Home ದೇಶ ಮದ್ಯ ಹಗರಣ: ಕೇಜ್ರಿವಾಲ್, ಕವಿತಾ, ಸಿಸೋಡಿಯಾ ಸೇರಿದಂತೆ 23 ಮಂದಿಗೆ ದೆಹಲಿ ಹೈಕೋರ್ಟ್ ನೋಟಿಸ್

ಮದ್ಯ ಹಗರಣ: ಕೇಜ್ರಿವಾಲ್, ಕವಿತಾ, ಸಿಸೋಡಿಯಾ ಸೇರಿದಂತೆ 23 ಮಂದಿಗೆ ದೆಹಲಿ ಹೈಕೋರ್ಟ್ ನೋಟಿಸ್

0

ದೆಹಲಿ: ದೆಹಲಿ ಮದ್ಯದ ಹಗರಣದ ತನಿಖೆಯನ್ನು ರದ್ದುಗೊಳಿಸಿ ಟ್ರಯಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಈ ಪ್ರಕರಣದ ಎಲ್ಲ 23 ಆರೋಪಿಗಳಿಗೆ ನೋಟಿಸ್ ನೀಡಿದೆ. ಈ ಮೂಲಕ ಮದ್ಯದ ಹಗರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದೆ.

ಇತ್ತೀಚೆಗೆ ರೌಸ್ ಅವೆನ್ಯೂ ನ್ಯಾಯಾಲಯವು ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್, ತನಿಖಾ ಸಂಸ್ಥೆಯ ವಿರುದ್ಧ ವಿಶೇಷ ನ್ಯಾಯಾಲಯವು ನೀಡಿದ್ದ ವಿಮರ್ಶಾತ್ಮಕ ಕಾಮೆಂಟ್‌ಗಳಿಗೆ ತಡೆಯಾಜ್ಞೆ ನೀಡಿದೆ.

ಫೆಬ್ರವರಿ 2026 ರಲ್ಲಿ ಟ್ರಯಲ್ ಕೋರ್ಟ್ ಈ ಪ್ರಕರಣದ ತೀರ್ಪು ನೀಡುವಾಗ, “ಸಿಬಿಐ ಹಣದ ಮೂಲ ಅಥವಾ ಸಾಕ್ಷ್ಯಗಳಿಲ್ಲದೆ ಪ್ರಕರಣವನ್ನು ನಡೆಸಿದೆ ಮತ್ತು ಸಂಚಿನ ಕೋನವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ” ಎಂದು ಅಭಿಪ್ರಾಯಪಟ್ಟಿತ್ತು. ಈ ಆಧಾರದ ಮೇಲೆ ಕೇಜ್ರಿವಾಲ್, ಸಿಸೋಡಿಯಾ ಮತ್ತು ಕವಿತಾ ಸೇರಿದಂತೆ ಒಟ್ಟು 23 ಮಂದಿಯನ್ನು ಬಿಡುಗಡೆ ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯದ (ED) ತನಿಖೆಯ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡುವಂತೆ ಟ್ರಯಲ್ ಕೋರ್ಟ್‌ಗೆ ಸೂಚಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಒಂದು ವಾರ ಕಾಲ ಅಂದರೆ ಮುಂದಿನ ಸೋಮವಾರಕ್ಕೆ ನಿಗದಿಪಡಿಸಿದೆ.

You cannot copy content of this page

Exit mobile version