ಕೋಲ್ಕತ್ತಾ : ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ (Aadhar Card) ಅಥವಾ ಬ್ಯಾಂಕ್ ಖಾತೆಯ ದಾಖಲೆಗಳು ಯಾವುದೇ ವ್ಯಕ್ತಿಯು ಭಾರತೀಯ ಪ್ರಜೆಯೆಂದು (Indian Citizen) ಸಾಬೀತುಪಡಿಸಲು ಅಂತಿಮ ಮತ್ತು ನಿಖರ ಸಾಕ್ಷಿಗಳಾಗುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಾಂಗ್ಲಾದೇಶಿ ಪ್ರಜೆ ಎಂಬ ಶಂಕೆಯ ಮೇಲೆ ತಡೆಗೋಡೆ ಕೇಂದ್ರದಲ್ಲಿದ್ದ (Detention Centre) ಮುರ್ಷಿದಾಬಾದ್ ನಿವಾಸಿಯೊಬ್ಬನ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಆರೋಪ ಎದುರಿಸುತ್ತಿರುವ ನಾಸಿರ್ ಎಂಬ ವ್ಯಕ್ತಿಯನ್ನು ಬಂಧಿಸಿ ವಿಶೇಷ ತಡೆ ಕೇಂದ್ರದಲ್ಲಿರಿಸಲಾಗಿತ್ತು. ತಾನು ಭಾರತದ ಪ್ರಜೆ ಎಂದು ಸಾಬೀತುಪಡಿಸಲು ನಾಸಿರ್ ಹಾಗೂ ಆತನ ಸಂಬಂಧಿ ಸುಮಾನ್ ಮೊಲ್ಲಾಗೆ ನ್ಯಾಯಾಲಯ ಹಲವು ಅವಕಾಶಗಳನ್ನು ನೀಡಿತ್ತು.
ನಾಸಿರ್‌ನ ತಂದೆ 1980 ರಲ್ಲೇ ಮೃತಪಟ್ಟಿದ್ದು, ತಾನೇ ಆತನನ್ನು ಸಾಕಿದ್ದಾಗಿ ಸುಮಾನ್ ಹೇಳಿಕೊಂಡಿದ್ದರು. ಆದರೆ ದಾಖಲೆಗಳ ಪ್ರಕಾರ ನಾಸಿರ್ ವಯಸ್ಸು 46 ಹಾಗೂ ಸುಮಾನ್ ವಯಸ್ಸು 38 ಆಗಿದ್ದು, ನಾಸಿರ್ ತನಗಿಂತ ಕಿರಿಯ ವಯಸ್ಸಿನ ಸುಮಾನ್‌ನನ್ನು ಬೆಳೆಸಿದನೆಂಬ ವಾದವನ್ನು ಒಪ್ಪಲು ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ದೇವಂಗ್ಸು ಬಸಕ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು, ಅರ್ಜಿದಾರರು ನೈಜ ಸಂಗತಿಗಳನ್ನು ಮರೆಮಾಚಿ ಕೋರ್ಟ್‌ಗೆ ಬಂದಿದ್ದಾರೆ ಎಂದು ಹೇಳಿದೆ. ಪೊಲೀಸರ ವಿಚಾರಣೆ ವೇಳೆ ನಾಸಿರ್‌ನ ಸೋದರಸಂಬಂಧಿ ಎಂದು ಹೇಳಿಕೊಂಡಿದ್ದ ಸುಮಾನ್, ಕೋರ್ಟ್‌ನಲ್ಲಿ ತಾನು ಆತನ ಚಿಕ್ಕಪ್ಪ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ವಿಚಾರಣೆ ವೇಳೆ ನಾಸಿರ್ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದು ಅವರ ಸಮಾಧಿ ಎಲ್ಲಿದೆ ಎಂದು ಸ್ಪಷ್ಟವಾಗಿ ತಿಳಿಸಲು ವಿಫಲರಾಗಿದ್ದರು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಮಾತನಾಡಿ, ತಾನು ಬಾಂಗ್ಲಾದೇಶಿ ಪ್ರಜೆಯಾಗಿದ್ದು ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದಿರುವುದಾಗಿ ನಾಸಿರ್ ಕಸ್ಟಡಿಯಲ್ಲಿ ಒಪ್ಪಿಕೊಂಡಿರುವುದಾಗಿ ತಿಳಿಸಿದರು. ಕಸ್ಟಡಿಯಲ್ಲಿ ನೀಡಿದ ಹೇಳಿಕೆಯನ್ನು ಬದಿಗಿಟ್ಟರೂ, ತಾನು ಈ ದೇಶದ ಪ್ರಜೆ ಎಂದು ಸಾಬೀತುಪಡಿಸುವ ಸಂಪೂರ್ಣ ಹೊಣೆಗಾರಿಕೆ ಬಂಧನಕ್ಕೊಳಗಾದ ವ್ಯಕ್ತಿಯ ಮೇಲೆಯೇ ಇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
