Home ಅಪರಾಧ ಜೈಲಿನ ಸೆಲ್‌ನಲ್ಲಿ ಪೆನ್‌ಡ್ರೈವ್ ಬಳಕೆ; ಎಫ್‌ಎಸ್‌ಎಲ್ ವರದಿಯಲ್ಲಿ 100 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ

ಜೈಲಿನ ಸೆಲ್‌ನಲ್ಲಿ ಪೆನ್‌ಡ್ರೈವ್ ಬಳಕೆ; ಎಫ್‌ಎಸ್‌ಎಲ್ ವರದಿಯಲ್ಲಿ 100 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಜಪ್ತಿ ಮಾಡಲಾದ ಡಿಜಿಟಲ್ ಸಾಧನಗಳ ಎಫ್‌ಎಸ್‌ಎಲ್ ಪರೀಕ್ಷಾ ವರದಿಯಲ್ಲಿ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವುದು ದೃಢಪಟ್ಟಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಆಗಸ್ಟ್ 11ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ಜೈಲು ನಿಯಮಗಳನ್ನು ಉಲ್ಲಂಘಿಸಿ ನಿಷೇಧಿತ ವಸ್ತುಗಳನ್ನು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಸಹಕೈದಿ ಪ್ರತಾಪ್ ರಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಜಪ್ತಿ ಮಾಡಲಾದ ಮೊಬೈಲ್ ಮತ್ತು ಪೆನ್‌ಡ್ರೈವ್‌ಗಳನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಲಭ್ಯವಾಗಿರುವ ಎಫ್‌ಎಸ್‌ಎಲ್ ವರದಿಯ ಪ್ರಕಾರ, ಎರಡೂ ಸಾಧನಗಳಲ್ಲಿ ಒಟ್ಟು 173 ಫೈಲ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳೂ ಸೇರಿವೆ ಎನ್ನಲಾಗಿದೆ.

ಆದರೆ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೆನ್‌ಡ್ರೈವ್‌ನಲ್ಲಿ ಮಾತ್ರ ಸುಮಾರು 100 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿರುವುದು ತನಿಖೆಗೆ ಹೊಸ ತಿರುವು ನೀಡಿದೆ.

ಕೈದಿಗಳ ಮನರಂಜನೆಗಾಗಿ ಜೈಲಿನ ಕೊಠಡಿಗಳಲ್ಲಿ ಟಿವಿ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಅನ್ನು ಎಲ್‌ಇಡಿ ಟಿವಿಗೆ ಸಂಪರ್ಕಿಸಿ ವಿಡಿಯೋಗಳನ್ನು ವೀಕ್ಷಿಸಿದ್ದರು ಎಂಬುದು ಸಿಸಿಬಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.

ಆದಾಗ್ಯೂ, ಪೆನ್‌ಡ್ರೈವ್ ಅನ್ನು ನಿಖರವಾಗಿ ಯಾವ ಸಮಯದಲ್ಲಿ ಹಾಗೂ ಎಷ್ಟು ಬಾರಿ ಬಳಸಲಾಗಿದೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಸಾಧನಗಳ ಬಳಕೆಯ ಸಮಯ ಹಾಗೂ ಇತರ ತಾಂತ್ರಿಕ ವಿವರಗಳನ್ನು ಪತ್ತೆಹಚ್ಚಲು ಎಫ್‌ಎಸ್‌ಎಲ್ ತಜ್ಞರ ನೆರವನ್ನು ಪೊಲೀಸರು ಕೋರಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನೊಳಗೆ ನಿಷೇಧಿತ ಎಲೆಕ್ಟ್ರಾನಿಕ್ ಸಾಧನಗಳು ಹೇಗೆ ಪ್ರವೇಶಿಸಿದವು ಮತ್ತು ಅವುಗಳ ಬಳಕೆಗೆ ಅವಕಾಶ ಹೇಗೆ ದೊರೆಯಿತು ಎಂಬ ಪ್ರಶ್ನೆಗಳೂ ತನಿಖೆಯ ಕೇಂದ್ರಬಿಂದುವಾಗಿವೆ.

You cannot copy content of this page

Exit mobile version