ಕಳೆದ ದಶಕದಲ್ಲಿ 152 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ, ಇದರಿಂದ 7.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಿಜೆಪಿ ರ‍್ಯಾಲಿಯ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿದ ಅವರು, ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿದ್ಯಾರ್ಥಿಗಳ ಬೇಡಿಕೆಗಳಿಗೆ ಕಾಂಗ್ರೆಸ್ ಪಕ್ಷವು ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಅವರು ಹೇಳಿದರು.
ಜಗತ್ತಿನಲ್ಲೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದ್ದ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಇಂದು ಅಕ್ರಮ ವ್ಯವಸ್ಥೆಯಾಗಿ ಬದಲಾಗಿದೆ ಎಂಬ ವಿಷಯ ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದು ಅವರು ಹೇಳಿದರು. ದಶಕದ ಅವಧಿಯಲ್ಲಿ 152 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಲೆಕ್ಕ ಹಾಕಿ ನೋಡಿದರೆ ತಿಂಗಳಿಗೆ ಒಂದರಂತೆ ಪೇಪರ್ ಸೋರಿಕೆಯಾದಂತಾಗಿದೆ.
“ಪ್ರತಿ ತಿಂಗಳೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀವು ಈ ಹಿಂದೆ ಅನುಭವಿಸಿದ ಮಾನಸಿಕ ಒತ್ತಡವನ್ನು ಮತ್ತೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಆ ನಂತರ ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಾರಿಕೊಳ್ಳಲಾಗುತ್ತದೆ” ಎಂದು ಅವರು ಟೀಕಿಸಿದರು.
7.5 ಕೋಟಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ತಮ್ಮ ಕಷ್ಟದ ಗಳಿಕೆಯನ್ನೆಲ್ಲಾ ಈ ಪರೀಕ್ಷೆಗಳಿಗಾಗಿ ಖರ್ಚು ಮಾಡುತ್ತಾರೆ, ಆದರೆ ಅವರ ಶ್ರಮವೆಲ್ಲವೂ ವ್ಯರ್ಥವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಅವರು ಕಿಡಿಕಾರಿದರು.
ವಿದ್ಯಾರ್ಥಿಗಳು ನ್ಯಾಯಯುತವಾದ ಶಿಕ್ಷಣ ವ್ಯವಸ್ಥೆಯನ್ನು ಬಯಸುವುದು ತಪ್ಪೇ ಎಂದು ಅವರು ಪ್ರಶ್ನಿಸಿದರು. ವಿದ್ಯಾರ್ಥಿಗಳಿಗೆ ಏಕೆ ಹೀಗಾಗುತ್ತಿದೆ, ಅವರ ಮೇಲೆ ಆಯುಧಗಳನ್ನು ತಗುಲಿಸುವಂತಹ ಪರಿಸ್ಥಿತಿ ಏಕೆ ನಿರ್ಮಾಣವಾಯಿತು, ಅವರು ಮಾಡಿದ ತಪ್ಪಾದರೂ ಏನು ಎಂದು ಅವರು ಪ್ರಶ್ನಿಸಿದರು. ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಾ ತಮ್ಮ ಬೇಡಿಕೆಗಳನ್ನು ಧ್ವನಿಸುತ್ತಿದ್ದಾರೆ, ದೇಶವು ತಮಗೆ ನೀಡಬೇಕಾದ ಹಕ್ಕುಗಳ ಬಗ್ಗೆ ಕೇಳುತ್ತಿದ್ದಾರೆ.
ಈ ದೇಶದ ವಿದ್ಯಾರ್ಥಿಗಳಾಗಿ ನಮಗೆ ನ್ಯಾಯಯುತ ಶಿಕ್ಷಣ ವ್ಯವಸ್ಥೆ ಬೇಕು ಎಂದು ಮಾತ್ರವೇ ಅವರು ಕೋರುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು. ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ 1.4 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುತ್ತಿದ್ದರೆ, ಪ್ರತಿ ವರ್ಷ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಗಳು 1.32 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
