Home ಬೆಂಗಳೂರು ರಾಜ್ಯದಲ್ಲಿ 40 ಇಂದಿರಾ ಕ್ಯಾಂಟೀನ್‌ಗಳು ಬಂದ್‌: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ರಾಜ್ಯದಲ್ಲಿ 40 ಇಂದಿರಾ ಕ್ಯಾಂಟೀನ್‌ಗಳು ಬಂದ್‌: ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

0

ಬೆಂಗಳೂರು: ರಾಜ್ಯದಲ್ಲಿ 40 ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಬಿದ್ದಿದ್ದು, ಮುಚ್ಚಿರುವ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದು ಬಡವರಿಗೆ ಗುಣಮಟ್ಟದ ಆಹಾರ ನೀಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯನವರು, ರಾಜ್ಯದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳನ್ನು ತೆರೆದು ಗುಣಮಟ್ಟದ ಊಟ-ತಿಂಡಿ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಒತ್ತಾಯಿಸುತ್ತೇನೆ. ಇದಕ್ಕೆ ತಪ್ಪಿದ್ದಲ್ಲಿ ನಾನೇ ಬಂದು ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದು ಒಂದು ನೆಪ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ದುರುದ್ದೇಶದಿಂದ ಕ್ಯಾಂಟೀನ್ ನ ಊಟ-ತಿಂಡಿಯ ಗುಣಮಟ್ಟವನ್ನು ಕೆಡಿಸುತ್ತಿದೆ. ಇದರ ಜೊತೆಗೆ ಕ್ಯಾಂಟೀನ್ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಬೆಂಗಳೂರು ನಗರದ ಎಲ್ಲ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಿತ್ತು. ಅವುಗಳಲ್ಲಿ ಈಗ 40 ಕ್ಯಾಂಟಿನ್ ಗಳು ಮುಚ್ಚಿವೆ. ಬೆಂಗಳೂರು ನಗರವೂ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಕ್ಯಾಂಟೀನ್ ಗಳನ್ನು ಕೂಡಾ ಒಂದೊಂದಾಗಿ ಮುಚ್ಚಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕ್ಯಾಂಟೀನ್ ಗುತ್ತಿಗೆಯ ನವೀಕರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಕಳೆದ ಆರು ತಿಂಗಳುಗಳಿಂದ ಬಿಬಿಎಂಪಿಗೆ ಕ್ಯಾಂಟೀನ್ ವೆಚ್ಚದ ಸಹಾಯಧನವನ್ನೂ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಗುತ್ತಿಗೆದಾರರು ಯಾವುದೇ ಕ್ಷಣದಲ್ಲಿ ಉಳಿದ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ನಿಲ್ಲಿಸಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್ ಗಾಗಿ 2017-18ರಲ್ಲಿ ರೂ. 100 ಕೋಟಿ ಮತ್ತು 2018-19ರಲ್ಲಿ ರೂ.145 ಕೋಟಿಗಳನ್ನು ಬಜೆಟ್ ನಲ್ಲಿ ನೀಡಿತ್ತು. ಆದರೆ 2022-23ರ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಹಣ ನೀಡದೆ ಖರ್ಚಿನ ಭಾರವನ್ನು ಬಿಬಿಎಂಪಿ ತಲೆ ಮೇಲೆ ಹೊರಿಸಿರುವುದೇ ಈಗಿನ ಹಣದ ಕೊರತೆಗೆ ಕಾರಣ ಎಂದರು.

ಬೆಲೆ ಏರಿಕೆಯಿಂದಾಗಿ ಬೆಂಗಳೂರು ಮಹಾನಗರದಲ್ಲಿ ಒಂದು ಊಟಕ್ಕೆ ಇಂದು 50-60 ರೂಪಾಯಿ ನೀಡಬೇಕಾಗಿದೆ. ನಗರದ ಬಡವರು ಮತ್ತು ಬೇರೆ ಊರುಗಳಿಂದ ಬಂದವರಿಗೆ ಅಕ್ಷಯಪಾತ್ರೆಯಂತಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿ ಅವರ ಶಾಪಕ್ಕೆ ಯಾಕೆ ತುತ್ತಾಗುತ್ತೀರಿ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ತನ್ನ ಮೊದಲ ಬಜೆಟ್ ನಲ್ಲಿ ಅನ್ನಪೂರ್ಣ ಹೆಸರಲ್ಲಿ ಬಡವರಿಗೆ ಕ್ಯಾಂಟೀನ್ ತೆರೆಯುತ್ತೇನೆ ಎಂದು ಘೋಷಿಸಿತ್ತು. ಆದರೆ ಒಂದೇ ಒಂದು ಹೊಸ ಕ್ಯಾಂಟೀನ್ ತೆರೆಯದ ನಾಲಾಯಕ್ ಬಿಜೆಪಿ ಸರ್ಕಾರ, ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಡಜನರ ಹೊಟ್ಟೆ ಮೇಲೆ ಯಾಕೆ ನಿಮ್ಮ ಕೆಂಗಣ್ಣು ಬೊಮ್ಮಾಯಿ ಅವರೇ? ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ದುಡ್ಡು ನೀಡದೆ ಬೀಗ ಹಾಕುತ್ತಿದ್ದೀರಿ, ಖಜಾನೆಯಲ್ಲಿ ದುಡ್ಡಿಲ್ಲದೆ ಇದ್ದರೆ ಸರ್ಕಾರಕ್ಕೆ ಬೀಗ ಹಾಕಿ ಹೊರಟುಬಿಡಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

You cannot copy content of this page

Exit mobile version