ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಕ್ಷಣ ಈಡೇರಿಸದಿದ್ದರೆ ಸೆಪ್ಟೆಂಬರ್ 28 ರಿಂದ 30 ರವರೆಗೆ ಮತ್ತೊಮ್ಮೆ ದೇಶವ್ಯಾಪಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (BEFI) ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಸಂಧಾನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಸಲಾದ ಒಂದು ದಿನದ ಮುಷ್ಕರ ದೇಶಾದ್ಯಂತ ಯಶಸ್ವಿಯಾಗಿದೆ ಎಂದು ಬೆಫಿ ಪ್ರಕಟಣೆಯಲ್ಲಿ ತಿಳಿಸಿದೆ.
ವಾರಕ್ಕೆ ಐದು ದಿನಗಳ ಕೆಲಸದ ವಾರ ಜಾರಿಗೊಳಿಸುವುದು, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಹಂಚಿಕೆಯಲ್ಲಿನ ತಾರತಮ್ಯ ನಿವಾರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು (OPS) ಪುನಃಸ್ಥಾಪಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯ ನಿರ್ಲಕ್ಷ್ಯ ವಹಿಸಿವೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (NPS) ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೊಳಿಸುವುದು, ಪಿಂಚಣಿ ಪರಿಷ್ಕರಣೆ, ಕ್ಲರ್ಕ್ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ, ಗ್ರಾಚ್ಯುಟಿ ಮಿತಿ ಹೆಚ್ಚಳ ಹಾಗೂ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ (DA) ನೀಡುವುದು ತಮ್ಮ ಮುಖ್ಯ ಬೇಡಿಕೆಗಳಾಗಿವೆ ಎಂದು ತಿಳಿಸಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದ್ದ ಈ ಮುಷ್ಕರದಲ್ಲಿ ದೇಶಾದ್ಯಂತ ಸುಮಾರು 8 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಿದ್ದು, ಯುವ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.
ಹಣಕಾಸು ಸೇವೆಗಳ ಇಲಾಖೆ (DFS) ಉನ್ನತ ಮಟ್ಟದ ಅಧಿಕಾರಿಗಳಿಗೆ ಗರಿಷ್ಠ 365 ದಿನಗಳವರೆಗಿನ ಪಿಎಲ್‌ಐ ನಿಗದಿಪಡಿಸಿ, ಸ್ಕೇಲ್-3 ವರೆಗಿನ ನೌಕರರಿಗೆ ಕೇವಲ 15 ದಿನಗಳ ಪಿಎಲ್‌ಐ ಸೀಮಿತಗೊಳಿಸಿರುವುದನ್ನು ಬೆಫಿ ತೀವ್ರವಾಗಿ ಖಂಡಿಸಿದೆ. ಆದರೆ, 2025-26ನೇ ಸಾಲಿಗೆ ಸಂಬಂಧಿಸಿದಂತೆ ಪಿಎಲ್‌ಐ ಪಾವತಿಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಹಿಡಿದಿರುವ ಕೇಂದ್ರದ ನಿರ್ಧಾರವನ್ನು ಒಕ್ಕೂಟ ಸ್ವಾಗತಿಸಿದೆ.
