ಚೆನ್ನೈ: ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೇಟ್ ಆಟಗಾರ್ತಿಯರು 603 ರನ್ ಗಳಿಸುವ ಮೂಲಕ ವಿಶ್ವದಲ್ಲೇ ನೂತನ ದಾಖಲೆ ನಿರ್ಮಿಸಿದ್ದಾರೆ.
ಚನೈ ಎಂ.ಎ ಚಿದಂಬರಂ ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ. ಆ ಮೂಲಕ ಮಹಿಳಾ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಭಾಜನವಾಯಿತು. ಅಲ್ಲದೆ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡವೆಂಬ ಕೀರ್ತಿಗೆ ಪಾತ್ರವಾಯಿತು.
ಮೊದಲ ದಿನದಾಟದಲ್ಲಿ ಶೆಫಾಲಿ ವರ್ಮಾ ಚೊಚ್ಚಲ ದ್ವಿಶತಕ (205) ಗಳಿಸಿದರೆ, ಸ್ಮೃತಿ ಮಂದಾನ (149) ಎರಡನೇ ಶತಕ ಸಾಧನೆ ಮಾಡಿದರು. ಅಲ್ಲದೆ ಮೊದಲ ವಿಕೆಟ್‌ಗೆ ದಾಖಲೆಯ 292 ರನ್ ಪೇರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ (194 ಎಸೆತ) ಗಳಿಸಿದ ಹಿರಿಮೆಗೂ ಶೆಫಾಲಿ ಭಾಜರಾದರು.ಮೊದಲ ದಿನದಾಟದಲ್ಲಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿತು. ಇದು ಒಂದೇ ದಿನದಾಟದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ಎರಡನೇ ದಿನದಾಟದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (69) ಹಾಗೂ ರಿಚಾ ಘೋಷ್ (86) ಅರ್ಧಶತಕಗಳ ಸಾಧನೆ ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಜೆಮಿಮಾ ರಾಡ್ರಿಗಸ್ ಸಹ ಅರ್ಧಶತಕ (55) ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ಇದುವರೆಗಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ (ಇನಿಂಗ್ಸ್):
ಭಾರತ 603/6 ಡಿ.: ದಕ್ಷಿಣ ಆಫ್ರಿಕಾ ವಿರುದ್ಧ, ಚೆನ್ನೈ (2024)
ಆಸ್ಟ್ರೇಲಿಯಾ 575/9 ಡಿ.: ದಕ್ಷಿಣ ಆಫ್ರಿಕಾ ವಿರುದ್ಧ, ಪರ್ತ್ (2024)
ಆಸ್ಟ್ರೇಲಿಯಾ 569/6 ಡಿ.: ಇಂಗ್ಲೆಂಡ್ ವಿರುದ್ಧ, ಗಿಲ್ಡ್‌ಫಾರ್ಡ್ (1998)
ಆಸ್ಟ್ರೇಲಿಯಾ 525: ಭಾರತ ವಿರುದ್ಧ, ಅಹಮದಾಬಾದ್ (1984)
ನ್ಯೂಜಿಲೆಂಡ್ 517/8: ಇಂಗ್ಲೆಂಡ್ ವಿರುದ್ಧ, ಸ್ಕಾರೋಫ್ (1996)