ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ಬೀಸಿದ ಚಂಡಮಾರುತವು ಭಾರಿ ಅವಾಂತರವನ್ನು ಸೃಷ್ಟಿಸಿದೆ. ಈ ಭಾರಿ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಜಲಪಾಯ್‌ಗುರಿ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದಿವೆ. ಚಂಡಮಾರುತದಿಂದಾಗಿ ಐವರು ಸಾವನ್ನಪ್ಪಿದ್ದಾರೆ.
ಸುಮಾರು 500 ಮಂದಿ ಗಾಯಗೊಂಡಿದ್ದಾರೆ. ಗುಡಿಸಲುಗಳು ಕುಸಿದು ಮರಗಳು ಧರೆಗುರುಳಿವೆ. ಭಾನುವಾರ ರಾತ್ರಿ ಸಿಎಂ ಮಮತಾ ಬ್ಯಾನರ್ಜಿ ಅವರು ಬಾಗ್ಡೋಗ್ರಾ ಪ್ರದೇಶದಲ್ಲಿ ಚಂಡಮಾರುತದ ಪರಿಸ್ಥಿತಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಿ ಯಂತ್ರಕ್ಕೆ ಆದೇಶ ನೀಡಲಾಗಿದೆ. ಸಂತ್ರಸ್ತರಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳು ಪರಿಹಾರ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಗಾಯಗೊಂಡವರ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳು ಶ್ರಮಿಸುತ್ತಿವೆ. ಚಂಡಮಾರುತದ ಪ್ರಭಾವ ತೀವ್ರವಾಗಿರುವಲ್ಲಿ ಅಧಿಕಾರಿಗಳು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಜಲ್ಪೈಗುರಿ ಮತ್ತು ಪಕ್ಕದ ಅಲಿಯುಪುರ್ದೂರ್ ಕೂಚ್ ಬೆಹಾರ್ ಜಿಲ್ಲೆಗಳ ಕೆಲವು ಭಾಗಗಳು ಸೌಮ್ಯ ಚಂಡಮಾರುತ ಮತ್ತು ಆಲಿಕಲ್ಲು ಮಳೆಯಿಂದ ಪ್ರಭಾವಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಅಲ್ಲಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.