Home ರಾಜಕೀಯ “ಚಾರ್ಜ್‌ಶೀಟ್ ಇಲ್ಲ, ವಿಚಾರಣೆ ಇಲ್ಲ.. ಕೇವಲ ವ್ಯಕ್ತಿತ್ವ ಹರಣ ಅಷ್ಟೇ”: ಸತೀಶ್ ಜಾರಕಿಹೊಳಿ ವಿರುದ್ಧ ಶೋಧ...

“ಚಾರ್ಜ್‌ಶೀಟ್ ಇಲ್ಲ, ವಿಚಾರಣೆ ಇಲ್ಲ.. ಕೇವಲ ವ್ಯಕ್ತಿತ್ವ ಹರಣ ಅಷ್ಟೇ”: ಸತೀಶ್ ಜಾರಕಿಹೊಳಿ ವಿರುದ್ಧ ಶೋಧ ಕಾರ್ಯಾಚರಣೆಗೆ ಇ.ಡಿ ವಿರುದ್ಧ ವಿಜಯ್ ಮಲ್ಯ ವಾಗ್ದಾಳಿ

0

ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರು, ಆಪ್ತರು ಮತ್ತು ಸಂಬಂಧಿಕರಿಗೆ ಸೇರಿದ 21 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ಶೋಧ ಕಾರ್ಯಾಚರಣೆಯ ವಿವರಗಳು ಬಹಿರಂಗವಾದ ಬೆನ್ನಲ್ಲೇ ಉದ್ಯಮಿ ವಿಜಯ್ ಮಲ್ಯ ತನಿಖಾ ಸಂಸ್ಥೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಮಲ್ಯ, ಸಿಬಿಐ ಮತ್ತು ಇ.ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ವಿರುದ್ಧ ತನಿಖಾ ಸಂಸ್ಥೆಗಳು ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ದೂರಿದ್ದಾರೆ.

ಸತ್ಯ ತಿಳಿದುಕೊಳ್ಳಲು ಬಯಸುವವರಿಗೆ ಸಿಬಿಐ ಮತ್ತು ಇ.ಡಿ ಸೃಷ್ಟಿಸಿರುವ ಸುಳ್ಳುಗಳು ಹಾಗೂ ಆಧಾರರಹಿತ ಆರೋಪಗಳನ್ನು ಹಂತ ಹಂತವಾಗಿ ಬಹಿರಂಗಪಡಿಸುವುದಾಗಿ ಮಲ್ಯ ಹೇಳಿದ್ದಾರೆ. ತನಿಖಾ ಸಂಸ್ಥೆಗಳು ವಂಚನೆಯಲ್ಲಿ ಪರಿಣತಿ ಹೊಂದಿವೆ ಎಂದು ಅವರು ಆರೋಪಿಸಿದ್ದಾರೆ.

ಸುಳ್ಳು ಆರೋಪಗಳಿಗೆ ತಾನು ಯಾವುದೇ ಕಾರಣಕ್ಕೂ ಮಣಿಯುವುದಿಲ್ಲ. ದೃಢವಾಗಿ ಮತ್ತು ತಾಳ್ಮೆಯಿಂದ ನಿಂತಿರುವುದಾಗಿ ಹೇಳಿರುವ ಮಲ್ಯ, ತನಿಖಾ ಸಂಸ್ಥೆಗಳಿಂದ ತಪ್ಪಾಗಿ ಗುರಿಯಾಗಿರುವ ಇತರರ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ.

ಇ.ಡಿ ತನ್ನ ಕಾರ್ಯಾಚರಣೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುತ್ತಿರುವ ಬಗ್ಗೆಯೂ ಮಲ್ಯ ಪ್ರಶ್ನೆ ಎತ್ತಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ, ವಿಚಾರಣೆಯೂ ನಡೆದಿಲ್ಲ. ಆದರೆ ಸಾರ್ವಜನಿಕವಾಗಿ ವ್ಯಕ್ತಿತ್ವ ಹರಣ ಮಾಡುವ ರೀತಿಯಲ್ಲಿ ತನಿಖಾ ಸಂಸ್ಥೆ ನಡೆದುಕೊಳ್ಳುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ನ್ಯಾಯಯುತ ವಿಚಾರಣೆ ನಡೆಯದೇ ಇರುವಾಗ ತನಿಖಾ ಸಂಸ್ಥೆಯೊಂದು ತನ್ನ ಕ್ರಮಗಳನ್ನು ಈ ರೀತಿಯಲ್ಲಿ ಬಹಿರಂಗವಾಗಿ ಪ್ರಚಾರ ಮಾಡುವುದು ಸರಿಯೇ ಎಂದು ಪ್ರಶ್ನಿಸಿರುವ ಮಲ್ಯ, ಇಂತಹ ಬೆಳವಣಿಗೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಮಲ್ಯ ವಿರುದ್ಧದ ಪ್ರಕರಣ ಮುಂದುವರಿಯಲಿದೆ: ಇ.ಡಿ
ಇದರ ನಡುವೆ ವಿಜಯ್ ಮಲ್ಯ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲೂ ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದೆ.

ಮಲ್ಯ ಅವರು ಭಾರತದಲ್ಲಿನ ಕಾನೂನು ಪ್ರಕ್ರಿಯೆಯಿಂದ ಇನ್ನೂ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಬ್ಯಾಂಕ್‌ಗಳು ಬಾಕಿ ಹಣವನ್ನು ವಸೂಲಿ ಮಾಡಿಕೊಂಡಿರುವುದರಿಂದ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ರದ್ದಾಗುವುದಿಲ್ಲ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

2020ರಲ್ಲಿ ಮಲ್ಯ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ 8ರಂದು ಇ.ಡಿ ಪ್ರಮಾಣಪತ್ರ ಸಲ್ಲಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಬೇಕು ಎಂದು ಮಲ್ಯ ಮನವಿ ಮಾಡಿದ್ದರು.

ಬ್ಯಾಂಕ್‌ಗಳೊಂದಿಗಿನ ವಿವಾದ ಇತ್ಯರ್ಥವಾಗಿದ್ದು, ಬಾಕಿ ಹಣವೂ ವಸೂಲಿಯಾಗಿದೆ. ಹೀಗಾಗಿ ತಮ್ಮ ವಿರುದ್ಧದ ಪ್ರಕರಣಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬುದು ಮಲ್ಯ ಅವರ ವಾದವಾಗಿತ್ತು.

ಆದರೆ, ಬಾಕಿ ಹಣ ವಸೂಲಿಯಾಗಿರುವುದರಿಂದ ಅಕ್ರಮ ಹಣ ವರ್ಗಾವಣೆ ಆರೋಪದ ಅಪರಾಧ ಸ್ವರೂಪವೇ ಅಂತ್ಯಗೊಳ್ಳುವುದಿಲ್ಲ ಎಂಬ ನಿಲುವನ್ನು ಇ.ಡಿ ನ್ಯಾಯಾಲಯದ ಮುಂದೆ ಪ್ರತಿಪಾದಿಸಿದೆ.

ಇದರಿಂದ ಒಂದೆಡೆ ಇ.ಡಿ ವಿರುದ್ಧ ವಿಜಯ್ ಮಲ್ಯ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಅವರ ವಿರುದ್ಧದ ಕಾನೂನು ಪ್ರಕ್ರಿಯೆ ಮುಂದುವರಿಸುವುದಾಗಿ ತನಿಖಾ ಸಂಸ್ಥೆ ಸ್ಪಷ್ಟಪಡಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.

You cannot copy content of this page

Exit mobile version