ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು 48 ಗಂಟೆಗಳೊಳಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (CJP) ಗುರುವಾರ ಎಚ್ಚರಿಕೆ ನೀಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಕಾರ್ಯವೈಖರಿ ದೇಶದ ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೀಪ್ಕೆ ಆರೋಪಿಸಿದರು. ಜ್ಞಾನೇಶ್ ಕುಮಾರ್ ಅವರನ್ನು ತೀವ್ರವಾಗಿ ಟೀಕಿಸಿದ ಅವರು, CEC ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
“48 ಗಂಟೆಗಳೊಳಗೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುತ್ತೇವೆ. ಅವರು ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ” ಎಂದು ದೀಪ್ಕೆ ಎಚ್ಚರಿಕೆ ನೀಡಿದರು. ದೆಹಲಿಯಲ್ಲಿ ‘ಜಂತರ್ ಮಂತರ್ 2.0’ ಮಾದರಿಯ ಪ್ರತಿಭಟನೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ.
SIR ಕುರಿತು ಚುನಾವಣಾ ಆಯೋಗದೊಳಗೆ ಆಕ್ಷೇಪ
CJPಯ ಈ ಬೇಡಿಕೆ ಹೊರಬಂದಿರುವ ಬೆನ್ನಲ್ಲೇ, ಚುನಾವಣಾ ಆಯೋಗದ ಮೂವರು ಸದಸ್ಯರ ನಡುವೆ SIR ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ ಎಂಬ ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಚರ್ಚೆಗೆ ಬಂದಿದೆ.
ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಸಂದರ್ಭಗಳಲ್ಲಿ ಚುನಾವಣಾ ಆಯೋಗದ ಕೆಲವು ನಿರ್ಧಾರಗಳು ಮತ್ತು ಕ್ರಮಗಳ ಕುರಿತು ಲಿಖಿತ ಆಕ್ಷೇಪ ದಾಖಲಿಸಿದ್ದರು. ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ, ಫಾರ್ಮ್-6ಗೆ ಸಂಬಂಧಿಸಿದ ಕ್ರಮಗಳು ಹಾಗೂ ಚುನಾವಣಾ ದತ್ತಾಂಶ ನಿರ್ವಹಣೆಯಂತಹ ವಿಷಯಗಳು ಈ ಆಕ್ಷೇಪಗಳಲ್ಲಿ ಸೇರಿದ್ದವು ಎಂದು ವರದಿ ತಿಳಿಸಿದೆ.
ಕೆಲವು ಸಂದರ್ಭಗಳಲ್ಲಿ ತಮ್ಮೊಂದಿಗೆ ಸಮರ್ಪಕವಾಗಿ ಚರ್ಚಿಸದೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿದೆ. ಚುನಾವಣಾ ದತ್ತಾಂಶಕ್ಕೆ ಸಂಬಂಧಿಸಿದ ಐಟಿ ವ್ಯವಸ್ಥೆಯ ನಿಯಂತ್ರಣ ಹಾಗೂ ಮೇಲ್ವಿಚಾರಣೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದಲೇ” ಎಂದ ಆಯೋಗ
ಆದರೆ, ಚುನಾವಣಾ ಆಯೋಗದ ಮೂಲಗಳು ಈ ಬೆಳವಣಿಗೆಯನ್ನು ಆಯೋಗದೊಳಗಿನ ವಿಭಜನೆ ಎಂದು ಪರಿಗಣಿಸುವುದನ್ನು ತಳ್ಳಿಹಾಕಿವೆ. SIR ಸೇರಿದಂತೆ ಚುನಾವಣಾ ಆಯೋಗ ಕೈಗೊಂಡ ಎಲ್ಲ ಪ್ರಮುಖ ನಿರ್ಧಾರಗಳಿಗೆ ಮೂವರು ಚುನಾವಣಾ ಆಯುಕ್ತರ ಅನುಮೋದನೆಯೂ ಇತ್ತು ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.
ಆಯೋಗದೊಳಗಿನ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳು, ಲಿಖಿತ ಅಭಿಪ್ರಾಯಗಳು ಮತ್ತು ಆಂತರಿಕ ಪರಿಶೀಲನೆಗಳು ಸಹಜ ಪ್ರಕ್ರಿಯೆಯ ಭಾಗವಾಗಿದ್ದು, ಅಂತಿಮ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂಬುದು ಚುನಾವಣಾ ಆಯೋಗದ ನಿಲುವಾಗಿದೆ.
CJPಯಿಂದ ಹಲವು ಬೇಡಿಕೆ
ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮಾತ್ರವಲ್ಲದೆ, SIR ಪ್ರಕ್ರಿಯೆಯನ್ನು ಹಿಂದಿನ ಸ್ಥಿತಿಗೆ ಮರಳಿಸಬೇಕು, SIRಗೆ ಸಂಬಂಧಿಸಿದ ದಾಖಲೆಗಳನ್ನು ಸುಪ್ರೀಂ ಕೋರ್ಟ್ ನೇತೃತ್ವದ ಸಮಿತಿಯ ವಶಕ್ಕೆ ನೀಡಬೇಕು ಹಾಗೂ ಮುಂಬರುವ ಚುನಾವಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಗಳನ್ನೂ CJP ಮುಂದಿಟ್ಟಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ 2023ರ ಕಾನೂನನ್ನು ಮರುಪರಿಶೀಲಿಸಬೇಕು ಎಂಬ ಬೇಡಿಕೆಯನ್ನೂ ಪಕ್ಷ ಮುಂದಿಟ್ಟಿದೆ.
ಇದೀಗ CJP ನೀಡಿರುವ 48 ಗಂಟೆಗಳ ಗಡುವು ಮತ್ತು ಚುನಾವಣಾ ಆಯೋಗದೊಳಗಿನ SIR ಸಂಬಂಧಿತ ಆಕ್ಷೇಪಗಳ ವರದಿ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.
