Home ಅಪರಾಧ ಪಾವಗಡ ರೈತನ ಜಮೀನಿನಲ್ಲಿ 5 ಲಕ್ಷ ಕೊಡುವಂತೆ ಬೆದರಿಸಿ ನಕ್ಸಲರು ಬರೆದ ಪತ್ರ ಪತ್ತೆ: ನಕ್ಸಲ್...

ಪಾವಗಡ ರೈತನ ಜಮೀನಿನಲ್ಲಿ 5 ಲಕ್ಷ ಕೊಡುವಂತೆ ಬೆದರಿಸಿ ನಕ್ಸಲರು ಬರೆದ ಪತ್ರ ಪತ್ತೆ: ನಕ್ಸಲ್ ನಿಗ್ರಹ ದಳ ನಿಯೋಜನೆಗೆ ಸರ್ಕಾರ ಸಿದ್ಧತೆ

0

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಾಸಾಗರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು ಬರೆಯಲಾದ ‘ನಕ್ಸಲ್’ ಬೆದರಿಕೆ ಪತ್ರವೊಂದು ಪತ್ತೆಯಾಗಿದ್ದು, ಗಡಿ ಭಾಗದಲ್ಲಿ ತೀವ್ರ ಆತಂಕ ಹಾಗೂ ಭದ್ರತಾ ಕಳವಳವನ್ನು ಸೃಷ್ಟಿಸಿದೆ.

ತೆಲುಗು ಭಾಷೆಯಲ್ಲಿ ಕೈಬರಹದಲ್ಲಿರುವ ಈ ಪತ್ರದ ಮೇಲ್ಭಾಗದಲ್ಲಿ ‘ಸಿಪಿಐ (ಎಂಎಲ್), ಸಿಪಿಎಂ ಪೀಪಲ್ಸ್ ವಾರ್, ಜನಶಕ್ತಿ ಪಾರ್ಟಿ, ದೇವಣ್ಣ ದಳಂ’ ಎಂಬ ಶೀರ್ಷಿಕೆ ನೀಡಲಾಗಿದೆ. ಪತ್ರದಲ್ಲಿ ಕಣಿಕಲಬಂಡ ಸಮೀಪದ ಭೂ ಒತ್ತುವರಿ ಹಾಗೂ ರಾಜಕೀಯ ರೌಡಿಸಂ ವಿಚಾರಗಳನ್ನು ಪ್ರಸ್ತಾಪಿಸಲಾಗಿದ್ದು, ಜನಶಕ್ತಿ ಪಾರ್ಟಿಗೆ 5 ಲಕ್ಷ ರೂಪಾಯಿ ಪಕ್ಷದ ನಿಧಿ ನೀಡಬೇಕೆಂದು ‘ಕಾಮ್ರೆಡ್ ದೇವಣ್ಣ’ ಎಂಬ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ. ಒಂದು ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಥವಾ ನಾಟಕವಾಡಿದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದ್ದು, ಸೆಪ್ಟೆಂಬರ್ 16ರ ಬುಧವಾರದೊಳಗೆ ಹಣವನ್ನು ತಲುಪಿಸುವಂತೆ ಸೂಚಿಸಲಾಗಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗಳು ಅಥವಾ ಅವರ ಉಪಸ್ಥಿತಿ ಖಚಿತಪಟ್ಟರೆ ತಕ್ಷಣವೇ ನಕ್ಸಲ್ ನಿಗ್ರಹ ಪಡೆಯನ್ನು (ಎಎನ್‌ಎಫ್) ಸ್ಥಳಕ್ಕೆ ನಿಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಪತ್ರದಲ್ಲಿ ಉಲ್ಲೇಖಿಸಲಾಗಿರುವ ಹೆಸರುಗಳು ಹಾಗೂ ಫೋನ್ ಸಂಖ್ಯೆಯನ್ನು ಆಧರಿಸಿ, ಇದು ನೈಜ ನಕ್ಸಲರ ಕೃತ್ಯವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಕಿಡಿಗೇಡಿಗಳು ನಡೆಸಿದ ಸುಲಿಗೆ ಯತ್ನವೇ ಎಂಬ ಕೋನದಲ್ಲಿ ಪಾವಗಡ ಪೊಲೀಸರು ಪತ್ರದ ಅಸಲಿಯತ್ತಿನ ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version