ಪತ್ರಕರ್ತೆಯರ ಮೇಲಿನ ಪೊಲೀಸ್ ದೌರ್ಜನ್ಯ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ 4PM ಸಂಪಾದಕ ಸಂಜಯ್ ಶರ್ಮಾ ಮನವಿ

ದೆಹಲಿ: ‘4PM ನ್ಯೂಸ್ ನೆಟ್‌ವರ್ಕ್’ ಸಂಸ್ಥೆಯ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದೆಹಲಿಯ ಸಾಕೇತ್ ಪೊಲೀಸ್ ಠಾಣೆಯಲ್ಲಿ ನಡೆದಿರುವ ಅಕ್ರಮ ಬಂಧನ, ಕಸ್ಟಡಿ ಹಿಂಸಾಚಾರ ಹಾಗೂ ಕೋಮು ಪ್ರಚೋದಕ ನಿಂದನೆ ಪ್ರಕರಣದ ತನಿಖೆಗೆ ಮಧ್ಯಪ್ರವೇಶಿಸುವಂತೆ ಕೋರಿ ಸುದ್ದಿ ಸಂಸ್ಥೆಯ ಮುಖ್ಯ ಸಂಪಾದಕ ಸಂಜಯ್ ಶರ್ಮಾ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತುರ್ತು ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಸಚಿವರ ವಿವಿಐಪಿ ಭೇಟಿಯ ಹಿನ್ನೆಲೆಯಲ್ಲಿ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳದಲ್ಲಿ ನಡೆಸಲಾಗುತ್ತಿದ್ದ ಸ್ವಚ್ಛತಾ ಕಾರ್ಯವನ್ನು ವರದಿ ಮಾಡುತ್ತಿದ್ದಾಗ, ಯಾವುದೇ ಮುನ್ಸೂಚನೆಯಿಲ್ಲದೆ ಇಬ್ಬರು ಪತ್ರಕರ್ತೆಯರನ್ನು ಬಲವಂತವಾಗಿ ಠಾಣೆಗೆ ಎಳೆದುಕೊಂಡು ಹೋಗಲಾಗಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ ಪೊಲೀಸರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಮುಸ್ಲಿಂ ಧಾರ್ಮಿಕ ಗುರುತನ್ನು ತಿಳಿದುಕೊಂಡು ಅವಾಚ್ಯವಾಗಿ ಜಾತಿ-ಮತೀಯ ನಿಂದನೆ ಮಾಡಿದ್ದಾರೆ. ಇದು ಸಂವಿಧಾನದ 19(1)(ಎ), 14, 15, 21 ಮತ್ತು 22ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸುಪ್ರೀಂ ಕೋರ್ಟ್‌ನ ‘ಡಿ.ಕೆ. ಬಸು’ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಾಷ್ಟ್ರಪತಿಗಳಿಗೆ ಕಳುಹಿಸಿರುವ ಮನವಿಯಲ್ಲಿ, ಸಾಕೇತ್ ಠಾಣಾಧಿಕಾರಿಯನ್ನು (ಎಸ್‌ಎಚ್‌ಒ) ತಕ್ಷಣವೇ ಅಮಾನತುಗೊಳಿಸಬೇಕು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 127, 115, 351(2), 196ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಜತೆಗೆ, ಸುಪ್ರೀಂ ಕೋರ್ಟ್ ಆದೇಶದಂತೆ ಸಾಕೇತ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣವೇ ಸಂರಕ್ಷಿಸಲು, ದೆಹಲಿ ಪೊಲೀಸ್ ಕಮಿಷನರ್ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸಲು ಮತ್ತು ಸಂತ್ರಸ್ತ ಪತ್ರಕರ್ತೆಯರಿಗೆ ಸೂಕ್ತ ಪರಿಹಾರ ಒದಗಿಸಲು ಆದೇಶಿಸುವಂತೆ ರಾಷ್ಟ್ರಪತಿಗಳನ್ನು ಕೋರಲಾಗಿದೆ. “ಪೊಲೀಸ್ ಬಲದಿಂದ ಪತ್ರಕರ್ತರ ಪ್ರಶ್ನೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಈ ಸಾಂವಿಧಾನಿಕ ಹೋರಾಟವನ್ನು ಅಂತ್ಯದವರೆಗೆ ಕೊಂಡೊಯ್ಯುತ್ತೇವೆ” ಎಂದು ಸಂಜಯ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು