಾಜ್ಯಗಳ ಉನ್ನತ ಅಧಿಕಾರಿಗಳಿಗೆ ಅದಾನಿ ಗ್ರೂಪ್ ಪ್ರತಿನಿಧಿಗಳು ಸುಮಾರು 2,238 ಕೋಟಿ ರೂ. ಲಂಚದ ಆಫರ್ ನೀಡಿದ್ದಾರೆ ಎಂದು ಎಫ್‌ಬಿಐ (FBI) ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ಈ ಮೂಲಕ ಮುಂದಿನ 20 ವರ್ಷಗಳಲ್ಲಿ ಕನಿಷ್ಠ 2 ಬಿಲಿಯನ್ ಡಾಲರ್ ಲಾಭ ಗಳಿಸಲು ಅದಾನಿ ಗ್ರೂಪ್ ಯೋಜನೆ ರೂಪಿಸಿತ್ತು ಎನ್ನಲಾಗಿದೆ. ಈ ಲಂಚದ ಹಣವನ್ನು ಹೊಂದಿಸಲು ಅಮೆರಿಕದ ಬ್ಯಾಂಕುಗಳು ಮತ್ತು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡಲು ಯತ್ನಿಸಲಾಗಿದೆ. ಈ ಪ್ರಕರಣದಲ್ಲಿ ಎಫ್‌ಬಿಐ ಮತ್ತು ಎಸ್‌ಇಸಿ ತನಿಖೆಯನ್ನು ತಡೆಯಲು ಆರೋಪಿಗಳು ಪಿತೂರಿ ನಡೆಸಿದ್ದಾರೆ ಎಂದು ಎಸ್‌ಇಸಿ ಆರೋಪಿಸಿರುವುದು ಗಮನಾರ್ಹ.
ಹಗರಣ ಬಯಲಾಗಿದ್ದು ಹೇಗೆ?
ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಗ್ರೂಪ್ ಕಂಪನಿಗಳಲ್ಲಿ ಸ್ಟಾಕ್ ತಿರುಚುವಿಕೆ (stock manipulation) ನಡೆದಿದೆ ಎಂದು ಗಂಭೀರ ಆರೋಪ ಮಾಡಿತ್ತು. ಇದರ ವಿಚಾರಣೆ ಅಮೆರಿಕದ ಬ್ರೂಕ್ಲಿನ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈ ವೇಳೆ ಪ್ರಕರಣದ ಪೂರ್ವಾಪರ ಪರಿಶೀಲಿಸಿದ ಕೆಲವು ವಕೀಲರಿಗೆ ಸೋಲಾರ್ ಎನರ್ಜಿ ಗುತ್ತಿಗೆ ಟೆಂಡರ್‌ಗಳಲ್ಲೂ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಯಿತು. ನಂತರ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಹಸ್ತಕ್ಷೇಪವೇಕೆ?
ಎಫ್‌ಬಿಐ ಆರೋಪಪಟ್ಟಿಯಲ್ಲಿರುವ 8 ಆರೋಪಿಗಳಲ್ಲಿ ನಾಲ್ವರು ಅಮೆರಿಕದ ಪೌರತ್ವ ಹೊಂದಿದ್ದಾರೆ ಎಂಬ ಮಾಹಿತಿಯಿದೆ. ಅಲ್ಲದೆ, ಈ ಹಗರಣದಲ್ಲಿ ಅಮೆರಿಕದ ಹೂಡಿಕೆದಾರರು ಮತ್ತು ಅಮೆರಿಕದ ಬ್ಯಾಂಕುಗಳ ಹಣವಿದೆ. ಆರೋಪಿಗಳ ಪಟ್ಟಿಯಲ್ಲಿರುವ ‘ಅಜುರಾ ಪವರ್’ ಕಂಪನಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಾಯಿತವಾಗಿದೆ. ಈ ಕಾರಣಕ್ಕಾಗಿಯೇ ಅಮೆರಿಕದ ನ್ಯಾಯಾಲಯ ವಿಚಾರಣೆ ಆರಂಭಿಸಿದೆ.
