ಕೈ ಪಂಪ್ ಮೂಲಕ ನೀರು ತುಂಬಿಸುವಾಗ ಮೇಲ್ವರ್ಗದ ವ್ಯಕ್ತಿಯೊಬ್ಬರ ಬಕೆಟ್ ಅನ್ನು ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ ಬಾಲಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ.
ಬಾಲಕನ ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಜಸ್ಥಾನದ ಅಲ್ವಾರ್ ಎನ್ನುವಲ್ಲಿಂದ ಈ ಘಟನೆ ವರದಿಯಾಗಿದೆ.
ಹಲ್ಲೆಗೆ ಒಳಗಾದ ಬಾಲಕನನ್ನು ನಾಲ್ಕನೇ ತರಗತಿಯ ವಿದ್ಯಾರ್ಥಿ ಚಿರಾಗ್ಎಂದು ಗುರುತಿಸಲಾಗಿದೆ. ಅವನು ಶನಿವಾರದಂದು ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿರುವ ತನ್ನ ಶಾಲೆಯಲ್ಲಿ ಅಳವಡಿಸಲಾಗಿರುವ ಹ್ಯಾಂಡ್ ಪಂಪಿನಿಂದ ನೀರು ತರಲು ಹೋದಾಗ ಈ ಘಟನೆ ನಡೆದಿದೆ.
ಬಾಲಕನ ತಂದೆ ಪನ್ನಾಲಾಲ್ ದೂರಿನಲ್ಲಿ, ತನ್ನ ಮಗ ನೀರು ತುಂಬುತ್ತಿದ್ದಾಗ ಆಕಸ್ಮಿಕವಾಗಿ ರಟ್ಟಿರಾಮ್ ಠಾಕೂರ್ ಎಂಬುವರಿಗೆ ಸೇರಿದ ಬಕೆಟ್ ಮುಟ್ಟಿದ. ಇದರಿಂದ ಕೋಪಗೊಂಡ ಠಾಕೂರ್ ಬಾಲಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಬಕೆಟ್ ಹೇಗೆ ಮುಟ್ಟಿದೆ ಎಂದು ಪ್ರಶ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ನಂತರ ಬಾಲಕ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ತಿಳಿಸಿದ್ದು, ಬಾಲಕನ ಕುಟುಂಬದವರು ಠಾಕೂರ್ ಮನೆಗೆ ಹೋಗಿ ಈ ಕುರಿತು ವಿಚಾರಿಸಿದಾಗ, ನೀವು ಕೆಳಜಾತಿಯವರು ಎಂದು ನಿಂದಿಸಿದ್ದಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಕುರಿತು ಕುಟುಂಬಸ್ಥರು ಶಾಲಾ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ, ಅವರು ಇದು ಪೊಲೀಸರಿಗೆ ವಿಷಯ ಎಂದು ಹೇಳಿ ಠಾಣೆಗೆ ಕಳುಹಿಸಿದ್ದಾರೆ.
ಕುಟುಂಬಸ್ಥರು ರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತಂಡವನ್ನೂ ರಚಿಸಿದ್ದಾರೆ.
ಕಳೆದ ವರ್ಷ ಇದೇ ರೀತಿಯ ಘಟನೆಯಲ್ಲಿ ಜಲೋರ್ ಜಿಲ್ಲೆಯ ಶಾಲೆಯೊಂದರಲ್ಲಿ ಮಡಕೆಯನ್ನು ಮುಟ್ಟಿದ್ದಕ್ಕಾಗಿ ದಲಿತ ವಿದ್ಯಾರ್ಥಿಯ ಮೇಲೆ ದೈಹಿಕ ಹಲ್ಲೆ ನಡೆಸಲಾಗಿತ್ತು.