Home ಬ್ರೇಕಿಂಗ್ ಸುದ್ದಿ ತಮಿಳುನಾಡಿಗೆ ರಾಜ್ಯದಿಂದ ಪ್ರತಿದಿನ 3500 ಕ್ಯೂಸೆಕ್ ನೀರು –  ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ತಮಿಳುನಾಡಿಗೆ ರಾಜ್ಯದಿಂದ ಪ್ರತಿದಿನ 3500 ಕ್ಯೂಸೆಕ್ ನೀರು –  ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಹಾಸನ : ತಮಿಳುನಾಡಿಗೆ ಪ್ರತಿದಿನ 3500 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶವು ಅವೈಜ್ಞಾನಿಕ ಹಾಗೂ ನಾಡಿನ ಜನತೆಗೆ ಮಾರಕವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಚೆನ್ನಮ್ಮ ಸಮಾಧಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಆದೇಶದಿಂದ ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ರೈತರಿಗೆ ಮತ್ತು ಜನರಿಗೆ ಸಂಪೂರ್ಣ ಮಾರಣಹೋಮವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಅವೈಜ್ಞಾನಿಕ ತೀರ್ಪು ಹಾಗೂ ಬರಗಾಲದ ಭೀತಿ: ಈಗಾಗಲೇ ರಾಜ್ಯದಲ್ಲಿ ಮಳೆಯಾಗದೆ ಬರಗಾಲದಿಂದ ಬಿತ್ತನೆ ಮಾಡಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ನೀಡಿರುವುದು ನಮ್ಮ ನಾಡಿನ ಜನತೆಗೆ ಮಾಡಿರುವ ಅನ್ಯಾಯ ಎಂದ ಅವರು, ರೈತ ಮುಖಂಡರು ಮತ್ತು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ನಮಗೆ ಆಗಿರುವ ಅನ್ಯಾಯದ ವಿರುದ್ಧವಾಗಿದೆ ಎಂದು ಬೆಂಬಲ ಸೂಚಿಸಿದರು.

ಶಾಶ್ವತ ಪರಿಹಾರಕ್ಕೆ ಯೋಜನೆಗಳ ರೂಪಣೆ: ಕಳೆದ ಬಾರಿ ಜಲಾಶಯಗಳು ಭರ್ತಿಯಾಗಿದ್ದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆರೆ-ಕಟ್ಟೆಗಳನ್ನು ತುಂಬಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರ ಎಡವಿದೆ. ಸಮುದ್ರಕ್ಕೆ ನೀರು ವ್ಯರ್ಥವಾಗಿ ಹರಿದುಹೋಗದಂತೆ ತಡೆಯಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಎದುರಿಸಲು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. ನಮಗೆ ಹತ್ತು ವರ್ಷಗಳಲ್ಲಿ ಐದಾರು ವರ್ಷ ಉತ್ತಮ ಮಳೆಯಾದರೆ, ಮೂರ್ನಾಲ್ಕು ವರ್ಷ ಇಂತಹ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಈ ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಜಲಾಶಯಗಳು ಭರ್ತಿಯಾದ ಕೂಡಲೇ ಕೆರೆ-ಕಟ್ಟೆಗಳನ್ನು ತುಂಬಿಸುವುದಕ್ಕೆ ಆದ್ಯತೆ ನೀಡಬೇಕು. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ನೂರಾರು ವರ್ಷಗಳಿಂದ ನಮಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಇದಕ್ಕೆ ತಳಮಟ್ಟದಿಂದಲೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದರು.

You cannot copy content of this page

Exit mobile version