Home ರಾಜಕೀಯ ಯತ್ನಾಳ್‌ ವಿಜಯೇಂದ್ರ ವಿರುದ್ಧ ಆರೋಪ ಮಾಡಿದಾಗ ಸುಮ್ಮನಿದ್ದ ಇಡಿ ಈಗ ಕರ್ನಾಟಕ್ಕೆ ಬಂದಿದೆ: ಪ್ರಿಯಾಂಕ್‌ ಖರ್ಗೆ

ಯತ್ನಾಳ್‌ ವಿಜಯೇಂದ್ರ ವಿರುದ್ಧ ಆರೋಪ ಮಾಡಿದಾಗ ಸುಮ್ಮನಿದ್ದ ಇಡಿ ಈಗ ಕರ್ನಾಟಕ್ಕೆ ಬಂದಿದೆ: ಪ್ರಿಯಾಂಕ್‌ ಖರ್ಗೆ

0

ದಾಖಲೆಗಳಿದ್ದರೆ ಇಡಿ ಬಿಡುಗಡೆ ಮಾಡಲಿ, ಕೇವಲ ಬೆದರಿಸುವ ತಂತ್ರಕ್ಕೆ ನಾವು ಹೆದರಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಗಾಳಿಸುದ್ದಿಗಳಿಗೆಲ್ಲ ಉತ್ತರಿಸಲು ಸಾಧ್ಯವಿಲ್ಲ; ಜಾರಿ ನಿರ್ದೇಶನಾಲಯದ (ಇಡಿ) ಬಳಿ ದಾಖಲೆಗಳಿದ್ದರೆ ಅಥವಾ ಮನಿ ಟ್ರಯಲ್ ಸಾಬೀತಾಗಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಯಾವುದೇ ಗುತ್ತಿಗೆಯಲ್ಲಿ ಹಣ ಪಡೆದು ಬೇರೆಡೆ ಹೂಡಿಕೆ ಮಾಡಲಾಗಿದೆ ಎಂಬುದಕ್ಕೆ ಸಾಕ್ಷ್ಯಗಳೇ ಇಲ್ಲದೆ ಕೇವಲ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಇಡಿ ಈಗಾಗಲೇ ನೂರಾರು ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಿದೆ, ಆದರೆ ಅವುಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ (ಕನ್ವಿಕ್ಷನ್) ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷಗಳನ್ನು ಹೆದರಿಸುವುದು ಮತ್ತು ಬೆದರಿಸುವುದೇ ತನಿಖಾ ಸಂಸ್ಥೆಗಳ ಮುಖ್ಯ ಕೆಲಸವಾಗಿದೆ ಎಂದು ಟೀಕಿಸಿದರು.

ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪಗಳನ್ನು ಮಾಡಿದಾಗ ಯಾವುದೇ ಐಟಿ ಅಥವಾ ಇಡಿ ದಾಳಿಗಳು ನಡೆಯಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ನೆನಪಿಸಿದರು. ವಿದೇಶ ಪ್ರವಾಸಗಳ ಕುರಿತು ಮಾತನಾಡಿದ ಅವರು, “ಬಿಜೆಪಿಯ ಶಾಸಕರು ಮತ್ತು ಮಾಜಿ ಸಚಿವರು ತಮ್ಮ ಪಾಸ್‌ಪೋರ್ಟ್‌ಗಳನ್ನು ತನಿಖೆಗೆ ನೀಡಲಿ; ದುಬೈ ಹಾಗೂ ಮಾರಿಷಸ್‌ಗೆ ಯಾರೆಲ್ಲಾ ಎಷ್ಟು ಬಾರಿ ಹೋಗಿ ಬಂದಿದ್ದಾರೆ ಎಂಬುದು ತನಿಖೆಯಾಗಲಿ, ನಾವೂ ನಮ್ಮ ಪಾಸ್‌ಪೋರ್ಟ್ ನೀಡಲು ಸಿದ್ಧರಿದ್ದೇವೆ,” ಎಂದು ಸವಾಲೆಸೆದರು. ಬಿಜೆಪಿಗೆ ಹೋದ ತಕ್ಷಣವೇ ಭ್ರಷ್ಟ ರಾಜಕಾರಣಿಗಳು ‘ಗಂಗಾಜಲ’ದಲ್ಲಿ ಮುಳುಗೆದ್ದು ಪವಿತ್ರರಾಗುತ್ತಾರೆ ಮತ್ತು ಅವರ ಎಲ್ಲ ತಪ್ಪುಗಳೂ ಮನ್ನಾಗುತ್ತವೆ ಎಂದು ಅವರು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದ ವಿರುದ್ಧ ಇಷ್ಟೆಲ್ಲಾ ಆಧಾರರಹಿತ ಆರೋಪಗಳನ್ನು ಮಾಡಿ ಚಾರಿತ್ರ್ಯವಧೆ ನಡೆಸಿದ ಬಳಿಕ, ನ್ಯಾಯಾಲಯದಲ್ಲಿ ಯಾವುದೂ ಸಾಬೀತಾಗದಿದ್ದಾಗ ಕೇಂದ್ರ ಸರ್ಕಾರವಾಗಲಿ ಅಥವಾ ಬಿಜೆಪಿಯವರಾಗಲಿ ಕ್ಷಮೆ ಕೇಳಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ನೀತಿಗಳು, ನಿರುದ್ಯೋಗ, ಆರ್ಥಿಕ ವೈಫಲ್ಯಗಳನ್ನು ನಾವು ಬಹಿರಂಗವಾಗಿ ಪ್ರಶ್ನಿಸುತ್ತಿರುವುದಕ್ಕೆ ಹಾಗೂ ಆರ್‌ಎಸ್‌ಎಸ್ ಅಸ್ತಿತ್ವ ಮತ್ತು ನೋಂದಣಿ ವಿಚಾರವಾಗಿ ನೇರ ಸವಾಲು ಹಾಕುತ್ತಿರುವುದಕ್ಕೆ ನಮ್ಮನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ರಾಜಕೀಯ ಪ್ರೇರಿತ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

You cannot copy content of this page

Exit mobile version