ಅಪರಾಧ ಸಾಬೀತಾದರೆ 5 ವರ್ಷ ಜೈಲು:
ಅದಾನಿ ಗ್ರೂಪ್ ಅಕ್ರಮ ಎಸಗಿರುವುದು ಸಾಬೀತಾದರೆ, ಅಮೆರಿಕದ ‘ಫಾರಿನ್ ಕರೆಪ್ಟ್ ಪ್ರಾಕ್ಟೀಸಸ್ ಆಕ್ಟ್’ (FCPA) ಪ್ರಕಾರ ಗೌತಮ್ ಅದಾನಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 2 ಮಿಲಿಯನ್ ಡಾಲರ್ ದಂಡ ವಿಧಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದಲ್ಲಿ 2008ರ ಸೀಮೆನ್ಸ್ ಎಜಿ ಮತ್ತು 2012ರ ಎಲಿಲಿಲ್ಲಿ ಕಂಪನಿ ಪ್ರಕರಣಗಳನ್ನು ಅವರು ಉಲ್ಲಹರಿಸುತ್ತಿದ್ದಾರೆ.
ಪ್ರಕರಣದಿಂದ ರಕ್ಷಿಸಲು ಈ ಪ್ರಯತ್ನವೇ?
ಗೌತಮ್ ಅದಾನಿಗೆ ಸಮನ್ಸ್ ಜಾರಿ ಮಾಡಲು ಮೋದಿ ಸರ್ಕಾರ ಸಹಕರಿಸದಿರುವುದು ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕಲ್ಲಿದ್ದಲು ಗಣಿಯಿಂದ ಬಂದರುಗಳವರೆಗೆ, ಚಿಲ್ಲರೆ ವ್ಯಾಪಾರದಿಂದ ವಿಮಾನ ನಿಲ್ದಾಣಗಳವರೆಗೆ ಇಡೀ ದೇಶವನ್ನೇ ಅದಾನಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣದಿಂದ ಅದಾನಿಯನ್ನು ರಕ್ಷಿಸಲು ಹೀಗೆ ಮಾಡುತ್ತಿದೆ ಎಂದು ವಿಪಕ್ಷ ನಾಯಕರು ಟೀಕಿಸುತ್ತಿದ್ದಾರೆ. ಗೌತಮ್ ಅದಾನಿ ಮೇಲಿನ ಆರೋಪಗಳು ಸಾಬೀತಾದರೆ, ಅವರನ್ನು ಭಾರತವು ಅಮೆರಿಕಕ್ಕೆ ಹಸ್ತಾಂತರಿಸಲೇಬೇಕಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. 1997ರ ಜೂನ್ 25 ರಂದು ವಾಷಿಂಗ್ಟನ್‌ನಲ್ಲಿ ನಡೆದ ಭಾರತ-ಅಮೆರಿಕ ಅಪರಾಧಿಗಳ ಹಸ್ತಾಂತರ ಒಪ್ಪಂದವನ್ನು ಅವರು ನೆನಪಿಸುತ್ತಿದ್ದಾರೆ. ಈ ಒಪ್ಪಂದದ ಪ್ರಕಾರ, ಅಮೆರಿಕದಲ್ಲಿ ದಾಖಲಾದ ಆರೋಪಗಳು ಸಾಬೀತಾದರೆ ಆರೋಪಿಗಳು ಅಲ್ಲೇ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಆರೋಪ ಸಾಬೀತಾದರೆ ಅದಾನಿಯನ್ನು ಅಮೆರಿಕಕ್ಕೆ ಕಳುಹಿಸಬೇಕಾಗುತ್ತದೆ. ಅದಕ್ಕಾಗಿಯೇ, ಸಮನ್ಸ್ ಜಾರಿ ಮಾಡಲು ಮೋದಿ ಸರ್ಕಾರ ಎಸ್‌ಇಸಿಗೆ ಸಹಕರಿಸುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಾನಿಯನ್ನು ರಕ್ಷಿಸಲೆಂದೇ ಮೋದಿ ಸರ್ಕಾರ ಹೀಗೆ ಮಾಡುತ್ತಿದೆಯೇ ಎಂದು ಅವರು ಪ್ರಶ್ನಿಸುತ್ತಿದ್ದಾರೆ.
